ಒಳಮೀಸಲು ಚರ್ಚೆಗೆ 16ಕ್ಕೆ ವಿಶೇಷ ಸಂಪುಟ ಸಭೆ

| N/A | Published : Aug 08 2025, 01:01 AM IST / Updated: Aug 08 2025, 05:47 AM IST

Vidhan soudha
ಒಳಮೀಸಲು ಚರ್ಚೆಗೆ 16ಕ್ಕೆ ವಿಶೇಷ ಸಂಪುಟ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಕುರಿತ ನಿವೃತ್ತ ನ್ಯಾ. ಎಚ್.ಎನ್‌. ನಾಗಮೋಹನ್‌ದಾಸ್‌ ಆಯೋಗದ ವರದಿಯನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ಈ ಕುರಿತು ಅಂತಿಮ ನಿರ್ಧಾರ ಮಾಡಲು ಆ.16ರ ಶನಿವಾರ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ.

  ಬೆಂಗಳೂರು :  ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಕುರಿತ ನಿವೃತ್ತ ನ್ಯಾ. ಎಚ್.ಎನ್‌. ನಾಗಮೋಹನ್‌ದಾಸ್‌ ಆಯೋಗದ ವರದಿಯನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ಈ ಕುರಿತು ಅಂತಿಮ ನಿರ್ಧಾರ ಮಾಡಲು ಆ.16ರ ಶನಿವಾರ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿ, ಎಸ್ಸಿಗೆ ಮೀಸಲಾಗಿರುವ ಶೇ.17ರಷ್ಟು ಮೀಸಲಾತಿಯನ್ನು ಪ್ರವರ್ಗವಾರು ವಿಂಗಡಿಸಲು ನ್ಯಾ. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗ ವರದಿ ನೀಡಿದೆ.

ಈ ವರದಿ ಅನುಷ್ಠಾನ ಮಾಡುವ ಸಲುವಾಗಿ ಗುರುವಾರದ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸಲಾಗಿದ್ದು, ಪ್ರಾಥಮಿಕ ಚರ್ಚೆ ನಡೆದಿದೆ. ನ್ಯಾ। ನಾಗಮೋಹನ್‌ದಾಸ್‌ ಆಯೋಗದ ಸಮಗ್ರ ಸಮೀಕ್ಷೆಯ ಅಂಕಿ-ಅಂಶಗಳ ಆಧಾರದ ಮೇಲೆ ಒಳ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. 2027ರಲ್ಲಿ ಕೇಂದ್ರ ಸರ್ಕಾರವು ಜಾತಿಗಣತಿ ನಡೆಸಿದಾಗ ಬರುವ ಅಂಕಿ-ಅಂಶಗಳ ಆಧಾರದ ಮೇಲೆ ಮರು ವರ್ಗೀಕರಣ ಮಾಡಲಾಗುತ್ತದೆಯೇ? ಎಂಬ ಕುರಿತು ಕೆಲ ಸದಸ್ಯರು ಅನುಮಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಹೀಗಾಗಿ ವರದಿಯಲ್ಲಿರುವ ಎಲ್ಲಾ ಅಂಶಗಳನ್ನು ಮೊದಲು ಎಲ್ಲಾ ಸಚಿವರು ಅಧ್ಯಯನ ನಡೆಸಬೇಕು. ಆ.16 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಭಾಗವಹಿಸಿ ವಿಸ್ತೃತವಾಗಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಮಾಡಬಹುದು ಎಂದು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್‌, ಒಳ ಮೀಸಲಾತಿ ಕುರಿತು ವರದಿ ಮಂಡನೆಯಾಗಿದೆ. ಎಲ್ಲಾ ಸಚಿವರಿಗೂ ವರದಿ ನೀಡಿದ್ದು, ಆ.16 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡುವುದಾಗಿ ಸ್ಪಷ್ಟಪಡಿಸಿದರು.

ಸಭೆಯಲ್ಲಿ ವರದಿಯಲ್ಲಿನ ಮೀಸಲಾತಿ ಶಿಫಾರಸುಗಳ ಬಗ್ಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ಆದರೆ, ಶೇ.92 ರಷ್ಟು ಜನಸಂಖ್ಯೆಯನ್ನು ಸಮೀಕ್ಷೆ ನಡೆಸಿ ವರದಿ ನೀಡಲಾಗಿದೆ. ವರದಿಯಲ್ಲಿ ಗೊಂದಲಗಳು ಇದ್ದರೂ ಅದನ್ನು ಅನುಸರಿಸಿಕೊಂಡು ಯಾವುದೇ ಸಮಸ್ಯೆಯಾಗದಂತೆ ವರದಿ ಅನುಷ್ಠಾನ ಮಾಡಬೇಕು. ಹೀಗಾಗಿ ಯಾವುದೇ ಅನುಮಾನಗಳಿದ್ದರೂ ಮಾಧ್ಯಮಗಳ ಎದುರು ಹೇಳಿಕೆ ನೀಡದೆ ಮುಂದಿನ ಸಂಪುಟ ಸಭೆಯಲ್ಲೇ ಪ್ರಸ್ತಾಪಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಐದು ಪ್ರವರ್ಗಗಳಾಗಿ ಪರಿಶಿಷ್ಟ ಜಾತಿ ವಿಂಗಡಣೆ:

ಈ ಹಿಂದೆ ನ್ಯಾ.ಎ.ಜೆ. ಸದಾಶಿವ ಅವರ ಆಯೋಗವು ಎಡಗೈ, ಬಲಗೈ, ಸ್ಪೃಶ್ಯರು ಹಾಗೂ ಅಲೆಮಾರಿ ಸೇರಿದಂತೆ ಇತರೆ ಎಂಬ ನಾಲ್ಕು ಪ್ರವರ್ಗಗಳನ್ನು ರಚಿಸಿತ್ತು. ಪ್ರತಿ ಬಾರಿಯೂ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಸಮುದಾಯಗಳನ್ನು ಯಾವ ಪ್ರವರ್ಗಕ್ಕೆ ಸೇರಿಸಬೇಕು ಎಂಬ ಗೊಂದಲ ಇತ್ತು.

ಇದೀಗ ನ್ಯಾ। ನಾಗಮೋಹನ್‌ದಾಸ್‌ ಆಯೋಗವು ಪರಿಶಿಷ್ಟ ಜಾತಿಯ 101 ಸಮುದಾಯಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿದ್ದು, ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಸೇರಿ ಮೂರು ಜಾತಿಗಳನ್ನು ಐದನೇ ಪ್ರವರ್ಗವಾಗಿ (ಇ) ಪ್ರತ್ಯೇಕಿಸಿದೆ.

 ಯಾವ್ಯಾವ ಪ್ರವರ್ಗದಲ್ಲಿ ಎಷ್ಟು ಜಾತಿ?

ಪ್ರವರ್ಗ -ಎ : ಅತ್ಯಂತ ಹಿಂದುಳಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 59 ಸಣ್ಣಪುಟ್ಟ ಸಮುದಾಯ

ಪ್ರವರ್ಗ- ಬಿ: ಹೆಚ್ಚು ಹಿಂದುಳಿದ ಮಾದಿಗ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಹೊಂದಿರುವ 18 ಸಮುದಾಯ

ಪ್ರವರ್ಗ- ಸಿ: ಹಿಂದುಳಿದ ಹೊಲೆಯ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿ ಇರುವ 17 ಜಾತಿ

ಪ್ರವರ್ಗ -ಡಿ: ಕಡಿಮೆ ಹಿಂದುಳಿದ ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯ.

ಪ್ರವರ್ಗ - ಇ: ಆದಿದ್ರಾವಿಡ, ಆದಿ ಕರ್ನಾಟಕ ಹಾಗೂ ಆದಿ ಆಂಧ್ರ

 ----

ಪ್ರವರ್ಗ - ಎಸ್ಸಿ ಜಾತಿಗಳ ಸಂಖ್ಯೆ- ಜನಸಂಖ್ಯೆ - %ಜನಸಂಖ್ಯೆ - ಶಿಫಾರಸ್ಸಾದ ಮೀಸಲಾತಿ

ಪ್ರವರ್ಗ-ಎ - 59 - 5,22,099- 4.97 - ಶೇ.1

ಪ್ರವರ್ಗ -ಬಿ- 18 - 36,69,246 - 34.91 - ಶೇ.6

ಪ್ರವರ್ಗ -ಸಿ - 17 - 30,08,633 - ಶೇ.28.63 - ಶೇ.5

ಪ್ರವರ್ಗ-ಡಿ- 04- 28,34,939- 26.97- ಶೇ.4

ಪ್ರವರ್ಗ-ಇ - 03 - 4,74,954- 4.52 - ಶೇ.1

ಒಟ್ಟು - 101- 1,05,09,871 - ಶೇ.100- ಶೇ.17

--

ಒಳ ಮೀಸಲಾತಿ ವರದಿ ಅಂಕಿ ಅಂಶ

ಸಮೀಕ್ಷೆ ನಡೆಸಿದ್ದ ಅವಧಿ: 60 ದಿನ (ಮೇ.5 ರಿಂದ ಜು.6)

- 1,766 ಪುಟಗಳ ವರದಿ

- ಸಮೀಕ್ಷೆಗೆ ಒಳಪಟ್ಟ ಎಸ್ಸಿ ಕುಟುಂಬ: 27,24,768

- ಸಮೀಕ್ಷೆಯಲ್ಲಿ ಭಾಗಿಯಾದ ಜನ: 1,05,09,871 (1.05 ಕೋಟಿ)

1% ಪ್ರವರ್ಗ ಎ: ಅತ್ಯಂತ ಹಿಂದುಳಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 59 ಸಣ್ಣಪುಟ್ಟ ಸಮುದಾಯ 

6% ಪ್ರವರ್ಗ ಬಿ: ಹೆಚ್ಚು ಹಿಂದುಳಿದ ಮಾದಿಗ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಹೊಂದಿರುವ 18 ಸಮುದಾಯ-

5% ಪ್ರವರ್ಗ ಸಿ: ಹಿಂದುಳಿದ ಹೊಲೆಯ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿ ಇರುವ 17 ಜಾತಿ

 4% ಪ್ರವರ್ಗ ಡಿ: ಕಡಿಮೆ ಹಿಂದುಳಿದ ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯ 

1% ಪ್ರವರ್ಗ ಇ: ಆದಿದ್ರಾವಿಡ, ಆದಿ ಕರ್ನಾಟಕ ಹಾಗೂ ಆದಿ ಆಂಧ್ರ

Read more Articles on