ಬಿಜಿಎಸ್ ಬಿಇಡಿ ಕಾಲೇಜಿನಲ್ಲಿ ನೇತಾಜಿ ಜನ್ಮದಿನಾಚರಣೆ

| Published : Jan 24 2025, 12:48 AM IST

ಸಾರಾಂಶ

ಸ್ವಾಮಿ ವಿವೇಕಾನಂದರ ತತ್ತ್ವಗಳ ಪ್ರಚಾರದಲ್ಲಿ ಭಾರತೀಯರ ಸ್ವಾಭಿಮಾನವು ಜಾಗೃತಗೊಂಡಿತು.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಬಿ.ಜಿ.ಎಸ್. ಬಿ.ಇಡಿ ಕಾಲೇಜಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ನಡೆಯಿತು.ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ.ಎ.ಎನ್. ಸಂತೋಷ್ ಮಾತನಾಡಿ, ಸುಭಾಸ್ ಚಂದ್ರ ಬೋಸ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಭಾವ ಬೀರುವಂತೆ ವಿಚಾರ ಮಂಡಿಸಿದರು.19ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತದಿಂದ ಉಂಟಾದ ದುಷ್ಪರಿಣಾಮಗಳ ವಿರುದ್ಧ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ಹಲವು ಹೋರಾಟಗಳು ನಡೆದು ಬ್ರಿಟಿಷರ ನಿದ್ದೆಗೆಡಿಸಿದ್ದರೂ ಪೂರ್ಣ ಫಲಪ್ರದಾಯವಾಗಿರಲಿಲ್ಲ. ಸ್ವಾಮಿ ವಿವೇಕಾನಂದರ ತತ್ತ್ವಗಳ ಪ್ರಚಾರದಲ್ಲಿ ಭಾರತೀಯರ ಸ್ವಾಭಿಮಾನವು ಜಾಗೃತಗೊಂಡಿತು. ಅಂತಹ ಸಮಯದಲ್ಲಿ ಸ್ವಾಮಿ ವಿವೇಕಾನಂದರ ಮಾನಸಿಕ ಶಿಷ್ಯರಾದ ನೇತಾಜಿ ಅವರು 1897ರಲ್ಲಿ ಜಾನಕಿನಾಥ ಬೋಸ್ ಮತ್ತು ಪ್ರಭಾವತಿ ದೇವಿ ದಂಪತಿಗಳಿಗೆ 9ನೇ ಮಗನಾಗಿ ಜನಿಸಿದ್ದಾಗಿ ಹೇಳಿದರು.ಸುಭಾಷ್ ಬಾಲಕನಾಗಿದ್ದಾಗಿನಿಂದಲೂ ಆಧ್ಯಾತ್ಮ ಜೀವಿಯಾಗಿದ್ದು, ಬೆಳೆದಂತೆ ಅವರ ಆಧ್ಯಾತ್ಮದ ಸೆಳೆತವು ಹೆಚ್ಚಾಗುತ್ತಾ ದೇಶ ಪ್ರೇಮವೂ ಕೂಡ ಅಖಂಡವಾಗಿ ಬೆಳೆಯಿತು. ಸಮಾಜ ಸೇವೆಯೊಂದಿಗೆ ರೋಗ ರುಜಿನಗಳಿಗೆ ತುತ್ತಾದ ಜನಗಳ ಸೇವೆ ಮಾಡುತ್ತಾ ಕ್ರಾಂತಿಕಾರಿ ಯುವಕರಿಗೆ ಸಹಾಯ ಮಾಡುತ್ತಿದ್ದರು. ಇಂಗ್ಲೆಂಡಿನಲ್ಲಿದ್ದಾಗ ಅಂದಿನ ನಾಯಕರಾದ ಚಿತ್ತರಂಜನ ದಾಸ್ ಅವರೊಂದಿಗೆ ಪತ್ರ ವ್ಯವಹಾರದ ಮೂಲಕ ದೇಶ ಕಟ್ಟುವ ವಿಚಾರ ನಡೆಸುತ್ತಿದ್ದರು. ಐಸಿಎಸ್ಪದವಿ ಧಿಕ್ಕರಿಸಿ ಪೂರ್ಣ ಪ್ರಮಾಣದಲ್ಲಿ ದೇಶ ಸೇವೆಗೆ ಇಳಿದರು. ಮುಂದೆ ಗಾಂಧೀಜಿ ಹಾಗೂ ಕಾಂಗ್ರೆಸ್ಸಿನೊಂದಿಗೆ ತೊಡಗಿಸಿಕೊಂಡಿದ್ದಾಗಿ ಹೇಳಿದರು.ಸ್ವದೇಶಿ ಸಂವಿಧಾನದ ಅವಶ್ಯಕತೆ ಕುರಿತು ರೂಪುರೇಷೆಗಳನ್ನು 1928 ರಲ್ಲಿ ನೀಡಿದರು. ಬಂಗಾಳದ ಕಾರ್ಪೊರೇಷನ್ ನಲ್ಲಿ ಸಿಇಒ ಆಗಿದ್ದಾಗ ಕಡ್ಡಾಯ ಪ್ರಾಥಮಿಕ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ ಹಾಗೂ ಆಹಾರ ವ್ಯವಸ್ಥೆಗಳನ್ನು ಮಾಡಿ ಆ ಪ್ರಾಂತ್ಯಗಳ ಸ್ವಾವಲಂಬನೆಗೆ ಕಾರಣಕರ್ತರಾದರು. ಮಹಾನ್ ದೇಶಪ್ರೇಮಿಯಾಗಿದ್ದ ನೇತಾಜಿ ಅವರು ತಮ್ಮ ಜೀವನದಲ್ಲಿ 11 ಬಾರಿ ಜೈಲುವಾಸ ಅನುಭವಿಸಿದರು. ನೇತಾಜಿ ಅವರ ಸ್ವತಂತ್ರ್ಯಗೊಳಿಸುವ ಕಲ್ಪನೆ ಹಾಗೂ ಸ್ವತಂತ್ರ್ಯಗಳಿಸಿದ ಮೇಲೆ ಸರ್ಕಾರ ನಡೆಸಬೇಕಾದ ಅವರ ಕಲ್ಪನೆಗಳು ಅತ್ಯಂತ ಸ್ಫೂರ್ತಿದಾಯಕ ಎಂದು ಅರಿತುಕೊಳ್ಳುವಲ್ಲಿ ಸಹಾಯಕವಾಗಿದೆ ಎಂದು ಅವರು ತಿಳಿಸಿದರು.ನೇತಾಜಿ ಅವರ ಸಾಹಸ ಮತ್ತು ಅಜಾದ್ ಹಿಂದ್ ಸರ್ಕಾರವು ನಡೆಸಿದ ಸ್ವತಂತ್ರ ಅಭಿಯಾನ ಮತ್ತು ಯುದ್ಧಗಳು 1946 ನೌಕಾ ಬಂಡಾಯಕ್ಕೆ ಸ್ಫೂರ್ತಿ ಹಾಗೂ ನೇರ ಪರಿಣಾಮವಾಗಿದ್ದು ಭಾರತಕ್ಕೆ ಸ್ವತಂತ್ರ ಗಳಿಸಿಕೊಡಲು ನೆರವಾಯಿತು. ಆದ್ದರಿಂದ 1946ರ ನೌಕಾ ಬಂಡಾಯವನ್ನು ಲಾಸ್ಟ್ವಾರ್ಆಫ್ಇಂಡಿಪೆಂಡೆನ್ಸ್ಎಂದು ಹಲವರು ಕರೆದಿದ್ದಾರೆ. ನೇತಾಜಿ ಅವರು ಬ್ರಿಟಿಷರು ಉತ್ಕೃಷ್ಟಗೊಳಿಸಿದ ಜಾತಿ ಒಡಕುಗಳ ಮಧ್ಯೆ ರಾಷ್ಟ್ರೀಯ ಐಕ್ಯತೆ ಸಾಧಿಸುವಲ್ಲಿ ಮತ್ತು ಭಾರತದ ಯೋಜನಾ ಆಯೋಗ ರಕ್ಷಿಸಲು ಸಣ್ಣ, ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳ ಅವಶ್ಯಕತೆಯನ್ನು ಮನಗಂಡು ವೈಜ್ಞಾನಿಕ ಶಿಕ್ಷಣವು ಜನತೆಗೆ ಅವಶ್ಯಕ ಎಂದು ತಿಳಿಸಿದರು.ನೇತಾಜಿ ಅವರ ಈ ಎಲ್ಲಾ ಕೆಲಸಗಳು ಸ್ವತಂತ್ರ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಈ ರೀತಿಯಾಗಿ ಭಾರತಕ್ಕೆ ಸ್ವತಂತ್ರಗೊಳಿಸಿಕೊಡುವುದರ ಜೊತೆಗೆ ಭಾರತೀಯ ಮಹರ್ಷಿಗಳ ಜೀವನ ಶೈಲಿ ಅಳವಡಿಸಿಕೊಂಡು ಜೀವಿಸಿದ ನೇತಾಜಿ ಅವರು ತಮ್ಮ ಜೀವನದಲ್ಲಿ ಎದುರಾದ ಕಷ್ಟಕೋಟಲೆಗಳು ಹಾಗೂ ಅಪಪ್ರಚಾರದ ನಡುವೆಯೂ ಭಾರತಕ್ಕೆ ಸ್ವತಂತ್ರ ತಂದು ಕೊಡುವಲ್ಲಿ ಐಎನ್ಎ ಸೈನ್ಯದ ಮೂಲಕ ಅವಿರತವಾಗಿ ಶ್ರಮಿಸಿದ್ದಾಗಿ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜು ಮಾತನಾಡಿ, ಸುಭಾಷ್ ಚಂದ್ರ ಬೋಸ್ ಅವರ ಆದರ್ಶ ದೇಶಪ್ರೇಮ ಹಾಗೂ ಸಾಹಸಗುಣಗಳನ್ನು ಅಳವಡಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.