ಸಾರಾಂಶ
ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಕ್ರಮ । ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವ । ಮಳೆಯ ನಡುವೇ ಭಕ್ತರ ಸೇವೆ
ಕನ್ನಡಪ್ರಭ ವಾರ್ತೆ ಹನೂರು
ಅಮಾವಾಸ್ಯೆ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪೂಜಾ ಕಾರ್ಯಕ್ರಮ ಸಾಲೂರು ಬೃಹನ್ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಬೆಡಗಂಪಣ ಸಮುದಾಯದ ಅರ್ಚಕರ ತಂಡದ ಸಾಂಪ್ರದಾಯದಂತೆ ಮಲೆ ಮಹದೇಶ್ವರನಿಗೆ ವಿಶೇಷವಾಗಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆದವು. ಬಳಿಕ ಮಹಾ ಮಂಗಳಾರತಿಯೊಂದಿಗೆ ಪೂಜಾ ಕಾರ್ಯಕ್ರಮ ಜರುಗಿತು.
ವಿಶೇಷ ಹೂವಿನ ಅಲಂಕಾರ:ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಒಳಭಾಗದಲ್ಲಿ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು .
ಪೂಜೆಗೆ ಬಂದ ಭಕ್ತಾದಿಗಳು:ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಮಾವಾಸ್ಯೆ ಪೂಜೆಗೆ ಬೆಳಗಿನಂದಲೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಹರಕೆ ಹೊತ್ತ ಮಾದಪ್ಪನ ಭಕ್ತಾದಿಗಳು ತುಂತುರು ಜಡಿ ಮಳೆಯ ನಡುವೆಯೂ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ಉರುಳು ಸೇವೆ, ದೂಪದ ಸೇವೆ, ಪಂಜಿನ ಸೇವೆ ಹಾಗೂ ಮಾದೇಶ್ವರ ಉತ್ಸವ, ಹುಲಿವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ದೂಪದ ಸೇವೆ ಧಾರ್ಮಿಕವಾಗಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಮಾದೇಶ್ವರ ಪಡೆದು ಉಘೇ ಉಘೇ ಎಂದು ಘೋಷಣೆ ಕೂಗಿದರು.
ವಿಶೇಷ ದಾಸೋಹ:ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ದಿನ ಸೋಮವಾರ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನನ್ನು ಪೂಜಿಸಿ ನಿವೇದನೆ ಮಾಡಿಕೊಂಡರು. ದಾಸೋಹ ಭವನದಲ್ಲಿ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು...
ಸಾಲೂರು ಮಠದಲ್ಲಿ ಭಕ್ತರ ದಂಡು:ಮಲೆ ಮಾದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ ಪೂಜೆಗೆ ಬಂದಿದ್ದ ಭಕ್ತಾದಿಗಳು ಶ್ರೀ ಕ್ಷೇತ್ರದಲ್ಲಿ ಇರುವ ಸಾಲೂರು ಬೃಹನ್ ಮಠಕ್ಕೆ ಭೇಟಿ ನೀಡಿ ಭಕ್ತಾದಿಗಳು ಶ್ರೀಗಳಿಂದ ಆಶೀರ್ವಚನ ಪಡೆದು ಸಾಲೂರು ಮಠದಲ್ಲಿರುವ ದಾಸೋಹದಲ್ಲಿ ಭಕ್ತರು ದಾಸೋಹ ಸವಿದರು.
ಬಂದೋಬಸ್ತ್:ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತಾದಿಗಳು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಬಳಿಕ ಅಲ್ಲಿನ ಸಿಬ್ಬಂದಿ ವರ್ಗ ವ್ಯವಸ್ಥಿತವಾಗಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವಂತೆ ಸೂಚನೆ ನೀಡುವ ಮೂಲಕ ಜತೆಗೆ ದೇವಾಲಯ ಪ್ರವೇಶ ದ್ವಾರಗಳಲ್ಲೂ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು ವ್ಯವಸ್ಥೆ ಕಲ್ಪಿಸಿದ್ದರು.
ಶಾಸಕರ ಭೇಟಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪೂಜೆಗೆ ಹನೂರು ವಿಧಾನಸಭಾ ಕ್ಷೇತ್ರ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದೇ ವೇಳೆಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಿಬ್ಬಂದಿ ವರ್ಗ ಮತ್ತು ಮುಖಂಡರು ಹಾಜರಿದ್ದರು.