ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾಡಾನೆಗಳ ಸಮಸ್ಯೆಯಿಂದ ತೀವ್ರವಾಗಿ ನಲುಗಿದ್ದ ಸಕಲೇಶಪುರ, ಆಲೂರು ತಾಲೂಕಿನ ಜನರಿಗೆ ಕಾಡಾನೆಗಳ ವಲಸೆ ಅಲ್ಪಪ್ರಮಾಣದ ನೆಮ್ಮದಿ ತಂದಿದೆ.ಸಕಲೇಶಪುರ ತಾಲೂಕಿನಲ್ಲಿದ್ದ ಕಾಡಾನೆಗಳು ಚಿಕ್ಕಮಗಳೂರಿನಲ್ಲಿ ಸದ್ದು ಮಾಡುತಿದ್ದು ಇಂತಹದೊಂದು ಬೆಳವಣಿಗೆ ಜಿಲ್ಲೆಯ ಆಲೂರು, ಸಕಲೇಶಪುರ ತಾಲೂಕಿನ ಜನರ ಸಂಭ್ರಮಕ್ಕೆ ಕಾರಣವಾಗಿದ್ದರೆ ಚಿಕ್ಕಮಗಳೂರು ಜಿಲ್ಲೆಯ ಜನರು ಹೊಸದೊಂದು ಸಮಸ್ಯೆ ತಲೆದೋರಿದೆ.ನಿರಂತರ ವಲಸೆ:
೧೯೮೦ರ ದಶಕದಲ್ಲಿ ಅರಕಲಗೂಡು ತಾಲೂಕಿನ ಅಗಲಿ ಬೆಟ್ಟದಲ್ಲಿ ಇದ್ದ ನಾಲ್ಕು ಕಾಡಾನೆಗಳನ್ನು ವಿದ್ಯುತ್ ಬೇಲಿ ಹಾಕಿ ಹೊರಬರದಂತೆ ತಡೆಯಲಾಗಿತ್ತು. ಆದರೆ ೧೯೮೩ರಲ್ಲಿ ವಿದ್ಯುತ್ ಬೇಲಿಯ ಮೇಲೆ ಒಣಮರ ಹಾಕಿ ಹೊರಬಂದ ಕಾಡಾನೆಯ ಬುದ್ಧಿವಂತಿಕೆಯ ಬಗ್ಗೆ ಆ ಭಾಗದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ತದನಂತರ ಅಗಲಿಬೆಟ್ಟದಲ್ಲಿ ಕಾಡಾನೆಗಳನ್ನು ಹಿಡಿದಿಡುವ ಕೆಲಸಕ್ಕೆ ವಿರಾಮ ಬಿದ್ದಿದ್ದು, ಅಗಲಿಬೆಟ್ಟದಿಂದ ಹೊರಬಂದ ಕಾಡಾನೆಗಳು ಹೇಮಾವತಿ ಹಿನ್ನೀರು ಪ್ರದೇಶ ಅವೃತ್ತವಾಗಿರುವ ಕೂಡಗಿನ ಕೊಡ್ಲಿಪೇಟೆ ಹೋಬಳಿಯ ಹಿಪ್ಪಗಳಲೆ, ಕಟ್ಟೆಪುರ, ನೀರುಗುಂದ, ಮಾವಿನಹಳ್ಳಿ ಗ್ರಾಮಗಳ ಸುತ್ತ ೧೯೮೫ ರಿಂದ ೧೯೯೫ರವರಗೆ ಬೀಡುಬಿಟ್ಟಿದ್ದ ಕಾಡಾನೆಗಳು ೧೯೮೭ ರಲ್ಲಿ ಹಿಪ್ಪಗಳಲೆ ಗ್ರಾಮದಲ್ಲಿ ಹಾಲು ಹಾಕಲು ಹೋರಟ್ಟಿದ್ದ ಮಹಿಳೆಯನ್ನು ಬಲಿ ಪಡೆದಿತ್ತು. ಇದು ಈ ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಗಳ ಮೊದಲ ಮಾನವ ಬಲಿಯಾಗಿದ್ದು ಬಾರಿ ಸದ್ದುಮಾಡಿತ್ತು. ತದನಂತರ ಆಲೂರು ತಾಲೂಕಿನ ದೊಡ್ಡಬೆಟ್ಟಕ್ಕೆ ವಲಸೆ ಬಂದ ಕಾಡಾನೆಗಳಿಗೆ ಹಿನ್ನೀರು ಪ್ರದೇಶದಲ್ಲಿ ಯಥೇಚ್ಚವಾಗಿ ಬೆಳೆದಿದ್ದ ಬಿದಿರು ಇವುಗಳಿಗೆ ಮುಖ್ಯ ಆಹಾರವಾಗಿತ್ತು. ರಾತ್ರಿ ವೇಳೆ ಹಿನ್ನೀರು ಪ್ರದೇಶದಲ್ಲಿ ವಿಹರಿಸುತ್ತಿದ್ದ ಕಾಡಾನೆಗಳು ರಾತ್ರಿ ವೇಳೆ ದೊಡ್ಡಬೆಟ್ಟದಲ್ಲಿ ವಿರಮಿಸುತ್ತಿದ್ದವು. ಆದರೆ, ಶತಮಾನದ ಆರಂಭದ ವೇಳೆಗೆ ಬಿದಿರು ಕಟ್ಟೆ ರೋಗದಿಂದ ನಾಶವಾದ ನಂತರ ನಿಧಾನವಾಗಿ ತಾಲೂಕಿನ ಯಸಳೂರು ಹೋಬಳಿಗೆ ವಲಸೆ ಬಂದು ನೆಲೆ ನಿಂತ ೧೦ ಆನೆಗಳಿದ್ದ ಗುಂಪಿಗೆ ಅಂದು ಕಾಫಿತೋಟದಲ್ಲಿದ್ದ ಬಾಳೆ, ಬೈನೆ, ಹಲಸು ಪ್ರಮುಖ ಆಹಾರವಾದರೆ ಪಾಳು ತೋಟಗಳು ಇವುಗಳ ಅಡಗು ತಾಣವಾಗಿದ್ದವು. ೨೦೦೧ ರಿಂದ ೨೦೧೦ ರವರೆಗೆ ಯಸಳೂರು ಹೋಬಳಿಯ ಐಗೂರು ಗ್ರಾ.ಪಂ ವ್ಯಾಪ್ತಿಯ ದೊಡ್ಡಕಲ್ಲೂರು ಸುತ್ತಲಿನ ಪ್ರದೇಶ ಕಾಡಾನೆಗಳ ಹಾವಳಿಯಿಂದ ನಲುಗಿ ಹೋಗಿದ್ದು ಸರಣಿ ಮಾನವ ಹತ್ಯೆಗಳು ನಡೆಯುವ ಮೂಲಕ ಕಾಡಾನೆ ಸಮಸ್ಯೆ ರಾಜ್ಯದ ಗಮನ ಸೆಳೆಯುವಂತೆ ಮಾಡಿತ್ತು.ಈ ಹೋಬಳಿಯಲ್ಲಿ ರಾತ್ರಿ ವೇಳೆ ರಸ್ತೆಗಳಲ್ಲಿ ವಾಹನ ಸವಾರಿಯು ಅಪಾಯಕಾರಿ ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಕಾಡಾನೆ ಸಂತತಿ ಭಾರಿ ಪ್ರಮಾಣದಲ್ಲಿ ವೃದ್ಧಿಯಾಗಿದ್ದು ೨೦೧೦ರ ವೇಳೆಗೆ ಅರಣ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಾಡಾನೆಗಳ ಸಂಖ್ಯೆ ೩೦ಕ್ಕೆ ಏರಿಕೆಯಾಗಿತ್ತು. ಪ್ರತಿವರ್ಷ ಬಾರಿ ಪ್ರಮಾಣದಲ್ಲಿ ಏರಿಕೆಗೊಂಡ ಕಾಡಾನೆಗಳಿಗೆ ಆಹಾರದ ಕೊರತೆ ಎದುರಾಗಿದ್ದರಿಂದ ಆಲೂರು ತಾಲೂಕಿನ ಕೆ.ಹೋಸಕೋಟೆ ಹೋಬಳಿಗೆ ವಲಸೆ ಬಂದ ಕಾಡಾನೆಗಳು ಹರಿಹಳ್ಳಿ, ಕಾಗನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲವರ್ಷ ನಿರಂತರ ಬೆಳೆನಾಶದಲ್ಲಿ ತೊಡಗಿದ್ದು, ೨೦೧೫ರ ವೇಳೆಗೆ ತಾಲೂಕಿನ ಬೆಳಗೋಡು ಹೋಬಳಿಯ ಕಬ್ಬಿನಗದ್ದೆ, ವಡೂರು, ಹಾಲೇಬೇಲೂರು ಸುತ್ತಲಿನ ಪ್ರದೇಶಕ್ಕೆ ವಲಸೆ ಬಂದಿದ್ದು ಈ ಪ್ರದೇಶವನ್ನು ಅಕ್ಷರ ಸಹ ತಮ್ಮ ಕಬ್ಜವನ್ನಾಗಿ ಮಾಡಿಕೊಂಡ ಕಾಡಾನೆಗಳು ಇಲ್ಲಿಗೆ ವಲಸೆ ಬರುವ ವೇಳೆಗೆ ಕಾಡಾನೆಗಳ ಸಂಖ್ಯೆ ೫೫ರಿಂದ ೭೦ಕ್ಕೆ ತಲುಪಿದ್ದವು. ಗುಂಪಿನ ಗಾತ್ರ ಹೆಚ್ಚಿದಂತೆ ಇಲ್ಲಿಂದ ತಮ್ಮ ಜೀವನಶೈಲಿಯನ್ನು ಬದಲಿಸಿಕೊಂಡ ಕಾಡಾನೆಗಳು ರಾತ್ರಿವೇಳೆ ಮಾತ್ರ ಆಹಾರ ಅರಸಿ ಸಂಚರಿಸುತ್ತಿದ್ದ ಕಾಡಾನೆಗಳು ಹಗಲುವೇಳೆ ತೋಟಗಳಲ್ಲಿ ದಾಂದಲೆ ನಡೆಸುವ ಮೂಲಕ ಸಾಕಷ್ಟು ಮಾನವ ಹತ್ಯೆಗೂ ಕಾರಣವಾದವು.
೨೦೨೦ರ ವೇಳೆಗೆ ಒಂಟಿಯಾಗಿ ಸಂಚರಿಸಲಾರಂಭಿಸಿದ ಕೆಲವು ಆನೆಗಳು ಗ್ರಾಮಗಳಿಗೂ ಎಡೆತಾಕಲು ಆರಂಭಿಸುವ ಮೂಲಕ ಮನೆಗಳು ಕ್ಷೇಮವಲ್ಲ ಎಂಬ ಮನಸ್ಥಿತಿಗೆ ಜಾರುವಂತೆ ಮಾಡಿದ್ದವು. ಇದರಿಂದಾಗಿ ಕಬ್ಬಿನಗದ್ದೆ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಯ ಗೇಟಿಗೆ ವಿದ್ಯುತ್ ತಂತಿ ಅಳವಡಿಸುವಂತ ಪರಿಸ್ಥಿತಿ ನಿರ್ಮಿಸಿದ್ದವು. ಸುಮಾರು ಒಂದು ದಶಕಗಳ ಕಾಲ ಹಾವಳಿ ನಡೆಸಿದ ಕಾಡಾನೆಗಳು ೨೦೨೧ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ ೭೫ರನ್ನು ದಾಟಿ ಬೆಳಗೂಡು ಹೋಬಳಿಯ ಉದೇಯವಾರ ಹಾಗೂ ಬಿರಡಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹಾವಳಿ ಇಡುವ ಮೂಲಕ ಈ ಭಾಗದ ಜನರಿಗೆ ನರಕ ದರ್ಶನ ಮಾಡಿಸಿದ್ದವು. ಈ ಭಾಗದಲ್ಲಿ ಒಂದೆರಡು ವರ್ಷ ಹಾವಳಿ ಇಟ್ಟ ಕಾಡಾನೆಗಳು ೨೦೨೩ರ ವೇಳೆಗೆ ಬೇಲೂರು ತಾಲೂಕು ಪ್ರವೇಶಿಸುವ ಮೂಲಕ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯಲ್ಲಿ ಹಾವಳಿ ಇಟ್ಟು ಸಾಕಷ್ಟು ಬೆಳೆ ನಾಶದೊಂದಿಗೆ ಮಾನವರ ಹತ್ಯೆಯನ್ನು ನಡೆಸಿದವು.೨೦೨೪ರ ಜೂನ್ ತಿಂಗಳ ವೇಳೆಗೆ ಬೇಲೂರು ತಾಲೂಕಿನ ಬಿಕ್ಕೂಡು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಣಿಸಿಕೊಂಡ ಕಾಡಾನೆಗಳು ಸಾಕಷ್ಟು ಜೋಳದ ಬೆಳೆಯನ್ನು ನುಂಗಿ ನೀರುಕೂಡಿದಿದ್ದು ಸದ್ಯ ಈ ಭಾಗದಲ್ಲಿ ನೀರು ಹಾಗೂ ವಿರಮಿಸಲು ದಟ್ಟ ಅರಣ್ಯದ ಸಮಸ್ಯೆ ಎದುರಾಗಿದ್ದರಿಂದ ನಿಧಾನಗತಿಯಲ್ಲಿ ಚಿಕ್ಕಮಗಳೂರಿನೆಡೆಗೆ ವಲಸೆ ಹೊರಟ್ಟಿದ್ದವು. ಆದರೆ, ಚಿಕ್ಕಮಗಳೂರು ಅರಣ್ಯ ಇಲಾಖೆ ಕಾಡಾನೆಗಳು ಹಿಂಡು ಜಿಲ್ಲೆ ಪ್ರವೇಶಿದಂತೆ ತಡೆಯುವ ಸಾಕಷ್ಟು ಪ್ರಯತ್ನ ನಡೆಸಿತಾದರೂ ಪ್ರಯತ್ನ ವಿಫಲಗೊಂಡಿದ್ದು ಸದ್ಯ ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಸದ್ಯ ಕಾಡಾನೆಗಳ ಕಾಟ ಆರಂಭವಾಗಿದೆ. ಆನೆಗಳ ಸುಳಿವಿಲ್ಲ:
ವಿಪರೀತ ಕಾಡಾನೆಗಳ ಕಾಟ ಅನುಭವಿಸಿದ ಕೂಡಗಿನ ಹಲವು ಗ್ರಾಮಗಳಲ್ಲಿ ಹಾಗೂ ತಾಲೂಕಿನ ಯಸಳೂರು ಹೋಬಳಿ ಹಾಗೂ ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿ ಸಂಪೂರ್ಣ ಕಾಡಾನೆ ಹಾವಳಿಯಿಂದ ಮುಕ್ತಗೊಂಡಿದೆ. ಆದರೆ, ತಾಲೂಕಿನ ಬೆಳಗೋಡು ಹೋಬಳಿಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಡಾನೆಗಳು ಬಂದು ಹೊಗುತ್ತಿದ್ದರು ಹಿಂದಿನ ಸಮಸ್ಯೆ ಈಗಿಲ್ಲದೆ ಜನರು ನೆಮ್ಮದಿ ಕಂಡಿದ್ದಾರೆ.ಹರಿಯುವ ನೀರು:
ಮೂರು ದಶಕಗಳ ಕಾಲದ ಕಾಡಾನೆಗಳ ವಲಸೆ ಗಮನಿಸಿದರೆ ಹರಿಯುವ ನೀರು ಅಂದರೆ ನದಿ ಹಾಗೂ ಹಿನ್ನೀರು ಹೊಂದಿರುವ ಪ್ರದೇಶದಲ್ಲೆ ಅತಿಹೆಚ್ಚು ಕಾಲ ನೆಲೆನಿಂತಿದ್ದರೆ, ಹರಿಯುವ ನೀರಿಲ್ಲದ ಭಾಗದಲ್ಲಿ ಕೆಲಕಾಲ ಮಾತ್ರ ದಾಂದಲೆ ನಡೆಸಿ ತೆರಳಿವೆ. ಸದ್ಯ ಚಿಕ್ಕಮಗಳೂರು ಜಿಲ್ಲೆ ಪ್ರವೇಶಿಸಿರುವ ಕಾಡಾನೆಗಳು ಹಿಂದಿರುಗದಿದ್ದರೆ ಸಾಕು ಎಂಬುದು ಜಿಲ್ಲೆಯ ಜನರ ಪ್ರಾರ್ಥನೆಯಾಗಿದೆ.* ಹೇಳಿಕೆ 1
ಸದ್ಯ ನಮ್ಮ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ನಿವಾರಣೆಯಾಗಿದ್ದು, ಜನರು ರಾತ್ರಿ ವೇಳೆಯು ನಿರ್ಭಯವಾಗಿ ಸಂಚರಿಸುವಂತ ವಾತಾವಾರಣ ನಿರ್ಮಾಣವಾಗಿದೆ.- ದಯಾನಂದ, ಕಲ್ಲೂರು ನಿವಾಸಿ