ಚನ್ನಗಿರಿ ನಗರ, ತಾಲೂಕಿನಾದ್ಯಂತ ವೈಭವದ ಗಣೇಶ ಪೂಜೆ

| Published : Aug 29 2025, 01:00 AM IST

ಸಾರಾಂಶ

ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಗೌರಿ- ಗಣೇಶನ ಹಬ್ಬದ ಆಚರಣೆಯನ್ನು ಸಡಗರ- ಸಂಭ್ರಮಗಳಿಂದ ಆಚರಿಸಲಾಯಿತು.

- 27 ಸಮಾಜ ಬಾಂಧವರು, ಪೊಲೀಸ್‌ ಠಾಣೆ, ಪುರಸಭೆ ಇತರೆಡೆ ಗಣಪತಿ ಪ್ರತಿಷ್ಟಾಪನೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಗೌರಿ- ಗಣೇಶನ ಹಬ್ಬದ ಆಚರಣೆಯನ್ನು ಸಡಗರ- ಸಂಭ್ರಮಗಳಿಂದ ಆಚರಿಸಲಾಯಿತು.

ಹಬ್ಬದ ನಿಮಿತ್ತ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಪಟ್ಟಣದ 27 ಸಮಾಜಗಳ ಬಾಂಧವರು ಒಳಗೊಂಡ ಹಿಂದೂ ಏಕತಾ ಗಣಪತಿ ಸಮಿತಿಯವರು ಗಣಪತಿಯನ್ನು ಪ್ರತಿಷ್ಟಾಪಿಸಿದ್ದರೆ, ಪಟ್ಟಣದ ಊರಬಾಗಿಲ ಹನುಮಂತ ದೇವರ ದೇವಾಲಯ ಆವರಣದಲ್ಲಿರುವ ಸಭಾ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ತು, ಬಜರಂಗ ದಳದ ವತಿಯಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿದೆ.

ಗುರುವಾರ ಬೆಳಗ್ಗೆಯಿಂದ ಮಳೆ ಶುರುವಾಗಿದೆ. ಜಡೀ ಮಳೆಯಲ್ಲಿಯೇ ಕಲ್ಲುನಾಗರ ಮತ್ತು ಹುತ್ತಗಳಿಗೆ ಪೂಜಿಸಿ, ಹಾಲೆರೆಯುವಂತಹ ಭಕ್ತರು ಮಳೆಯಲ್ಲಿಯೇ ಹಾಲೆರೆದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಣಪತಿಯನ್ನು ಹಬ್ಬದ 1 ದಿನ ಪ್ರತಿಷ್ಟಾಪಿಸಿ, ಅದೇ ದಿನ ಸಂಜೆ ಗಣಪತಿ ಮೂರ್ತಿ ವಿಸರ್ಜನೆ ನಡೆಯಿತು. ಅಲಂಕೃತಗೊಂಡ ಬೆಳ್ಳಿಯ ಸಾರೋಟಿನಲ್ಲಿ ಗಣಪತಿಯನ್ನು ಕುಳ್ಳಿರಿಸಿ, ವಿವಿಧ ವಾದ್ಯ- ಮೇಳಗಳೊಂದಿಗೆ ಡ್ರಮ್ ಸೆಟ್‌ ವಾದ್ಯದೊಂದಿಗೆ ಪೊಲೀಸ್ ಸಿಬ್ಬಂದಿ ಉತ್ಸವ ನಡೆಸಿದರು. ಒಂದೇ ತೆರನಾದ ಟೀಶರ್ಟ್‌ಗಳ ಧರಿಸಿ ಪಾಲ್ಗೊಂಡಿದ್ದ ಸಿಬ್ಬಂದಿ ಕುಣಿದು ಕುಪ್ಪಳಿಸುತ್ತ ಮೆರವಣಿಗೆಯಲ್ಲಿ ಸಾಗಿದರು.

ಪಟ್ಟಣದ ಮನೆಗಳಲ್ಲಿ ಪ್ರತಿಷ್ಟಾಪನೆ ಮಾಡಿದ್ದ ಶ್ರೀ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ, ಗಣಪತಿ ಹೊಂಡವೆಂದೇ ಪ್ರಸಿದ್ಧಿ ಪಡೆದ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ಹೊಂಡದಲ್ಲಿ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಪುರಸಭೆ ಕಚೇರಿಯಲ್ಲಿ ಗಣಪತಿ ಮೂರ್ತಿಯನ್ನು 3 ದಿನಗಳ ಕಾಲ ಪ್ರತಿಷ್ಠಾಪಿಸಿದ್ದು, ಪ್ರತಿದಿನ ತ್ರಿಕಾಲ ಪೂಜೆಯೊಂದಿಗೆ ಕಚೇರಿಗೆ ಬರುವಂತಹ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಈ ಗಣಪತಿಯ ವಿಸರ್ಜನೆ ನಡೆಯಲಿದೆ ಎಂದು ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದ್ದಾರೆ.

ಚನ್ನಗಿರಿ ಪಟ್ಟಣದ ಹಲವಾರು ದೇವಾಲಯಗಳಲ್ಲಿ ಮತ್ತು ಹಲವು ಬಡಾವಣೆಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, 3, 5, 9, 11, 19 ದಿನಗಳವರೆಗೂ ಪೂಜಿಸುತ್ತಾ ಆಯಾ ನಿಗದಿತ ದಿನಗಳಂದು ಶ್ರದ್ಧಾ-ಭಕ್ತಿಯಿಂದ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಿದ್ದಾರೆ.

ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಡಿ.ಜೆ. ಸೌಂಡ್ಸ್‌ ಬಳಕೆ ರದ್ದುಪಡಿಸಲಾಗಿದೆ. ವಿವಿಧ ಕಲಾ-ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರ್ವಜನಿಕವಾಗಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸಮಿತಿಯವರು ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗದೊಂದಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯಾಗಿದೆ. ಗಣೇಶ ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗುವುದು ಎಂದು ಚನ್ನಗಿರಿಯ ಪೊಲೀಸ್ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ರವೀಶ್ ತಿಳಿಸಿದ್ದಾರೆ.

- - -

-28ಕೆಸಿಎನ್‌ಜಿ1: ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ಹಿಂದೂ ಏಕತಾ ಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ.

-28ಕೆಸಿಎನ್‌ಜಿ2: ಚನ್ನಗಿರಿ ಪಟ್ಟಣದ ಊರಬಾಗಿಲ ಶ್ರೀ ಹನುಮಂತ ದೇವಾಲಯ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ತು- ಬಜರಂಗ ದಳದಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ.

-28ಕೆಸಿಎನ್ಜಿ3: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ವಿಸರ್ಜನಾ ಪೂರ್ವ ಅಲಂಕೃತ ಗೊಂಡ ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು.

-28ಕೆಸಿಎನ್‌ಜಿ4: ಚನ್ನಗಿರಿ ಪಟ್ಟಣದ ಪುರಸಭಾ ಕಚೇರಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ.