ಇಂದಿನಿಂದ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ

| Published : Nov 25 2024, 01:06 AM IST

ಸಾರಾಂಶ

ದಾವಣಗೆರೆ: ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಕಾರ್ಯಕ್ರಮವನ್ನು ನ.25 ರಿಂದ 27 ರ ವರೆಗೆ ವಿಜೃಂಭಣೆಯಿಂದ ಇಲ್ಲಿನ ಎಸ್‌ಕೆಪಿ ರಸ್ತೆಯಲ್ಲಿರುವ ವಿಠ್ಠಲಮಂದಿರ ಮತ್ತು ದೊಡ್ಡಪೇಟೆಯಲ್ಲಿರುವ ಶ್ರೀ ನಾಮದೇವ ಭಜನಾ ಮಂದಿರದಲ್ಲಿ ಆಚರಿಸಲಾಗುವುದು ಎಂದು ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ಅಧ್ಯಕ್ಷ ಎಂ.ಎಸ್.ವಿಠ್ಠಲ್ ತಿಳಿಸಿದರು.

ದಾವಣಗೆರೆ: ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಕಾರ್ಯಕ್ರಮವನ್ನು ನ.25 ರಿಂದ 27 ರ ವರೆಗೆ ವಿಜೃಂಭಣೆಯಿಂದ ಇಲ್ಲಿನ ಎಸ್‌ಕೆಪಿ ರಸ್ತೆಯಲ್ಲಿರುವ ವಿಠ್ಠಲಮಂದಿರ ಮತ್ತು ದೊಡ್ಡಪೇಟೆಯಲ್ಲಿರುವ ಶ್ರೀ ನಾಮದೇವ ಭಜನಾ ಮಂದಿರದಲ್ಲಿ ಆಚರಿಸಲಾಗುವುದು ಎಂದು ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ಅಧ್ಯಕ್ಷ ಎಂ.ಎಸ್.ವಿಠ್ಠಲ್ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 98 ವರ್ಷದಿಂದ ಅದ್ಧೂರಿಯಾಗಿ ದಿಂಡಿ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. 99ನೇ ವರ್ಷದ ಅಂಗವಾಗಿ ಈ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದರು.ನ.25 ರ ಮುಂಜಾನೆ 5 ರಿಂದ 7 ರ ವರೆಗೆ ಕಾಕಡಾರತಿ, ಭಜನೆ, ಪಂಚಾಮೃತಾಭಿಷೇಕ, ಸಂಜೆ 4 ಗಂಟೆಗೆ ಶ್ರೀ ವಿಠ್ಠಲ ಮಂದಿರ ದಿಂದ ಭಜನೆ ಮುಖಾಂತರ ನಾಮದೇವ ಭಜನಾ ಮಂದಿರಕ್ಕೆ ಪೋತಿಯನ್ನು ತಂದು ಸ್ಥಾಪನೆ ಮಾಡಲಾಗುವುದು. ಸಂಜೆ 5ರಿಂದ ನಡೆಯುವ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ಕೈಗಾರಿಕಾ ಪ್ರಕೋಷ್ಠ ರಾಜ್ಯ ಸಂಚಾಲಕ ಕೆ.ಬಿ.ಕೊಟ್ರೇಶ್ ಇತರರು ಭಾಗವಹಿಸುವರು. ಕನ್ನಡ ಉಪನ್ಯಾಸಕ ಬಸವರಾಜ್ ಹನುಮಲಿ ಉಪನ್ಯಾಸ ನೀಡುವರು. ಜ್ಞಾನದೇವ ಬೊಂಗಾಳೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ನ.26 ರ ಮುಂಜಾನೆ 5 ರಿಂದ 7 ರ ವರೆಗೆ ಕಾಕಡಾರತಿ, ಪಂಚಾಮೃತಾಭಿಷೇಕ, ಸ್ವಾಮಿಗೆ ಮಂಗಳಾರತಿ, 9 ರಿಂದ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಸಾಮುದಾಯಿಕ ಪಾರಾಯಣ, 11ಕ್ಕೆ ಶ್ರೀ ತುಕೋಬರಾಯರ ಗಾಥಾ ಭಜನೆ ಮತ್ತು ಆರತಿ, ಮಧ್ಯಾಹ್ನ 3.30 ರಿಂದ ಪ್ರವಚನ, ಸಂಜೆ 4.30 ರಿಂದ ಶ್ರೀ ವಿಠ್ಠಲ ರಖಮಾಯಿ ಉತ್ಸವ ಮೂರ್ತಿ ಮೆರವಣಿಗೆ ಇತರೆ ಕಾರ್ಯಕ್ರಮ ನಡೆಯಲಿದೆ ಎಂದರು.ನ.27 ರಂದು ಬೆಳಗ್ಗೆ ಕಾಕಡಾರತಿ, ದ್ವಾದಶ ಅಭಂಗ, ಮಂಗಳಾರತಿ, 9 ರಿಂದ ಶ್ರೀ ವಿಠ್ಠಲ ಮಂದಿರದಿಂದ ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಧರ್ಮಶಾಲೆಯವರೆಗೆ ಸರ್ವಾಲಂಕೃತ ಮಯೂರ ರಥದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ಉತ್ಸವಮೂರ್ತಿ ಮೆರವಣಿಗೆ ನಡೆಯಲಿದೆ. ಅಂದು ಮಧ್ಯಾಹ್ನ 12.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮತ್ತಿತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಂಡಳಿ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ, ಉಪಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಅಶೋಕ ಮಾಳೋದೆ, ಪ್ರಧಾನ ಕಾರ್ಯದರ್ಶಿ ಮನೋಹರ ವಿ.ಬೊಂಗಾಳೆ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಸಿ.ಕಂಚಿಕೇರಿ ಇದ್ದರು.