ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಸಾಂಕೇತಿಕ ಹೋರಾಟ ಕೈಬಿಟ್ಟು, ಸರ್ಕಾರದೊಡನೆ ಸಂಘರ್ಷಾತ್ಮಕ ಹೋರಾಟ ನಡೆಸುವುದು ಸೂಕ್ತ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ನಾಡಗೌಡ ಅಭಿಪ್ರಾಯಪಟ್ಟರು.ನಗರದ ಗನ್ ಹೌಸ್ ವೃತ್ತದ ಶ್ರೀವಿದ್ಯಾ ಭಾರತಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕರವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್ ಗಳ ವಿಭಾಗ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.ಗ್ರಾಪಂ ನೌಕರರ ವೇತನ ಹೆಚ್ಚಿಸುವುದಾಗಿ ಹೇಳಿ ಆರು ತಿಂಗಳಾದರೂ ಹೆಚ್ಚಿಸಿಲ್ಲ. ನಿವೃತ್ತ ನೌಕರರಿಗೆ 6 ಸಾವಿರ ಪಿಂಚಣಿ ನೀಡುವುದು, 5 ವರ್ಷ ಸೇವೆ ಸಲ್ಲಿಸಿದವರಿಗೆ 750 ರೂ., 10 ವರ್ಷ ಸೇವೆ ಸಲ್ಲಿಸಿದವರಿಗೆ 1,500 ರೂ. ಹಾಗೂ 15 ವರ್ಷ ಸೇವೆ ಸಲ್ಲಿಸಿದ ನೌರರಿಗೆ ಹೆಚ್ಚುವರಿಯಾಗಿ 3 ಸಾವಿರ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಆ ಭರವಸೆ ಈವರೆಗೂ ಈಡೇರಿಲ್ಲ. 1,121 ಗ್ರಾಪಂ ಮೇಲ್ದರ್ಜೆಗೇರಿಸುವ ಪ್ರಸ್ತಾವವು ಸರ್ಕಾರದ ಹಂತದಲ್ಲಿ ಬಾಕಿ ಇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಬಾಗಲಕೋಟೆ, ಕಲಬುರಗಿ ಹಾಗೂ ಸಿಂಧನೂರಿನಲ್ಲಿ ನಡೆದ ಸಭೆಯಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಮುಂದಿನ ಬಜೆಟ್ಅಧಿವೇಶನದ ವೇಳೆಗೆ ಸಾಂಕೇತಿಕ ಪ್ರತಿಭಟನೆ ಕೈ ಬಿಟ್ಟು ಸರ್ಕಾರದೊಡನೆ ಸಂಘರ್ಷಕ್ಕೆ ಇಳಿಯಬೇಕು. ಇತ್ತೀಚೆಗೆ ಗ್ರಾಪಂಗೆ ಬೇರೆ ಇಲಾಖೆಯವರನ್ನು ನಿಯೋಜಿಸಲಾಗುತ್ತಿದೆ. ಇದರೊಡನೆ ಜು. 23, 24ರಂದು ನಡೆದ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಸರ್ಕಾರ ಕೆಲವು ಆಶ್ವಾಸನೆ ನೀಡಿದ್ದು, ಅದು ಇಂದಿಗೂ ಈಡೇರಿಲ್ಲ ಎಂದು ಅವರು ಹೇಳಿದರು.ಈ ಸಭೆಯ ಅಭಿಪ್ರಾಯ ಪಡೆದು ಭಾನುವಾರ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಂಡಿಸಲಾಗುವುದು. ಚಳವಳಿಯ ದಿನಾಂಕ, ಚಳವಳಿಯ ರೂಪುರೇಷೆ ನಿರ್ಧರಿಸಲಾಗುವುದು. ನಾಲ್ಕು ಕಡೆ ಸಭೆಯ ಅಭಿಪ್ರಾಯಪಡೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.ಸರ್ಕಾರ ಪಂಚಾಯಿತಿಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಿಲ್ ಕಲೆಕ್ಟರ್, ನೀರು ಪೂರೈಕೆಯನ್ನು ಅನ್ಯ ಇಲಾಖೆಗಳಿಗೆ ನೀಡಲು ಯೋಜನೆ ರೂಪಿಸಿದೆ. ಡಾಟಾ ಎಂಟ್ರಿಗೆ ಪರ್ಯಾಯ ಡಾಟಾ ಎಂಟ್ರಿ ನೌಕರರನ್ನು ತರುವ ಆಲೋಚನೆ ನಡೆಸಿದ್ದು, ಹಲವು ಆಲೋಚನೆಗಳು ಸರ್ಕಾರದ ಹಂತದಲ್ಲಿವೆ. ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಹೋರಾಟ ರೂಪಿಸಲಾಗುವುದು ಎಂದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ, ರಾಜ್ಯ ಉಪಾಧ್ಯಕ್ಷ ಎಂ.ಎಂ. ಶಿವಕುಮಾರ್, ಜಿಲ್ಲಾಧ್ಯಕ್ಷ ಕೆ. ಬಸವರಾಜು, ಉಪಾಧ್ಯಕ್ಷ ಪಿ.ಆರ್. ಭರತ್, ವರುಣ ನಾಗರಾಜು, ಚಾಮರಾಜನಗರದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜು, ರಾಜ್ಯ ಸಹ ಕಾರ್ಯದರ್ಶಿ ಬಸವರಾಜು, ಜಿಲ್ಲಾ ಖಜಾಂಚಿ ಮಾದೇಶ್ ಇದ್ದಾರೆ.