ಸಾರಾಂಶ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿಜಯೇಂದ್ರ ಪ್ರತಿಭಟನೆ
ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯೆದುರು ಅಶೋಕ್ ಪ್ರತಿಭಟನೆ-----
ಬಂಧಿತರ ಬಿಡುಗಡೆಆಗೋವರೆಗೂ ಧರಣಿ
ಶ್ರೀನಗರದ ಲಾಲ್‍ಚೌಕದಲ್ಲೇ ಬಿಜೆಪಿ ಕಾರ್ಯಕರ್ತರು ಮುರಳಿ ಮನೋಹರ ಜೋಷಿ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ರಾಜ್ಯ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಬಂಧಿತ ಶ್ರೀಕಾಂತ್ ಪೂಜಾರಿ ಬಿಡುಗಡೆವರೆಗೂ ಈ ಹೋರಾಟ ಮುಂದುವರೆಯಲಿದೆ.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
------ರಾಮಭಕ್ತರ ಮುಟ್ಟಿದರೆ
ಸಿದ್ದುಗೆ ಉಳಿಗಾಲವಿಲ್ಲಸಿದ್ದರಾಮಯ್ಯನವರೇ, ರಾಮನ ಭಕ್ತರನ್ನು ಮುಟ್ಟಿದರೆ ನಿಮಗೆ ಉಳಿಗಾಲವಿಲ್ಲ. ರಾಮನ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ. ರಾಮನಿಗೆ ಜೈ ಎಂದವರನ್ನು ಜೈಲಿಗೆ ಕಳಿಸುತ್ತೀರಿ. ರಾಜ್ಯದಲ್ಲಿ ಟಿಪ್ಪು, ಔರಂಗಜೇಬನಂತೆ ಅಧಿಕಾರ ನಡೆಸುತ್ತಿದ್ದೀರಿ.
- ಆರ್.ಅಶೋಕ್, ವಿರೋಧಪಕ್ಷದ ನಾಯಕ------
ಕನ್ನಡಪ್ರಭ ವಾರ್ತೆ ಬೆಂಗಳೂರು/ಹುಬ್ಬಳ್ಳಿರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧಿಸಿರುವ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಿಡುಗಡೆಗೆ ಒತ್ತಾಯಿಸಿ ಹಾಗೂ ರಾಜ್ಯಾದ್ಯಂತ ರಾಮಭಕ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ, ಹುಬ್ಬಳ್ಳಿಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿಜಯೇಂದ್ರ ಮಾತನಾಡಿ, ಶ್ರೀನಗರದ ಲಾಲ್‍ಚೌಕದಲ್ಲಿ ಕಾರ್ಯಕರ್ತರು ಮುರಳಿ ಮನೋಹರ್ ಜೋಷಿಯವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ರಾಜ್ಯ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಬಂಧಿತ ಶ್ರೀಕಾಂತ್ ಪೂಜಾರಿ ಬಿಡುಗಡೆವರೆಗೂ ಈ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‌ಕುಮಾರ್ ಮತ್ತಿತರ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ, ರಾಜ್ಯಪಾಲರನ್ನು ಭೇಟಿ ಮಾಡಿ, ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದರು.ಹುಬ್ಬಳ್ಳಿಯಲ್ಲಿ ಶಹರಾ ಪೊಲೀಸ್ ಠಾಣೆ ಎದುರು ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಾಸಕ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 4 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ನಾಯಕರು, ರಾಮನ ಭಜನೆ ಮಾಡಿ, ಶ್ರೀರಾಮನ ಪರ ಜಯಘೋಷ ಮೊಳಗಿಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಶೋಕ್, ‘ಸಿದ್ದರಾಮಯ್ಯನವರೇ, ರಾಮನ ಭಕ್ತರನ್ನು ಮುಟ್ಟಿದರೆ ನಿಮಗೆ ಉಳಿಗಾಲವಿಲ್ಲ. ರಾಮನ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಎಚ್ಚರಿಸಿದರು. ರಾಮನಿಗೆ ಜೈ ಎಂದವರನ್ನು ಇವರು ಜೈಲಿಗೆ ಕಳುಹಿಸುತ್ತಿದ್ದಾರೆ. ಆದರೆ ಟಿಪ್ಪು, ಔರಂಗಜೇಬನಂತೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಳಿಕ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅಶೋಕ್ ಸೇರಿ 150ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ, ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ದುರ್ಗದಬೈಲ್, ಬ್ರಾಡ್‌ವೇ, ಶಹಾ ಬಜಾರ್ ವಲಯಗಳಲ್ಲಿ ಅಘೋಷಿತ ಬಂದ್ ಕಂಡು ಬಂತು.ಇದೇ ವೇಳೆ, ಗದಗದಲ್ಲಿ ಪ್ರತಿಭಟನೆ ವೇಳೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಕೋಲಾರದಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಾಲಯದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಇದೇ ವೇಳೆ, ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು, ಹಾವೇರಿಯಲ್ಲಿ ಜಿಲ್ಲಾಡಳಿತ ಭವನದ ಎದುರು, ಬಳ್ಳಾರಿಯಲ್ಲಿ ಗಡಗಿ ಚನ್ನಪ್ಪ ವೃತ್ತದಲ್ಲಿ, ಬೆಳಗಾವಿಯಲ್ಲಿ ಚನ್ನಮ್ಮ ವೃತ್ತದಲ್ಲಿ, ತುಮಕೂರಿನಲ್ಲಿ ಟೌನ್ ಹಾಲ್ ನ ಮುಂಭಾಗ, ಚಿಕ್ಕಬಳ್ಳಾಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ, ಕಾರವಾರದಲ್ಲಿ ಸುಭಾಸ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಿತು.ಇದೇ ವೇಳೆ, ಮಂಡ್ಯ, ರಾಮನಗರ, ಮೈಸೂರು, ರಾಯಚೂರು, ಕಲಬುರಗಿ, ಬೀದರ್ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.