ಕೋರ್ಟ್‌ನಲ್ಲಿ ಸ್ತ್ರೀಯರ ಪ್ರಾತಿನಿಧ್ಯಕ್ಕೆ ರಾಜ್ಯ ಮಾದರಿ: ಸುಪ್ರೀಂ ಸಿಜೆ ನ್ಯಾ.ಚಂದ್ರಚೂಡ್‌ ಶ್ಲಾಘನೆ

| Published : Mar 24 2024, 01:33 AM IST / Updated: Mar 24 2024, 12:39 PM IST

ಕೋರ್ಟ್‌ನಲ್ಲಿ ಸ್ತ್ರೀಯರ ಪ್ರಾತಿನಿಧ್ಯಕ್ಕೆ ರಾಜ್ಯ ಮಾದರಿ: ಸುಪ್ರೀಂ ಸಿಜೆ ನ್ಯಾ.ಚಂದ್ರಚೂಡ್‌ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣಗಳ ಇತ್ಯರ್ಥ ಮತ್ತು ನ್ಯಾಯಾಧೀಶರ ಹುದ್ದೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ನೀಡುವಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ನಾಟಕ ನ್ಯಾಯಾಂಗ ಮುಂಚೂಣಿಯಲ್ಲಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶ್ಲಾಘಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಕರಣಗಳ ಇತ್ಯರ್ಥ ಮತ್ತು ನ್ಯಾಯಾಧೀಶರ ಹುದ್ದೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ನೀಡುವಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ನಾಟಕ ನ್ಯಾಯಾಂಗ ಮುಂಚೂಣಿಯಲ್ಲಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶ್ಲಾಘಿಸಿದ್ದಾರೆ.

ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದ ಡಾ। ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ 21ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 21.25 ಲಕ್ಷ ಪ್ರಕರಣಗಳ ಪೈಕಿ 20.62 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. ಮೂರಾಲ್ಕು ಲಕ್ಷ ಪ್ರಕರಣಗಳು ಮಾತ್ರ ಬಾಕಿ ಉಳಿದಿರುವುದು ದೇಶಕ್ಕೆ ಮಾದರಿ. 

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಸಹಭಾಗಿತ್ವ ಶೇ.37ರಷ್ಟಿದೆ. ಆದರೆ, ಕರ್ನಾಟಕದ 447 ಮಂದಿ ಜಿಲ್ಲಾ ಹಾಗೂ ಸಿವಿಲ್ ನ್ಯಾಯಾಧೀಶರ ಪೈಕಿ 200 ಮಂದಿ ಮಹಿಳೆಯರಿದ್ದಾರೆ. 

ಇದು ಶೇ.44ರಷ್ಟು ಮಹಿಳಾ ಪಾಲುದಾರಿಕೆಯಾಗಿದ್ದು, ಯುವ ಸಮುದಾಯ ಕಾನೂನು ಸೇವೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಗಿದೆ ಎಂದರು.

ಜಿಲ್ಲಾ ನ್ಯಾಯಾಲಯಗಳು ಕಾನೂನು ವ್ಯವಸ್ಥೆಯ ಬೆನ್ನೆಲುಬು ಮತ್ತು ಮೂಲಾಧಾರ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಜಿಲ್ಲಾ ನ್ಯಾಯಾಧೀಶರು ನ್ಯಾಯಾಂಗದ ಸಂಪರ್ಕದ ಮೊದಲ ಬಿಂದು. 

ನ್ಯಾಯಾಂಗದ ಅಧಿಕಾರಿಗಳು ನ್ಯಾಯ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಜಿಲ್ಲಾ ನ್ಯಾಯಾಲಯಗಳಲ್ಲಿರುವ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. 

ಮಾನವ ಸಂಪನ್ಮೂಲ, ಆಧುನಿಕತೆಯ ಅಳವಡಿಕೆ ಇನ್ನಿತರ ಉಪ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರವಿಂದಕುಮಾರ್ ಮಾತನಾಡಿ, ಕರ್ನಾಟಕ ನ್ಯಾಯದಾನದಲ್ಲಿ ಮುಂಚೂಣಿಯಲ್ಲಿದೆ. 2020-21 ರಲ್ಲಿ ಶೇ.92 ರಷ್ಟು, 2022 ರಲ್ಲಿ ಶೇ.97ರಷ್ಟು ಮತ್ತು 2023 ರಲ್ಲಿ ಶೇ.91.78ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎ.ಎಸ್‌.ಬೋಪಣ್ಣ ಹಾಗೂ ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಹರೀಶ ಉಪಸ್ಥಿತರಿದ್ದರು.ನ್ಯಾಯವು ಕೆಲವರ ಸವಲತ್ತಲ್ಲ: ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಭಾರತದ ಸಂವಿಧಾನವು ನ್ಯಾಯ, ಸಮಾನತೆ ಮತ್ತು ಸಮಾನ ಸಮಾಜದ ತತ್ವಗಳನ್ನು ಒಳಗೊಂಡು ಶ್ರೇಷ್ಠತೆಯ ದಾರಿದೀಪವಾಗಿದೆ. 

ನ್ಯಾಯವು ಕೆಲವರ ಸವಲತ್ತು ಅಲ್ಲ, ಎಲ್ಲರ ಮೂಲಭೂತ ಹಕ್ಕಾಗಿದೆ. ನ್ಯಾಯಾಲಯವು ಕೇವಲ ತೀರ್ಪು ನೀಡಲು ಮಾತ್ರವಲ್ಲ, ಸಮಾಜವನ್ನು ಉನ್ನತೀಕರಣಕ್ಕೂ ಉತ್ತಮ ರೀತಿಯಲ್ಲಿ ಸಹಕರಿಸುತ್ತದೆ. 

ನ್ಯಾಯಾಲಯಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಸರ್ಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಿರುವುದು ಸತ್ಯ ಎಂದು ತಿಳಿಸಿದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ, ಕಳೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 29 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ. 

ಅವುಗಳಲ್ಲಿ 2 ಲಕ್ಷ ವಿಚಾರಣೆಗೆ ಬಾಕಿಯಿದ್ದ ಪ್ರಕರಣಗಳಾಗಿದ್ದರೆ, 26 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳಾಗಿವೆ ಎಂದರು. 

ಕನ್ನಡದಲ್ಲಿ ಮಾತನಾಡಿದ ಸಿಜೆಐ: ಕರ್ನಾಟಕದ ಜೊತೆಗಿನ ತಮ್ಮ ಒಡನಾಟ ಸ್ಮರಿಸಿಕೊಂಡು ಕನ್ನಡದಲ್ಲಿಯೇ ಮಾತನಾಡಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಬೆಂಗಳೂರು ಆಹ್ಲಾದಕರ ನಗರ. 

ನಾನು ಇಲ್ಲಿನ ಅಳಿಯ. ನನ್ನ ಅತ್ತೆ ಮತ್ತು ಅತ್ತಿಗೆ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ವಾಸವಿದ್ದಾರೆ. ಪದೇಪದೇ ಬೆಂಗಳೂರಿಗೆ ಭೇಟಿ ನೀಡುತ್ತಿರುತ್ತೇನೆ. ಬಾಲ್ಯದಲ್ಲಿ ಧಾರವಾಡದಲ್ಲಿ ರಜಾದಿನಗಳನ್ನು ಕಳೆದಿದ್ದೇನೆ ಎಂದು ನೆನಪಿಸಿಕೊಂಡರು.