ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಕೌಜಲಗಿ ಭಾಗದಲ್ಲಿ ಬಡ ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದು ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕೋರಿದರು.ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಮಂಗಳವಾರ ₹12 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈ ಹೊಸ ಆಸ್ಪತ್ರೆಯನ್ನು ನೋಡುತ್ತಿದ್ದರೇ ದೂರದ ಬೆಳಗಾವಿ, ಬೆಂಗಳೂರು ಆಸ್ಪತ್ರೆಗಳನ್ನು ನೋಡುವ ಭಾವನೆಗಳು ಬರುತ್ತವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಸುಮಾರು ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಐವರ ನುರಿತ ತಜ್ಞ ವೈದ್ಯರ ಸೇವೆಯು ಸಾರ್ವಜನಿಕರಿಗೆ ಸಿಗಲಿದೆ. ಉತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವುದರಿಂದ ಬಡ ರೋಗಿಗಳಿಗೆ ವರದಾನ ವಾಗಲಿದೆ. ನಗರ ಪ್ರದೇಶದ ದೊಡ್ಡ ದೊಡ್ಡ ದವಾಖಾನೆಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಇದರಲ್ಲಿ ಸಿಗಲಿವೆ ಎಂದರು.ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗಲು ಖಾಲಿ ಇರುವ ಸಿಬ್ಬಂದಿಯನ್ನು ಭರ್ತಿ ಮಾಡಲು ಕ್ರಮಗಳನ್ನು ಕೈಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗುವುದು. ಸುಮಾರು ₹58 ಲಕ್ಷ ವೆಚ್ಚದಲ್ಲಿ ಫರ್ನಿಚರ್ ಕೆಲಸವನ್ನು ಮಾಡಬೇಕಿದೆ. ಅದು ಕೂಡ ಬೇಗ ಆಗಲಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ಮಾಡಿ ಕೊಟ್ಟರೂ ವೈದ್ಯರು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ. ಹೆಚ್ಚುವರಿ ಸೌಲಭ್ಯಗಳನ್ನು ದೊರಕಿಸಿಕೊಟ್ಟರೂ ವೈದ್ಯರು ಸೇವೆ ಸಲ್ಲಿಸಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.ಕೌಜಲಗಿ ಭಾಗಕ್ಕೆ ಅಗತ್ಯವಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕೊಡಲಾಗಿದೆ. ಕಲ್ಮಡ್ಡಿ ಏತ ನೀರಾವರಿ ಸೌಲಭ್ಯವನ್ನು ಅನುಷ್ಠಾನ ಮಾಡಲಾಗಿದೆ. ರಾಮ ಲಿಂಗೇಶ್ವರ ಏತ ನೀರಾವರಿ ಮತ್ತು ಕಾಲುವೆಯ ನೀರು ಹರಿಯುತ್ತಿರುವುದರಿಂದ ರೈತರ ಬದುಕು ಬಂಗಾರವಾಗುತ್ತಿದೆ. ದೇವರ ದಯೆಯಿಂದ ಮಳೆಯು ಆಗುತ್ತಿರುವುದರಿಂದ ಹಿಡಕಲ್ ಜಲಾಶಯದ ನೀರಿನ ಮಟ್ಟವು ತುಂಬಿ ತುಳುಕುತ್ತಿದೆ. ಹೆಚ್ಚಾದ ನೀರನ್ನು ರೈತರ ಹಿತಕ್ಕಾಗಿ ಈಗಾಗಲೇ ಹರಿಸಲಾಗುತ್ತಿದೆ. ಎಷ್ಟು ಬೇಕಾದರೂ ನೀರನ್ನು ಬಳಕೆ ಮಾಡಿಕೊಳ್ಳಿ. ಆದರೆ, ನೀರನ್ನು ವಿನಾಕಾರಣ ಪೋಲು ಮಾಡಬೇಡಿ ಎಂದು ರೈತ ಸಮುದಾಯಕ್ಕೆ ಕಿವಿ ಮಾತು ಹೇಳಿದರು.ವೇದಿಕೆಯಲ್ಲಿ ಗ್ರಾಪಂ ಅಧ್ಯೆಕ್ಷೆ ಯಲ್ಲವ್ವ ಈಟಿ, ಮುಖಂಡರಾದ ಡಾ.ರಾಜೇಂದ್ರ ಸಣ್ಣಕ್ಕಿ, ಮಹಾದೇವಪ್ಪ ಭೋವಿ, ಎ.ಕೆ.ನಾಯಿಕ, ಪರಮೇಶ್ವರ ಹೊಸಮನಿ,ರವೀಂದ್ರ ಪರುಶೆಟ್ಟಿ, ಅಶೋಕ್ ನಾಯಿಕ, ವಿಠ್ಠಲ ಸವದತ್ತಿ, ಬೆಳಗಾವಿ ಡಿಎಚ್‌ಒ ಡಾ.ಐ.ಪಿ.ಗಡಾದ, ಚಿಕ್ಕೋಡಿ ಎಡಿಎಚ್‌ಒ ಡಾ.ಎಸ್.ಎಸ್.ಗಡೇದ, ಗೋಕಾಕ ಟಿಎಚ್‌ಒ ಡಾ.ಎಂ.ಎಸ್.ಕೊಪ್ಪದ, ನೀಲಪ್ಪ ಕೇವಟಿ, ವೆಂಕಟೇಶ ದಳವಾಯಿ, ಶಿವಲೀಲಾ ಕುಂದರಗಿ, ಎಸ್.ಬಿ.ಕೌಜಲಗಿ, ಗ್ರಾಪಂ ಸದಸ್ಯರು, ಸಹಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಿದ್ದರಾಮಯ್ಯನವರ ಕಡೆಗೆ ಹೋಗಿ ಭಂಡಾರ ಹಾರಿಸಿ
ಅಭಿವೃದ್ಧಿ ದೃಷ್ಟಿಯಿಂದ ಹೊಸ ಜಿಲ್ಲೆಗಳು ರಚನೆಯಾದರೇ ಒಳ್ಳೆಯದು. ಅದರ ಜೊತೆಗೆ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡುವಂತೆಯೂ ಸರ್ಕಾರ ಒತ್ತಾಯಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹತ್ತಿರ ಹೋಗಿ ಭಂಡಾರವನ್ನು ಹಾರಿಸುವಂತೆಯೂ ಸ್ಥಳೀಯ ಮುಖಂಡರಿಗೆ ಹೇಳಿದ್ದಾಗಿ ತಮಾಷೆ ಮಾಡಿದರು.ಅರಭಾವಿ ಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಈಗಾಗಲೇ ₹30 ಕೋಟಿಗಳನ್ನು ನೀಡಿದ್ದಾರೆ. ಇನ್ನೂ ₹30 ಕೋಟಿ ಬಿಡುಗಡೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ. ಸುಮಾರು ₹60 ಕೋಟಿ ಅನುದಾನ ಬಂದರೇ ಪ್ರಮುಖ ರಸ್ತೆಗಳು ಅಭಿವೃದ್ಧಿ ಆಗಲಿವೆ.-ಬಾಲಚಂದ್ರ ಜಾರಕಿಹೊಳಿ,
ಶಾಸಕರು.