ಸಾರಾಂಶ
ಕಾರವಾರ:
ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುವವರ ಮತ್ತು ಸಾಗಾಣಿಕೆ ಮಾಡುವವರ ವಿರುದ್ಧ ಕಂದಾಯ, ಪೊಲೀಸ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಎಚ್ಚರಿಕೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಯಾವುದೇ ರೀತಿಯ ಪರವಾನಗೆ ನೀಡಿಲ್ಲ. ಮರಳುಗಾರಿಕೆ ಕುರಿತಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಸಿಆರ್‌ಝಡ್ ನಿಯಮದಂತೆ ಮೀನುಗಾರಿಕೆಗೆ ತೊಂದರೆಯಾಗುವ ಸ್ಥಳಗಳಲ್ಲಿ ಮಾತ್ರ ಮರಳು ದಿಬ್ಬ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿಯಾಗಿ ತೆಗೆದ ಮರಳನ್ನು ಅನಧಿಕೃತವಾಗಿ ಮಾರಾಟ ಮತ್ತು ಸಾಗಾಣಿಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮರಳುಗಾರಿಕೆ ಮಾಡಲು ಅನುಮತಿ ಪಡೆದವರು ಮರಳನ್ನು ತೆಗೆದ ನಂತರ ದಡದಲ್ಲಿಯೇ ಶೇಖರಣೆ ಮಾಡಿ ಇಡಬೇಕು. ಸಾಗಾಣಿಕೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದರು.ಅನಧಿಕೃತ ಮರಳುಗಾರಿಕೆ ಮತ್ತು ಮರಳು ಸಾಗಾಣಿಕೆ ತಡೆಗಟ್ಟಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಈ ವರೆಗೆ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಇತರೆ ಇಲಾಖೆಗಳನ್ನೊಳಗೊಡಂತೆ ಒಟ್ಟೂ 125 ಪ್ರಕರಣ ದಾಖಲಿಸಿ, ₹ 51,78,160 ದಂಡ ಸಂಗ್ರಹಿಸಲಾಗಿದೆ ಎಂದರು.ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಕುರಿತು ಮಾಹಿತಿ ಕಂಡು ಬಂದಲ್ಲಿ ಆಯಾ ತಹಸೀಲ್ದಾರ್‌ರು ಕೂಡಲೇ ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಕಾನೂನಿನ ಅನುಸಾರ ದಂಡ ವಿಧಿಸಬೇಕು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಟ್ಟಡ ಕಾಮಗಾರಿಗಳಿಗೆ ಎಲ್ಲಿಂದ ಮರಳು ಬರುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಬೇಕು ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ ಮಾತನಾಡಿ, ಅನಧಿಕೃತವಾಗಿ ಮರುಳು ಸಾಗಾಣಿಕೆ ತಡೆಗಟ್ಟಲು ಜಿಲ್ಲೆಯಲ್ಲಿ ಈಗಾಗಲೇ 11 ಚೆಕ್ ಪೋಸ್ಟ್ ನಿರ್ಮಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ಈ ವರೆಗೆ 75 ಪ್ರಕರಣ ದಾಖಲಾಗಿದ್ದು, ₹ 43,99,750 ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.ಯಾವುದೇ ಇಲಾಖೆಯವರು ಅನಧಿಕೃತವಾಗಿ ಮರುಳು ಸಾಗಾಣಿಕೆ ವಿರುದ್ಧ ದಾಳಿ ಮಾಡುವ ಸಮಯದಲ್ಲಿ ಪೊಲೀಸರ ಸಹಕಾರ ತೆಗೆದುಕೊಳ್ಳಿ, ಪೊಲೀಸ್ ಇಲಾಖೆಯ ವತಿಯಿಂದ 24*7 ಸಹಕಾರ ನೀಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬೀನ್ ಬೋಪಣ್ಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ ಮತ್ತಿತರರು ಇದ್ದರು..