ಸಾರಾಂಶ
ಚನ್ನಪಟ್ಟಣ : ಜಿಲ್ಲೆಯ ರಾಜಕಾರಣಿಗಳು ಯಾವುದೇ ಕಾರಣಕ್ಕೂ ಯುವಕರನ್ನು ಕಡೆಗಣಿಸಬಾರದು. ಪ್ರತಿ ಬೂತ್ ಮಟ್ಟದಲ್ಲಿ 20ರಿಂದ 25 ಯುವಕರ ಪಡೆ ಕಟ್ಟಿ, ಒಬ್ಬಿಬ್ಬರಿಗೆ ಇಂತಿಷ್ಟು ಜನರ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಗುರಿ ನೀಡಬೇಕು. ಯುವ ಕಾಂಗ್ರೆಸ್ ಸಮಾವೇಶಕ್ಕೆ ಕನಿಷ್ಠ 10 ಸಾವಿರ ಜನರು ಇಂತಹ ಯುವಕರ ಪಡೆ ತರಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ಖಾಸಗಿ ರೆಸಾರ್ಟ್‌ನಲ್ಲಿ ರಾಮನಗರದಲ್ಲಿ ಮೇ 11 ರಂದು ನಡೆಯುವ ಯುವ ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಹಾಗೂ ಪಕ್ಷ ಸಂಘಟನೆ ಸಭೆಯಲ್ಲಿ ಅವರು ಮಾತನಾಡಿದರು. ಸಮಾವೇಶದ ದಿನದಂದೇ ಜಿಲ್ಲೆಯ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಅಡಿಗಲ್ಲು ನಡೆಲಾಗುವುದು. ಸುಮಾರು 10 ಸಾವಿರ ಚದರಡಿ ಜಾಗದಲ್ಲಿ ಭವನ ನಿರ್ಮಾಣ ಮಾಡಲಾಗುವುದು. ನಾವು ಜಿಲ್ಲೆಗೆ ಮಾತು ಕೊಟ್ಟಂತೆ ಅನೇಕ ಕೆಲಸಗಳನ್ನು ನೀರಾವರಿ ಇಲಾಖೆಯಿಂದ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.
ರಾಜ್ಯದ ಮಂತ್ರಿ ಮಂಡಲದಲ್ಲಿರುವ ಶೇ. 50ಕ್ಕೂ ಹೆಚ್ಚು ನಾಯಕರು ಯುವ ಕಾಂಗ್ರೆಸ್‌ನಿಂದ ಬಂದವರು. ಸಚಿವರಾದ ರಾಮಲಿಂಗಾರೆಡ್ಡಿ, ಯು.ಟಿ.ಖಾದರ್, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹೀಗೆ ಹಲವಾರು ನಾಯಕರು ಕಾಂಗ್ರೆಸ್ ಪಕ್ಷದ ಆಸ್ತಿಗಳಾಗಿ ಬೆಳೆದಿದ್ದಾರೆ ಎಂದರು. ಅವಕಾಶಗಳು ನಮ್ಮನ್ನ ಹುಡುಕಿಕೊಂಡು ಬರುವುದಿಲ್ಲ. ನಾವು ಅವಕಾಶಗಳನ್ನು ಹುಡುಕಿ ಹೋಗಬೇಕು. ಕಷ್ಟಪಟ್ಟರೆ ಫಲ ಸಿಕ್ಕೆ ಸಿಗುತ್ತದೆ. ನೀವು ಅವಕಾಶ ಹುಡುಕಿದರೆ ಮಾತ್ರ, ನೀವು ಕೆಲಸ ಮಾಡಿದರೆ ಮಾತ್ರ ನಿಮ್ಮ ಆಲೋಚನೆಗಳು ಸರಿಯಾಗಿದ್ದರೆ ಮಾತ್ರ ನಿಮ್ಮ ನಾಯಕತ್ವ ಬೆಳೆಸಲು ಸಾಧ್ಯ. ಜನಸೇವೆ ಮಾಡಲ್ಲಿಕ್ಕೆ ಸಾಧ್ಯ ಎಂದು ಕಿವಿ ಮಾತು ಹೇಳಿದರು.
ರಾಹುಲ್ ಗಾಂಧಿಯವರು ಯುವ ಕಾಂಗ್ರೆಸ್ ಮೂಲಕ ಎಲ್ಲರಿಗೂ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಯುವಕರು ಇಲ್ಲ ಎಂದರೆ ಸಂಘಟನೆ ಕಷ್ಟ. ಸಿ.ಪಿ. ಯೋಗೆಶ್ವರ್ ಅವರು 35 ವರ್ಷ ಇದ್ದಾಗಲೆ ಶಾಸಕರಾಗಿ ಆಯ್ಕೆಯಾದವರು. ಯಾರೇ ರಾಜಕೀಯದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರೆ ಯುವಕರನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಬೇಕು. ಅವರ ಸಮಸ್ಯೆಗಳನ್ನು ನಿವಾರಿಸಬೇಕು ಎಂದರು.
ಜಿಲ್ಲೆಯ ಜನರನ್ನು, ಕಾರ್ಯಕರ್ತರನ್ನು ಬಿಡುವ ಮಾತೇ ಇಲ್ಲ. ನಿಮ್ಮ ವಿಶ್ವಾಸವನ್ನು ನಾವು ಕಳೆದುಕೊಳ್ಳುವುದಿಲ್ಲ. ಮತ್ತೆ ಜಿಲ್ಲೆಯಲ್ಲಿ 2028ಕ್ಕೆ ನಾಲ್ಕು ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಾಣ ಮಾಡುತ್ತೇವೆ. ಪಕ್ಷವನ್ನು, ನಿಮ್ಮನ್ನು ಬಲಿಷ್ಠ ಮಾಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಮೇ 11ಕ್ಕೆ ಆಯೋಜಿಸಿರುವ ಯುವ ಕಾಂಗ್ರೆಸ್ ಸಮಾವೇಶವನ್ನು ನಾವೆಲ್ಲ ಸೇರಿ ಯಶಸ್ವಿಗೊಳಿಸೋಣ. ಇಂದಿನಿಂದ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಯುವಕರನ್ನು ಸಂಘಟಿಸುವ ಕೆಲಸ ಮಾಡೋಣ. ಪಕ್ಷವನ್ನು ಇನ್ನು ಶಕ್ತಿಯುತವಾಗಿ ಕಟ್ಟುವ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಯುವ ಕಾಂಗ್ರೆಸ್ ಮುಖಂಡರು ಮಾಡಬೇಕು ಎಂದರು.
ಇಂದು ಸಂಕಲಗೆರೆ ರಸ್ತೆಯಲ್ಲಿರುವ ಐಸಿರಿ ಹೋಂ ಸ್ಟೇಯಲ್ಲಿ ೧೧ರಂದು ಸಭೆಯಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಎಂ.ಸಿ.ಅಶ್ವಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರ ಸಾಗರ್, ಮುಖಂಡರಾದ ಲಿಂಗೇಶ್ ಕುಮಾರ್, ದುಂತೂರು ವಿಶ್ವನಾಥ್ ಇತರರು ಇದ್ದರು.