ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಮಲೇರಿಯಾ ಮುಕ್ತ ಕರ್ನಾಟಕಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗಿದ್ದು, ರಾಜ್ಯವನ್ನು ೨೦೩೦ ರೊಳಗಾಗಿ ಮಲೇರಿಯಾ ಮುಕ್ತವಾಗಿಸುವ ಗುರಿ ಹೊಂದಲಾಗಿದೆ. ಎಲ್ಲ ಇಲಾಖೆಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ತಿಳಿಸಿದರು.ನಗರದ ಎಸ್‌ಎನ್‌ಆರ್ ಆಸ್ಪತ್ರೆ ಆವರಣದಲ್ಲಿ ವಿಶ್ವ ಮಲೇರಿಯ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿ, ವಿಶ್ವ ಮಲೇರಿಯಾ ದಿನವನ್ನು ‘ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಮಲೇರಿಯಾ ಬಗ್ಗೆ ಜಾಗೃತಿ ಅಗತ್ಯ
ಮಲೇರಿಯಾ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೆ ಈ ರೋಗವನ್ನು ಪೂರ್ಣ ತಡೆಗಟ್ಟಬಹುದು ಎಂದ ಅವರು, ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳ ಸಹಕಾರ ಸಿಗುವಂತೆ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಲೇರಿಯಾ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುತ್ತದೆ, ಇದು ಸೋಂಕಿತ ಅನಾಫಿಲೀಸ್ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರುಡುವಂತಾದ್ದಾಗಿದ್ದು, ರೋಗದ ಲಕ್ಷಣಗಳೆಂದರೆ ವಿಪರೀತ ಚಳಿ, ಬಿಟ್ಟು ಬಿಟ್ಟು ಜ್ವರ ಮೈಕೈನೋವು, ತಲೆನೋವು, ವಾಕರಿಕೆ ಮುಖ್ಯವಾದುವು ಎಂದು ತಿಳಿಸಿದರು.ರೋಗಕ್ಕೆ ಕಾರಣವಾದ ಅನಾಫ್ಲೀಸ್ ಸೊಳ್ಳೆಗಳು ಶುದ್ಧವಾದ ನೀರಿನಲ್ಲಿ ಬೆಳವಣಿಗೆಯಗುತ್ತವೆ. ಸೊಳ್ಳೆ ಕಚ್ಚಿದ ೪ ರಿಂದ ೭ ದಿನದೊಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಖಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇದ್ದು, ಸಂಪೂರ್ಣ ಗುಣಮುಖವಾಗುವುದು ಎಂದು ಅವರು ವಿವರಿಸಿದರು.
ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಉಚಿತಜಿಲ್ಲಾಶಸ್ತ್ರಚಿಕಿತ್ಸಕರಾದ ಡಾ.ಜಗದೀಶ್ ಮಾತನಾಡಿ, ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಉಚಿತವಾಗಿ ಲಭ್ಯವಿದ್ದು, ಯಾವೂದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರಕ್ತ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಇತರೆ ಸೊಳ್ಳೆ ನಿರೋಧಕಗಳನ್ನು ಬಳಸುವುದು. ಕೆರೆ, ಕುಂಟೆ, ಬಾವಿಗಳಿಗೆ ಲಾರ್ವಹಾರಿ ಮೀನುಗಳನ್ನು ಬಿಟ್ಟು ವೃದ್ದಿಮಾಡುವುದು. ಆರೋಗ್ಯ ಇಲಾಖೆ ಕೈಗೊಳ್ಳುವ ಕೀಟನಾಶಕ ಸಿಂಪಡಣೆ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ಸೊಳ್ಳೆ ನಿಯಂತ್ರಣಕ್ಕಾಗಿ ಪರಿಸರ ಸ್ನೇಹ ವಿಧಾನ ಜೈವಿಕ ನಿಯಂತ್ರಣದಡಿಯಲ್ಲಿ ಬೇವಿನ ಸೊಪ್ಪು ಹೊಗೆ ಹಾಕುವುದು ಒಳ್ಳೆಯದು ಎಂದರು.ಕಾರ್ಯಕರ್ತೆಯರಿಗೆ ಸಹಕರಿಸಿ
ತಾಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನಿಗದಿತ ಕ್ಷೇತ್ರದಲ್ಲಿ ಮನೆ ಮನೆ ಭೇಟಿ ವೇಳೆಯಲ್ಲಿ ಕಂಡು ಬರುವ ಎಲ್ಲಾ ಜ್ವರದ ಪ್ರಕರಣಗಳಿಗೆ ರಕ್ತ ಲೇಪನಗಳನ್ನು ಸಂಗ್ರಹಿಸಿ ಮಲೇರಿಯಾ ಪರೀಕ್ಷೆಗೊಳಪಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಿದ್ದು ಜನತೆ ಅವರಿಗೆ ಸಹಕರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಣುಕಾದೇವಿ, ಗೀತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ್, ಲೋಕೇಶ್, ರಘುಪತಿ ಸೇರಿದಂತೆ ಜಿಲ್ಲಾಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು,ಪ್ಯಾರಾ ಮೆಡಿಕಲ್ ತರಬೇತಿ ವಿದ್ಯಾರ್ಥಿಗಳು ಜಿಲ್ಲಾ ಎಸ್‌ಎನ್ ಆರ್ ಆಸ್ಪತ್ರೆ ಆವರಣದಿಂದ ಜಾಥಾ ನಡೆಸಿದರು.ಜನಜಾಗೃತಿಗೆ ಜಾಥಾ
ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಂಚರಿಸಿ ಮುಂಜಾಗ್ರತಾ ಕ್ರಮಗಳ ಕರಪತ್ರಗಳನ್ನು ವಿತರಿಸಿ, ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ನಗರದ ಬಾಲಕರ ಕಾಲೇಜು ಸಮೀಪ, ಸರ್ವಜ್ಞ ಪಾರ್ಕ್ ಮುಂಭಾಗ, ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಲಾಯಿತು.