ಮತದಾರರ ಪಟ್ಟಿಗೆ ಸೇರಲು ಹರಸಾಹಸ

| Published : Oct 17 2023, 12:30 AM IST

ಸಾರಾಂಶ

ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗಾಗಿ ಸಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ, ವಿಧಿಸಲಾಗಿರುವ ಕಟ್ಟುಪಾಡುಗಳು ಈಶಾನ್ಯದ ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪದವೀಧರರು ಮತದಾರರ ಯಾದಿ ಸೇರಲು ಹರಸಾಹಸ ಮಾಡುವಂತಾಗಿದೆ.
ಈಶಾನ್ಯ ಪದವೀಧರರ ಮತದಾರರ ಪಟ್ಟಿ ಪರಿಷ್ಕರಣೆ ಶುರುವಾಗಿ 2 ವಾರ, ನಿರೀಕ್ಷೆಯಂತೆ ನೋಂದಣಿ ಇಲ್ಲ ಶೇಷಮೂರ್ತಿ ಅವಧಾನಿ ಕನ್ನಡಪ್ರಭ ವಾರ್ತೆ ಕಲಬುರಗಿ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗಾಗಿ ಸಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ, ವಿಧಿಸಲಾಗಿರುವ ಕಟ್ಟುಪಾಡುಗಳು ಈಶಾನ್ಯದ ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪದವೀಧರರು ಮತದಾರರ ಯಾದಿ ಸೇರಲು ಹರಸಾಹಸ ಮಾಡುವಂತಾಗಿದೆ. ಪದವೀಧರ ಮತದಾರರ ಹೆಸರು ನೊಂದಣಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ವಿಧಿಸಿರುವ ಕಟ್ಟುಪಾಡುಗಳೇ ಮತದಾರರ ನೋಂದಣಿಗೆ ಹಿನ್ನೆಡೆಯಾಗಿವೆ ಎಂಬ ಅಭಿಪ್ರಾಯ ಪದವೀಧರರ ಸಮೂಹದಿಂದಲೇ ಕೇಳಿಬರಲಾರಂಭಿಸಿದೆ. ಪದವೀಧರ ಮತದಾರರ ಹೆಸರು ನೊಂದಣಿಗೆ ಪದವಿ ಪ್ರಮಾಣಪತ್ರ, ಸ್ವಯಂ ದೃಢೀಕರಣ, ಆಧಾರ್ ಇಲ್ಲವೇ ಚುನಾವಣಾ ಗುರುತಿನ ಚೀಟಿ ಕೇಳಬೇಕು, ಆ ಮೂಲಕ ಪದವೀಧರ ಮತದಾರರು ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಆದರೆ ಈಗ ವಾಸಸ್ಥಳ ಪ್ರಮಾಣಪತ್ರವನ್ನೂ ಕೇಳುತ್ತಿದ್ದಾರೆ. ಖುದ್ದು ನಾವೇ ನೋಂದಣಾಧಿಕಾರಿ ಮುಂದೆ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುತ್ತಿದ್ದಾರೆ, ಇಂತಹ ಅವಾಸ್ತವಿಕ ಸಂಗತಿಗಳನ್ನು ಕೈಬಿಡಬೇಕೆಂದು ಪದವೀಧರರು ಆಗ್ರಹಿಸುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಕಳೆದ ಸೆ.30ರಿಂದಲೇ ಶುರುವಾಗಿದ್ದು, ನ.6 ಕೊನೆಯ ದಿನವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪದವೀಧರ ಮತದಾರರು ತಮ್ಮ ಹೆಸರು ನೊಂದಾಯಿಸಿಕೊಳ್ಳಲಾಗುತ್ತಿಲ್ಲ. ಒಂದು ಅಂದಾಜಿನ ಪ್ರಕಾರ 6ರಿಂದ 8 ಲಕ್ಷದಷ್ಟು ಪದವೀಧರರು ಇಲ್ಲಿದ್ದರೂ ಕೂಡಾ, 5 ಸಾವಿರದಷ್ಟು ಪದವೀಧರರು ಮಾತ್ರ 2 ವಾರದಲ್ಲಿ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಇದುವರೆಗೂ ನೋಂದಣಿ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ! ಇ‍ವರೆಲ್ಲ ಅರ್ಹರು: 2023ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 2020ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. 2020ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಹರಾಗಿರುತ್ತಾರೆ. ನೂರೆಂಟು ಪ್ರಶ್ನೆಗಳು ಉದ್ಭವ: 10 ಲಕ್ಷ ಪದವೀಧರರು, ಅಲ್ಪಾವಧಿಯಲ್ಲೇ ಇವರೆಲ್ಲರ ನೋಂದಣಿ ಸಾಧ್ಯವೆ? ಪದವೀಧರ ಮತದಾರರ ನೊಂದಣಿಗೆ ವಾಸಸ್ಥಳ ಪ್ರಮಾಣಪತ್ರ ಕಡ್ಡಾಯ ಯಾಕೆ? ಎಂದು ಪದವೀಧರರು, ರಾಜಕೀಯ ಪತ್ರಕ್ಷಗಳ ಮುಖಂಡರುಗಳು ಚುನಾವಣಾ ಆಯೋಗದ ಮತದಾರರ ಯಾದಿ ಪರಿಷ್ಕರಣೆಯ ಸುತ್ತ ನೂರೆಂಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಪದವೀಧರ ಮತದಾರರ ನೊಂದಣಿಗೆ ವಾಸಸ್ಥಳ ಪ್ರಮಾಣಪತ್ರ ಕಡ್ಡಾಯ ಯಾಕೆ ಮಾಡಬೇಕು? ಪದವೀಧರರು ಇಲ್ಲಿ ಕಲಿತವರು ಎಲ್ಲೋ ನೌಕರಿಗಾಗಿ ಇರುವಾಗ ವಾಸಸ್ಥಳ ಪತ್ರಕ್ಕೆ ಅಲೆದಾಡುವ ಸ್ಥಿತಿಯಲ್ಲವೆ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಪದವೀಧರ ಮತದಾರರ ಹೆಸರು ನೊಂದಣಿಗೆ ಸಂಬಂಧಿಸಿದಂತೆ ವಾಸಸ್ಥಳ ಪ್ರಮಾಣಪತ್ರ ಕೇಳೋದು ಸರಿಯಲ್ಲ, ವಾಸಸ್ಥಳಕ್ಕೂ ಮತದಾರರ ಹೆಸರು ನೊಂದಣಿಗೂ ಯಾವುದೇ ಸಂಬಂಧವಿಲ್ಲ. ಅಗತ್ಯವಿರುವ ದಾಖಲೆಗಳನ್ನು ಪರಿಗಣಿಸುವ ಮೂಲಕ ಪದವೀಧರ ಮತದಾರರು ಸುಲಭವಾಗಿ ಹಾಗೂ ಸರಳವಾಗಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಬಾಕ್ಸ್‌.. ಹೆಸರು ನೋಂದಣಿಗೆ ಅಡ್ಡಿಯಾದ ಅಂಶಗಳಿವು ಪದವೀಧರರ ಮತದಾರರ ನೊಂದಣಿ ಮಾಡಿಕೊಳ್ಳುವವರ ಸಂಖ್ಯೆಯು ಪ್ರತಿ ಚುನಾವಣೆಯಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಳೆದ 2012ರಲ್ಲಿ ಸುಮಾರು 90 ಸಾವಿರ, 2016ರಲ್ಲಿ 78000 ಪದವೀಧರರು ತಮ್ಮ ಹೆಸರು ನೊಂದಣಿ ಮಾಡಿಕೊಂಡಿದ್ದರು. ಪ್ರಸ್ತುತ ಒಂದು ತಿಂಗಳಲ್ಲಿ ಕೇವಲ ಐದು ಸಾವಿರ ಪದವೀಧರ ಮತದಾರರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಹೀಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಮತದಾರರ ಸಂಖ್ಯೆ ಕುಸಿಯುತ್ತಿದೆ ಎನ್ನಬಹುದು. ಮತದಾರರ ನೊಂದಣಿ ಸುಲಭವಾಗಿ ಹಾಗೂ ಸರಳವಾಗಿ ಮಾಡಿಕೊಳ್ಳಲು ಆಗದಿರುವುದೇ ಮೂಲ ಕಾರಣ. ಪದವೀಧರ ಮತದಾರರು ಖುದ್ದು ನೊಂದಣಿ ಕಚೇರಿಗೆ ಹೋಗಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಹಾಗೂ ವಾಸಸ್ಥಳ ಪ್ರಮಾಣಪತ್ರ ಕಡ್ಡಾಯವಾಗಿ ಸಲ್ಲಿಸಬೇಕೆಂಬ ನಿಯಮಗಳು ನೊಂದಣಿ ಪ್ರಕ್ರಿಯೆಗೆ ದೊಡ್ಡ ಅಚಡಣೆಯಾಗಿವೆ. ಕೋಟ್‌... ಸಾರ್ವತ್ರಿಕ ಚುನಾವಣೆಯಲ್ಲಿದ್ದಂತೆ ಪದವೀಧರ ಮತದಾರರಿಗೂ ಆನ್‌ಲೈನ್‌ ಮೂಲಕ ಹೆಸರು ಸೇರಿಕೆಗೆ ಅವಕಾಶ ಕೊಡಬೇಕು. ಕೈಪಿಡಿ ಮೂಲಕ ನೋಂದಣಿ ಅವೈಜ್ಞಾನಿಕ, ಈ ಭಾಗದಲ್ಲಿರುವ ವಿವಿಗಳು, ಪಂಚಾಯ್ತಿಗಳಲ್ಲೇ ನೋಂದಣಿಗೆ ಅವಕಾಶ ಕೊಟ್ಟಾಗ ಹೆಚ್ಚಿನ ನೋಂದಣಿ ಸಾಧ್ಯ. - ಸೈಬಣ್ಣ ಜಮಾದಾರ್‌ ಈಶಾನ್ಯ ಪದವೀಧರ ಕ್ಷೇತ್ರ ಆಕಾಂಕ್ಷಿ --- ಪದವೀಧರರಿಗೆ ವಾಸಸ್ಥಳ ಪತ್ರ ಕೇಳೋದು ಸರಿಯಲ್ಲ. ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಇನ್ನಷ್ಟೂ ಸರಳ ಕ್ರಮಗಳು ಬರಬೇಕೇ ಹೊರತು ಗೋಜಲು ಕ್ರಮಗಳು ಕೈಬಿಡಬೇಕು. ನೋಂದಣಿ ಕೊನೆಯ ದಿನಂಕ ವಿಸ್ತರಿಸಬೇಕು, ಅನಗತ್ಯ ದಾಖಲೆಗಳನ್ನು ಪರಿಗಣಿಸದೇ ಇರುವಂತೆ ಚುನಾವಣಾ ಆಯೋಗವು ಕ್ರಮಗಳನ್ನು ಕೈಗೊಳ್ಳಬೇಕು - ಶರಣಪ್ಪ ಮಟ್ಟೂರ್‌, ಮಾಜಿ ಎಂಎಲ್‌ಸಿ --- ಮತದಾರರ ಹೆಸರು ನೊಂದಣಿ ಪ್ರಕ್ರಿಯೆಗೆ ನೀಡಿರುವ 1 ತಿಂಗಳ ಕಾಲಾವಕಾಶ ಅಲ್ಪ, ಇದನ್ನು ಕೂಡಲೇ ವಿಸ್ತರಿಸಬೇಕು, ಈಶಾನ್ಯ ಪದವೀಧರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಏಳು ಜಿಲ್ಲೆಗಳು, 41 ತಾಲೂಕುಗಳು ಒಳಪಡುತ್ತಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಪದವೀಧರ ಮತದಾರರಿದ್ದಾರೆ. ಮತದಾರರ ಹೆಸರು ನೊಂದಣಿಗೆ ಎಲ್ಲ ದಾಖಲೆಗಳನ್ನು ಕ್ರೋಢಿಕರಿಸಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಲು ಸಾಕಷ್ಟು ಸಮಯವಕಾಶ ಬೇಕು. - ಸುರೇಶ ಸಜ್ಜನ್‌, ಈಶಾನ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ