ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಸಾಯನಿಕ ಜೀವಶಾಸ್ತ್ರದ ಪ್ರಗತಿಯೊಂದಿಗೆ ವಿದ್ಯಾರ್ಥಿಗಳು ಮಾಲಿನ್ಯದಂತಹ ಸವಾಲು ಎದುರಿಸುವ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬಹುದಾಗಿದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಡಾ.ಎಂ.ಎ.ಶೇಖರ್ ತಿಳಿಸಿದರು.ತಾಲೂಕಿನ ಬಿ.ಜಿ.ನಗರದಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಭಾರತ ಘಟಕದ ಸಹಭಾಗಿತ್ವದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಆಯೋಜಿಸಿದ್ದ ಯೂಸೂಫ್ ಹಮೀದ್ ರಸಾಯನಶಾಸ್ತ್ರ ಶಿಬಿರ ಉದ್ಘಾಟಿಸಿ ಮಾತನಾಡಿ, ರಸಾಯನಶಾಸ್ತ್ರವು ನಮ್ಮ ಸುತ್ತಲ ಪರಿಸರದಲ್ಲಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ವಿಧಗಳಲ್ಲಿ ಬಳಸಿಕೊಳ್ಳಬಹುದು. ಇದು ಔಷಧಿಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ ಎಂದರು.
ಸ್ಫೂರ್ತಿದಾಯಕ ವಿಜ್ಞಾನ ಕಾರ್ಯಕ್ರಮದ ಭಾಗವಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಈ ಶಿಬಿರ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ರಸಾಯನಶಾಸ್ತ್ರ ಅನ್ವೇಷಿಸಲು ಶಿಬಿರದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಮತ್ತು ಅದರಾಚೆಗೂ ರಸಾಯನಶಾಸ್ತ್ರವನ್ನು ಮುಂದುವರಿಸಲು ಮಕ್ಕಳನ್ನು ಪ್ರೇರೇಪಿಸುತ್ತದೆ ಎಂದರು.ವಿವಿ ಕುಲಸಚಿವ ಪ್ರೊ.ಸಿ.ಕೆ.ಸುಬ್ಬರಾಯ ಮಾತನಾಡಿ, ವಿಶ್ವವಿದ್ಯಾಲಯವು ಆರಂಭದಿಂದಲೂ ನೆರೆಹೊರೆಯ ಶಾಲೆಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಸಂಪರ್ಕ ಕಾರ್ಯಕ್ರಮ ಆಯೋಜಿಸಿ, ಅಲ್ಲಿನ ಮಕ್ಕಳ ಶೈಕ್ಷಣಿಕ ಬೆಳೆವಣಿಗೆಗೆ ಒತ್ತು ನೀಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ ಅವರು ವಿಜ್ಞಾನ ಶಿಕ್ಷಣ ಅಧ್ಯಯನಕ್ಕೆ ಪ್ರರೇಪಿಸುವುದು ನಮ್ಮ ಗುರಿಯಾಗಿದೆ ಎಂದರು.
ಹಿರಿಯ ವಿಜ್ಞಾನಿ ಹಾಗೂ ವಿವಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ.ಕೆ.ಪ್ರಶಾಂತ ಕಾಳಪ್ಪ ಮಾತನಾಡಿ, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಭಾರತ ಘಟಕದ ಸಹದ್ಯೋಗಿಗಳು ದೇಶದಲ್ಲಿ ರಸಾಯನಶಾಸ್ತ್ರ ಶಿಬಿರಗಳನ್ನು ಆಯೋಜಿಸುವ ಮೂಲಕ ದೇಶದ ಶಿಕ್ಷಣ ಕ್ಷೇತ್ರದೊಂದಿಗೆ ಕೆಲಸ ಮಾಡುತ್ತಾ, ಕೆಮಿಸ್ಟ್ರಿ ಅಧ್ಯಯನ ಬೆಂಬಲಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ರಾಸಾಯನಿಕ ವಿಜ್ಞಾನಗಳ ಪ್ರಯೋಜನ ದಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಿಬಿರದಲ್ಲಿ ಪಾಲ್ಗೊಂಡಿದ್ದ ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳ ಸರ್ಕಾರಿ ಪ್ರೌಢಶಾಲೆಗಳ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸಾಯನಶಾಸ್ತ್ರದ ಪ್ರಯೋಗ ಕಂಡು ಬೆರಗಾದರು. ಮಕ್ಕಳಲ್ಲಿ ರಸಾಯನಶಾಸ್ತ್ರದ ಕುತೂಹಲ ತಣಿಸಿದ ಶಿಬಿರವು ಅವರಲ್ಲಿ ವಿಜ್ಞಾನದ ಆಸಕ್ತಿಯನ್ನು ಹೆಚ್ಚು ಮಾಡಿತು.
ವಿಷಯದ ಬಗ್ಗೆ ಆಸಕ್ತಿ ಮೂಡಿಸುವ ಜೊತೆಗೆ ರಸಾಯನಶಾಸ್ತ್ರದ ಕಲಿಕೆಯನ್ನು ಆನಂದದಿಂದ ಆಸ್ವಾದಿಸುವುದು ಹೇಗೆಂಬುದನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಸುರಕ್ಷತಾ ಪರಿಕರಗಳು ಮತ್ತು ಸಲಕರಣೆಗಳನ್ನು ಪರಿಚಯಿಸಲಾಯಿತು.ಬಣ್ಣ ರಚನೆ, ಸ್ಫಟಿಕೀಕರಣ, ಫೋರೆನ್ಸಿಕ್ ಚಾಲೆಂಜ್, ಗಡಿಯಾರ ಪ್ರತಿಕ್ರಿಯೆಗಳು, ಲೋಳೆ ಪ್ರತಿಕ್ರಿಯೆ, ಜಾಗತಿಕ ಕಾಯಿನ್ ಬ್ಯಾಟರಿ ಪ್ರಯೋಗಗಳು ಸೇರಿದಂತೆ ವಿವಿಧ ಕಿರು ಪ್ರಯೋಗಗಳನ್ನು ಮಕ್ಕಳಿಂದ ಮಾಡಿಸಿ, ಹಲವು ಪ್ರಯೋಗಗಳನ್ನು ಹೇಳಿಕೊಡಲಾಯಿತು.
ಡಾ.ವೈ.ಆರ್.ಗಿರೀಶ್, ಡಾ.ಎಸ್.ಎಂ.ಅನುಷ, ಡಾ. ಅವಿನಾಶ್, ಡಾ.ಕೆ.ಎನ್.ನಂದೀಶ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ಶಿಬಿರದ ದಿನಕ್ಕಾಗಿ ನಾನು ಕಾತುರಗಳಾಗಿದ್ದೆ. ಇಲ್ಲಿ ನಾವು ರಾಸಾಯನಿಕಗಳ ಬಗ್ಗೆ ಅನೇಕ ಹೊಸ ವಿಷಯಗಳನ್ನು ಕಲಿತೆವು. ವಿವಿಧ ಬಣ್ಣಗಳ ಉತ್ಪಾದನೆ, ಸ್ಫಟಿಕೀಕರಣ ಪ್ರಕ್ರಿಯೆಗಳು ನನ್ನಲ್ಲಿ ಖುಷಿ ತರಿಸಿತು. ಇದೆಲ್ಲವನ್ನು ಹೇಳಿಕೊಳ್ಳಲು ನನ್ನ ಶಾಲೆಗೆ ಯಾವಾಗ ಹೋಗುತ್ತೇನೋ ಎಂದು ಕಾಯುತ್ತಿದ್ದೇನೆ.-ಕು.ಲಿಖಿತಾ, ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ
ಇಂಥ ಪ್ರಯೋಗಗಳನ್ನು ನಾವು ಮಾಡಿರಲೇ ಇಲ್ಲ. ಬ್ಯಾಟರಿ ತಂತ್ರಜ್ಞಾನ ನನ್ನಲ್ಲಿ ಅಚ್ಚರಿ ಮೂಡಿಸಿತು. ಇದನ್ನು ನನ್ನ ಶಾಲೆ ಗೆಳತಿಯರಿಗೂ ಹೇಳಿಕೊಡುತ್ತೇನೆ. ಹತ್ತನೇ ತರಗತಿ ನಂತರ ಕೆಮಿಸ್ಟ್ರಿ ಅಧ್ಯಯನವನ್ನೇ ಮಾಡಬೇಕೆನಿಸುತ್ತಿದೆ.
-ಕು.ಚೈತ್ರ, ಕದಬಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ