ಕನ್ನಡ ಸಾಹಿತ್ಯ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ ಅಭಿರುಚಿ ಇರಲಿ: ಎಚ್.ಎಸ್. ರಘು

| Published : Mar 29 2024, 12:46 AM IST

ಕನ್ನಡ ಸಾಹಿತ್ಯ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ ಅಭಿರುಚಿ ಇರಲಿ: ಎಚ್.ಎಸ್. ರಘು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ ಸಾವಿರಾರು ವರ್ಷ ಇತಿಹಾಸ ಹೊಂದಿದೆ. ಮಾತೃಭಾಷೆ ಕನ್ನಡ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಮಾತೃಭಾಷೆ ಕಲಿತಾಗ ಮಾತ್ರ ಅನ್ಯಭಾಷೆ ಕಲಿಯಲು ಸಾಧ್ಯ. ದತ್ತಿ ದಾನಿಗಳ ಸಹಕಾರದಿಂದ ಕನ್ನಡ ಸಾಹಿತ್ಯ ತಲುಪಿಸುವ ಕಾರ್ಯ ಪರಿಷತ್ ನಿರಂತರ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಾಹಿತ್ಯದ ಓದು ಮನಸ್ಸಿಗೆ ಸಂತೋಷ ನೀಡುತ್ತದೆ, ವಿಶಾಲವಾದ ಸಾಹಿತ್ಯ ಕ್ಷೇತ್ರದ ಬಗ್ಗೆ ತಿಳಿಯುತ್ತಾ ಹೋದಲ್ಲಿ ಅರಿಯುವ ಹಂಬಲ ಹೆಚ್ಚಾಗಲಿದೆ ಸಾಹಿತ್ಯದಿಂದ ಭಾಷೆಯ ಬಗ್ಗೆ ಪ್ರೌಢಿಮೆ ಹೆಚ್ಚಾಗಲಿದೆ. ಈ ದಿಸೆಯಲ್ಲಿ ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಸಾಹಿತ್ಯ ಕ್ಷೇತ್ರದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಕೈಗಾರಿಕಾ ಸಂಸ್ಥೆ (ಸರ್ಕಾರಿ ಐಟಿಐ) ಕಾಲೇಜಿನಲ್ಲಿ ತಾಲೂಕು ಕಸಾಪ ಹಾಗೂ ಸರ್ಕಾರಿ ಕೈಗಾರಿಕಾ ಸಂಸ್ಥೆ (ಸರ್ಕಾರಿ ಐಟಿಐ) ಕಾಲೇಜು ಆಶ್ರಯದಲ್ಲಿ ನಡೆದ ಚುರ್ಚಿಗುಂಡಿ ಜಿ.ಬಸವನಗೌಡ ಹಾಗೂ ದಿ.ಅಶೋಕ್ ಎಸ್.ಪಾಟೀಲ್ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ

ಕನ್ನಡ ಭಾಷೆ ಸಾವಿರಾರು ವರ್ಷ ಇತಿಹಾಸ ಹೊಂದಿದೆ. ಮಾತೃಭಾಷೆ ಕನ್ನಡ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಮಾತೃಭಾಷೆ ಕಲಿತಾಗ ಮಾತ್ರ ಅನ್ಯಭಾಷೆ ಕಲಿಯಲು ಸಾಧ್ಯ. ದತ್ತಿ ದಾನಿಗಳ ಸಹಕಾರದಿಂದ ಕನ್ನಡ ಸಾಹಿತ್ಯ ತಲುಪಿಸುವ ಕಾರ್ಯ ಪರಿಷತ್ ನಿರಂತರ ಮಾಡುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಕೈಗಾರಿಕಾ ಸಂಸ್ಥೆ ಪ್ರಾಂಶುಪಾಲ ವಿಜಯಕುಮಾರ್ ಸಪಲಿ, ಕನ್ನಡ ಬಳಸುವ ಮೂಲಕ ಭಾಷೆ ಉಳಿಸಿ ಕನ್ನಡಾಭಿಮಾನ ಪ್ರದರ್ಶಿಸಬೇಕು. ಮಾತೃಭಾಷೆ ಕನ್ನಡ ಕಲಿಯಲು ಆದ್ಯತೆ ನೀಡಿ ಭಾಷೆ ಪ್ರೀತಿಸಬೇಕು. ಕನ್ನಡ ಕಲಿಕೆಯಿಂದ ಜ್ಞಾನ ಸಿಗುತ್ತದೆ. ಇಂಗ್ಲೀಷ್ ಮಾತನಾಡುವುದೇ ಸಾಧನೆಯಲ್ಲ. ಪತ್ರ ವ್ಯವಹಾರ ಕನ್ನಡದಲ್ಲಿ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ವಿವಿಧ ಕನ್ನಡ ಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಭಾಷೆಗೆ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.

ಮಹಾನ್ ಶ್ರೇಷ್ಠರು ಜಮಿಸಿದ ತಾಲೂಕು:

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶಿಕಾರಿಪುರ ತಾಲೂಕಿನ ಕೊಡುಗೆ ವಿಷಯ ಕುರಿತು ಮಾತನಾಡಿದ ಸರ್ಕಾರಿ ಸ್ವತಂತ್ರ ಪಿಯು ಕಾಲೇಜು ಉಪನ್ಯಾಸಕ ಬಂಗಾರಪ್ಪ, ಕನ್ನಡ ಸಾಮ್ರಾಜ್ಯ ಸ್ಥಾಪಕ ಮಯೂರ ವರ್ಮ ಈ ತಾಲೂಕಿನವರು. ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅನುಭವ ಮಂಟಪ ಅಧ್ಯಕ್ಷ ಅಲ್ಲಮ ಪ್ರಭು, ಮಹಿಳಾ ಪ್ರಥಮ ವಚನಗಾರ್ತಿ ಅಕ್ಕಮಹಾದೇವಿ, ಸತ್ಯಕ್ಕ, ಮುಕ್ತಾಯಕ್ಕ ಸೇರಿ ಹಲವು ಶಿವಶರಣರು ಈ ಮಣ್ಣಿನಲ್ಲಿ ಜನ್ಮತಾಳಿರುವುದು ಹೆಮ್ಮೆಯ ವಿಷಯ. ತಾಲೂಕಿನಲ್ಲಿ ಕಲ್ಲು ಎಡವಿದರೂ ಶಿಲಾ ಶಾಸನ ದೊರೆಯುತ್ತದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಈ ತಾಲೂಕಿನಲ್ಲಿ ಜನಿಸಿದ್ದಾರೆ ಎಂದರು.

ಡಿವಿಜಿ ಮಂಕುತಿಮ್ಮನ ಕಗ್ಗದ ಕುರಿತು ಸಾಲೂರು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಪ್ರಕಾಶ್ ಮಾತನಾಡಿ ಡಿ.ವಿ.ಗುಂಡಪ್ಪನವರು ಕನ್ನಡ ಸಾರಸ್ವತ ಲೋಕಕ್ಕೆ ಹಾಗೂ ಪತ್ರಿಕೋದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 1943ರಲ್ಲಿ ಪ್ರಕಟವಾದ ಡಿವಿಜಿಯವರ ಮಂಕುತಿಮ್ಮನ ಕಗ್ಗ ಕೃತಿ ಹೆಚ್ಚು ಜನರು ಓದುವ ಕೃತಿ, ಆಧುನಿಕ ಕನ್ನಡ ಭಗವದ್ಗೀತೆ. ಕಗ್ಗದ ಅಂಶಗಳು ಇಂದು ಪ್ರಸ್ತುತವಾಗಿವೆ ಎಂದು ಶ್ಲಾಘಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ನಂದಾ, ಸಂದೀಪ್, ವಸಂತ ಕುಮಾರ್, ಸರ್ಕಾರಿ ಕೈಗಾರಿಕಾ ಸಂಸ್ಥೆ (ಸರ್ಕಾರಿ ಐಟಿಐ) ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಕೆ.ಸಿ.ನರಸಿಂಹಮೂರ್ತಿ, ಎಸ್.ಲಿಂಗಪ್ಪ, ಮಹೇಂದ್ರಪ್ಪ, ರಮೇಶಪ್ಪ ಕರಿಯಪ್ಪಳ, ಜಿ.ಶೃತಿ, ನಾಗರಾಜ್, ಸಿಬ್ಬಂದಿ ನಾಗಲಕ್ಷ್ಮಿ ಉಪಸ್ಥಿತರಿದ್ದರು.