ಸಾರಾಂಶ
ಧಾರವಾಡ: ಹು-ಧಾ ಮಹಾನಗರ ಪಾಲಿಕೆಯಿಂದ ಪ್ರತ್ಯೇಕಿಸಿ ಧಾರವಾಡ ಪಾಲಿಕೆ ರಚನೆ ಮಾಡಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮುಂದುವರೆದ ಭಾಗವಾಗಿ ಆಕ್ಷೇಪಣೆ ಸಲ್ಲಿಸಲು ನೀಡಿದ ಕಾಲಾವಕಾಶದಲ್ಲಿ ಬರೋಬ್ಬರಿ 19 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಆದರೆ, ಈ ಎಲ್ಲ ಆಕ್ಷೇಪಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಹುತೇಕ ಎಲ್ಲವೂ ಒಂದೇ ಮಾದರಿಯಾಗಿದ್ದು ಅಚ್ಚರಿ ಮೂಡಿಸಿದೆ.
ಮಾಜಿ ಮೇಯರ್‌ಗಳಾದ ಈರೇಶ ಅಂಚಟಗೇರಿ, ರಾಧಾಬಾಯಿ ಸಫಾರೆ, ಸತೀಶ ಹಾನಗಲ್, ಸದ್ಯದ ಸಭಾನಾಯಕ ವೀರಣ್ಣ ಸವಡಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ ಕೌಜಗೇರಿ, ಪಾಲಿಕೆ ಸದಸ್ಯರಾದ ಸವಿತಾ ಮಾಳವದಕರ, ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಚಂದ್ರಶೇಖರ ಮನಗುಂಡಿ, ಲಕ್ಷ್ಮೀ ಹಿಂಡಸಲಗೇರಿ, ಚಂದ್ರಕಲಾ ಕೊಟಬಾಗಿ, ಹುಸೇನಬಿ ನಲವತವಾಡ, ಶಂಕರ ಶೇಳಕೆ, ನಗರ ಯೋಜನೆ ಮತ್ತು ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಪ್ಪ ಖಂಡೇಕಾರ, ವಹೀದಾ ಕಿತ್ತೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡರ ಹಾಗೂ ಶ್ರೀಶೈಲ ಯಕ್ಕುಂಡಿಮಠ, ಡಿಪ್ಲೋಮಾ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.ಕಾಪಿ ಪೇಸ್ಟ್ ಮಾದಿರಿಯ ಆಕ್ಷೇಪಣೆಗಳು
ಈ ಎಲ್ಲರೂ ತಮ್ಮ ಹೆಸರಿನ ಪತ್ರಗಳಲ್ಲಿ ಪೌರಾಡಳಿತ ನಿರ್ದೇಶನಾಲಯಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಪಾಲಿಕೆಯ ಸದಸ್ಯರೂ ಒಂದೇ ಮಾದರಿಯ (ಕಾಪಿ ಪೇಸ್ಟ್ ಮಾದರಿ) ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಕೆಯಾಗಿರುವ ಆಕ್ಷೇಪಣೆ ಪಾಲಿಕೆ ಸದಸ್ಯರು ಸಲ್ಲಿಸಿದ ಆಕ್ಷೇಪಣೆಯೇ ಆಗಿದ್ದು ಆದರೆ, ಭಾಷೆ ಮಾತ್ರ ಇಂಗ್ಲೀಷನದ್ದಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಪಾಲಿಕೆಗಾಗಿ ಹೋರಾಟ ಮಾಡಿದ ಹೋರಾಟಗಾರರು, ಈ ಆಕ್ಷೇಪಣೆಗಳು ಉದ್ದೇಶಪೂರ್ವಕ. ಧಾರವಾಡ ಪ್ರತ್ಯೇಕ ಪಾಲಿಕೆ ಆಗದಂತೆ ನೋಡಿಕೊಳ್ಳಲು ಮಾಡುತ್ತಿರುವ ಹುನ್ನಾರ ಎಂದೇ ಆರೋಪಿಸಿದ್ದಾರೆ. ಇನ್ನು, ಇಬ್ಬರು ಎಐಎಂಐಎಂ ಹಾಗೂ ಒಬ್ಬರು ಜೆಡಿಎಸ್ ಸದಸ್ಯರನ್ನು ಹೊರತು ಪಡಿಸಿ ಉಳಿದವರೆಲ್ಲರೂ ಬಿಜೆಪಿ ಸದಸ್ಯರೇ ಆಗಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.ಆಕ್ಷೇಪಣೆಯಲ್ಲೇನಿದೆ
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಎಂದು ವಿಭಜನೆಗೆ ಕಾನೂನು ಆಧಾರಗಳ ಕೊರತೆ ಇದ್ದು, ಪ್ರಸ್ತಾವಿತ ವಿಭಜನೆಯು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ಸ್ ಆಕ್ಟ್ 1976ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಮೀರಿದೆ. ಅಸ್ತಿತ್ವದಲ್ಲಿರುವ ನಿಗಮವನ್ನು ಎರಡು ಪ್ರತ್ಯೇಕ ಮಹಾನಗರ ಪಾಲಿಕೆಗಳಾಗಿ ವಿಭಜಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಮತ್ತು ಅನುಸೂಚಿತ ಬಿ(1)ರಲ್ಲಿ ಉಲ್ಲೇಖಿಸಿರುವ ಗಡಿಗಳನ್ನು ಧಾರವಾಡ ಮಹಾನಗರ ಪಾಲಿಕೆ ಎಂದು ಘೋಷಿಸುವ ಅಧಿಕಾರ ಈ ನಿಯಮಗಳಲ್ಲಿ ಅವಕಾಶವಿರುವುದಿಲ್ಲ.ಅಲ್ಲದೇ ಚುನಾಯಿತ ಪಾಲಿಕೆ ಸದಸ್ಯರ ಅವಧಿಯು 2027ರ ವರೆಗೆ ಇದ್ದು, ಈ ಅಧಿಸೂಚನೆಗೆ ಅಡ್ಡಿಪಡಿಸುತ್ತದೆ. ಮಹಾಪೌರ ಮತ್ತು ಉಪಮಹಾಪೌರರ ಅಧಿಕಾರಾವಧಿ ಸೇರಿದಂತೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯದ ಬಗ್ಗೆಯೂ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಆಕ್ಷೇಪಿಸಲಾಗಿದೆ. ಇದಲ್ಲದೇ ಅಸ್ಪಷ್ಟ ಗಡಿ ಗುರುತಿಸುವಿಕೆ ಇದ್ದು, ಕೆಲಗೇರಿಯ ಹಾಗೂ ಇತರೆ ಗ್ರಾಮಗಳ ಬಗ್ಗೆ ಅಪೂರ್ಣವಾದ ಗಡಿ ರೇಖೆಗಳನ್ನು ಸೇರ್ಪಡೆ ಮಾಡಲಾಗಿದೆ. ಜೊತೆಗೆ ಧಾರವಾಡ ನಗರಕ್ಕೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸದೇ ಪ್ರಸ್ತಾವಿತ ಅಧಿಸೂಚನೆಯು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.
ಜೊತೆಗೆ ಪ್ರತ್ಯೇಕ ಪಾಲಿಕೆಯಿಂದ ಆರ್ಥಿಕ ಮತ್ತು ಆಡಳಿತಾತ್ಮಕ ಸವಾಲುಗಳು ಎದುರಾಗಲಿದ್ದು, ''''''''ಬಿ'''''''' ವರ್ಗದ ನಗರ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಶೇ. 16ರಷ್ಟು ಎಚ್‌ಆರ್‌ಎ ಮತ್ತು ಡಿಎಗೆ ಅರ್ಹರಾಗಿದ್ದಾರೆ. ಧಾರವಾಡ ಪ್ರತ್ಯೇಕ ಪಾಲಿಕೆ ಮಾಡಿದರೆ 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರತ್ಯೇಕ ನಿಗಮವಾದರೆ ಅದು ''''''''ಸಿ'''''''' ಕೆಟಗರಿಗೆ ಒಳಪಡುತ್ತದೆ. ಇದರಿಂದ ನೌಕರರ ಎಚ್‌ಆರ್‌ಎ ಮತ್ತು ಡಿಎ ಅನ್ನು ಶೇ. 12ಕ್ಕೆ ಇಳಿಸಬೇಕಾಗುತ್ತದೆ.ಇದೇ ರೀತಿಯಲ್ಲಿ ವಿವಿಧ ರೀತಿಯ ಸಮಸ್ಯೆಗಳು ಎದುರಾಗಲಿದ್ದು, ಅಂತಿಮ ಅಧಿಸೂಚನೆ ಹೊರಡಿಸುವ ಮೊದಲು ಈ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸಿ ನಂತರ ವಿಂಗಡಣೆ ಕುರಿತು ಹು-ಧಾ ಮಹಾನಗರ ಪಾಲಿಕೆಯಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಎಂದು ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಪೌರಾಡಳಿತ ಇಲಾಖೆಗೆ ಆಗ್ರಹಿಸಿದ್ದಾರೆ.
ಈ ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ ವರದಿಯೊಂದನ್ನು ಕಳುಹಿಸುವಂತೆ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.