ಶಾಸಕ ಭೀಮಣ್ಣಗೆ ಎಂಡೋಸಲ್ಫಾನ್ ವರದಿ ಸಲ್ಲಿಕೆ

| Published : Nov 04 2023, 12:30 AM IST

ಸಾರಾಂಶ

೧೯೮೦ರಿಂದ ೨೦೦೦ರ ಅವಧಿಯಲ್ಲಿ ಗೇರು ಅಭಿವೃದ್ಧಿ ನಿಗಮದಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ ಗೇರು ನೆಡುತೋಪುಗಳ ಮೇಲೂ ಹೆಲಿಕಾಪ್ಟರ್ ಮೂಲಕ ಹಾಗೂ ಮಾನವ ಶಕ್ತಿ ಬಳಸಿ ಎಂಡೋಸಲ್ಫಾನ್ ಸಿಂಪಡಣೆ ಮಾಡಲಾಗಿದೆ

ಶಿರಸಿ:

ನಗರದ ಸ್ಕೊಡ್‌ವೆಸ್ ಸಂಸ್ಥೆ ಜಿಲ್ಲೆಯ ಎಂಡೋಸಲ್ಫಾನ್‌ ಬಾಧಿತರ ಕುರಿತು ಅಧ್ಯಯನ ನಡೆಸಿದ್ದು ಎಂಡೋಸಲ್ಫಾನ್‌ ಬಾಧಿತರು, ಕುಟುಂಬದವರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವರದಿ ತಯಾರಿಸಿದೆ. ಅವರಿಗೆ ಸಿಗಬೇಕಾದ ಆರೋಗ್ಯ ಚಿಕಿತ್ಸೆ ಸೇರಿದಂತೆ ಪುನರ್‌ವಸತಿ ಮತ್ತು ಪುನರ್‌ ವ್ಯವಸ್ಥೆಗಾಗಿ ಸರ್ಕಾರದ ಗಮನಸೆಳೆಯಲು ಪ್ರಯತ್ನ ನಡೆಸಿದೆ.

ನಗರದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ಶುಕ್ರವಾರ ಸ್ಕೊಡ್‌ವೆಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಹಾಗೂ ಆಡಳಿತ ಮಂಡಳಿಯವರು ಭೇಟಿಯಾಗಿ ಅಧ್ಯಯನ ವರದಿ ಮಾಹಿತಿ ನೀಡಿದರು. ಜಿಲ್ಲಾ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವಂತೆ ಮನವಿ ಮಾಡಿದರಲ್ಲದೇ ಸರ್ಕಾರ ಹಂತದಲ್ಲೂ ಈ ಬಗ್ಗೆ ಪ್ರಯತ್ನಿಸುವಂತೆ ಮನವಿ ಮಾಡಿದರು.೧೯೮೦ರಿಂದ ೨೦೦೦ರ ಅವಧಿಯಲ್ಲಿ ಗೇರು ಅಭಿವೃದ್ಧಿ ನಿಗಮದಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ ಗೇರು ನೆಡುತೋಪುಗಳ ಮೇಲೂ ಹೆಲಿಕಾಪ್ಟರ್ ಮೂಲಕ ಹಾಗೂ ಮಾನವ ಶಕ್ತಿ ಬಳಸಿ ಎಂಡೋಸಲ್ಫಾನ್ ಸಿಂಪಡಣೆ ಮಾಡಲಾಗಿದೆ. ಈ ಕ್ರಿಮಿನಾಶಕದಿಂದ ಸಾವಿರಾರು ಜನ ವಿವಿಧ ರೀತಿಯ ಬಹುವಿಧ ಅಂಗ ವೈಕಲ್ಯತೆ, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ಒಟ್ಟು ೧೭೪೧ ಜನರನ್ನು ಎಂಡೋಸಲ್ಫಾನ್ ಬಾಧಿತರೆಂದು ಗುರುತಿಸಲಾಗಿದೆ. ಅವರ ಸಮಗ್ರ ಅಭಿವೃದ್ಧಿಯ ಕುರಿತು ಸರಿಯಾದ ಪೂರ್ಣಪ್ರಮಾಣದ ಯೋಜನೆ ಅಥವಾ ಕಾರ್ಯಕ್ರಮಗಳಾಗಲಿ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಂಡೋಸಲ್ಫಾನ್ ಬಾಧಿತರ ಕುರಿತು ಧ್ವನಿ ಎತ್ತುವ, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಎರಡು ವರ್ಷ ಅಧ್ಯಯನ ನಡೆಸಿ ವರದಿ ನೀಡುತ್ತಿದ್ದೇವೆ ಎಂದು ಡಾ. ವೆಂಕಟೇಶ ನಾಯ್ಕ ತಿಳಿಸಿದರು.

ಅಧ್ಯಯನಕ್ಕೆ ೧೬೯೦ ಜನರು ಲಭ್ಯರಾಗಿದ್ದು ಶೇ.೨೫ರಷ್ಟು ಅಂಗವೈಕಲ್ಯತೆ ಹೊಂದಿರುವವರು ೨೯ ಜನ, ಶೇ.೨೫ ರಿಂದ ೫೯ರಷ್ಟು ವಿಕಲತೆ ಇರುವವರು ೬೮೧ ಜನ, ಶೇ. ೬೦ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯರಾದವರು ೯೮೦ ಜನ ಇದ್ದಾರೆ. ಎಂಡೋಸಲ್ಫಾನ್ ಬಾಧಿತರಲ್ಲಿ ಮಾನಸಿಕ ಹಾಗೂ ಮೆದುಳಿಗೆ ಸಂಬಂಧಿಸಿದ ಕಾಯಿಲೆ, ನಿರ್ನಾಳ ಗ್ರಂಥಿಗೆ ಸಂಬಂಧಿಸಿದ

ಕಾಯಿಲೆ, ಮಕ್ಕಳ ಹೃದಯ ಸಂಬಂಧಿ ಕಾಯಿಲೆ, ಕಣ್ಣು, ಮೂಳೆ ಸಂಬಂಧಿ ಕಾಯಿಲೆ, ನರ ರೋಗ ಹಾಗೂ ಗರ್ಭೀಣಿಯರಿಗೆ ಸಂಬಂಧಿಸಿದ ಕಾಯಿಲೆ, ಕಿವಿ, ಮೂಗು, ಗಂಟಲಿಗೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಬಹು ವಿಧದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶೇ. ೮೦ರಷ್ಟು ಎಂಡೋ ಬಾಧಿತರು ವೈದ್ಯಕೀಯ ಚಿಕಿತ್ಸೆಗಾಗಿ ಉಡುಪಿ ಮತ್ತು ಮಂಗಳೂರಿನಲ್ಲಿ ಸರ್ಕಾರದಿಂದ ಗುರುತಿಸಿದ ಆಸ್ಪತ್ರೆಗಳಿಗೆ ಹೋಗುತ್ತಿಲ್ಲ. ೨೦೧೪ರ ನಂತರ ಎಂಡೋಸಲ್ಫಾನ್‌ ಬಾಧಿತರ ಸ್ಥಿತಿಗತಿಗಳ ಕುರಿತು ಸಮೀಕ್ಷೆ ನಡೆದಿದ್ದಾಗಲೀ ಅಥವಾ ಹೊಸ ಸೇರ್ಪಡೆ ಆಗಿದ್ದಾಗಲೀ ಆಗಿಲ್ಲ ಎಂದು ಅಧ್ಯಯನ ವರದಿ ಹೇಳಲಾಗಿದೆ.ಆರೋಗ್ಯ ನಿರ್ವಹಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಎಂಡೋಸಲ್ಫಾನ್ ಬಾಧಿತರಲ್ಲದೇ ಕುಟುಂಬದ ಹೆಚ್ಚಿನ ಸದಸ್ಯರಲ್ಲಿ ಮನೋದೈಹಿಕ ಕಾಯಿಲೆ ಹೆಚ್ಚಾಗಿವೆ. ಕುಟುಂಬ ಆದಾಯದ ಶೇ. ೬೫ರಷ್ಟು ಹಣ ವೈದ್ಯಕೀಯ ಸೇವೆ ಪಡೆಯಲು ಖರ್ಚು ಮಾಡುತ್ತಿದ್ದಾರೆ. ಎಂಡೋ ಬಾಧಿತ ಮಗುವಿನ ಹೊರತಾಗಿ ಉಳಿದ ಮಕ್ಕಳು ಹಾಗೂ ಕುಟುಂಬದವರೂ ಸಹ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶೇ. ೬೦ರಷ್ಟು ಜನ ಅತಂತ್ರ ಉದ್ಯೋಗಸ್ಥರಾಗಿದ್ದು, ನಿರ್ದಿಷ್ಟ ದುಡಿಮೆ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.ಅಧ್ಯಯನ ವರದಿ ಶಿಫಾರಸುಗಳೇನು..?

ಶೇ. ೬೦ಕ್ಕಿಂತ ಹೆಚ್ಚು ಬಾಧೆಗೊಳಪಟ್ಟ ವ್ಯಕ್ತಿಗಳಿಗೆ ೨೪*೭ ಮಾದರಿಯ ನಿಗಾ ಕೇಂದ್ರ ನಿರ್ಮಿಸಬೇಕು. ಎಂಡೋಬಾಧಿತ ಪ್ರದೇಶಗಳಲ್ಲಿ ಗರ್ಭಧಾರಣೆ ಪೂರ್ವದಲ್ಲೇ ದಂಪತಿಗಳಿಗೆ ಅಗತ್ಯ ಮುಂಜಾಗೃತೆ, ಸಮಾಲೋಚನೆ ಹಾಗೂ ಅಗತ್ಯ ಎಚ್ಚರಿಕೆ ವಹಿಸುವ ಬಗ್ಗೆ ಅರಿವು ಮೂಡಿಸಬೇಕು. ಇಲ್ಲಿ ಜನಿಸುವ ಎಲ್ಲ ಮಕ್ಕಳ ಮಾಹಿತಿ ಸಂಬಂಧ ಪಟ್ಟ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ನಿರ್ವಹಿಸಬೇಕು. ಎಂಡೋಬಾಧಿತರ ಹಾಗೂ ಕುಟುಂಬದ ಸದಸ್ಯರಿಗೂ ನಿರಂತರ ವೈದ್ಯಕೀಯ ತಪಾಸಣೆ ಸೌಲಭ್ಯ ಸ್ಥಳೀಯವಾಗಿಯೇ ಒದಗಿಸಬೇಕು. ಬಾಧಿತರ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಪಾಲಕರ ಆದಾಯ ಹೆಚ್ಚಿಸಲು ಉದ್ಯೋಗಾವಕಾಶ ಕಲ್ಪಿಸಬೇಕು. ಮಾಸಾಶನದ ಪ್ರಮಾಣ ಹೆಚ್ಚಿಸಬೇಕು. ಎಂಡೋಬಾಧಿತ ಪ್ರದೇಶಗಳಲ್ಲಿನ ಮಣ್ಣು ಮತ್ತು ನೀರಿನ ಪರೀಕ್ಷೆ ಹಾಗೂ ಅಧ್ಯಯನ ನಡೆಸಿ ವಿಷಕಾರಿ ಅಂಶ ತೆಗೆದುಹಾಕಲು ಅಗತ್ಯ ಕ್ರಮಕೈಗೊಳ್ಳಬೇಕು. ಹೀಗೆ ಹತ್ತಾರು ಅಂಶಗಳನ್ನು ಅಧ್ಯಯನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.