ಸಾರಾಂಶ
ಹೊರ ಜಿಲ್ಲೆಗೆ ಉಪನಗರ ರೈಲು: ಒಪ್ಪಿಗೆ ಕೋರಿ ಮರು ಪ್ರಸ್ತಾವನೆ. ಈ ಮೊದಲಿನ ಪ್ರಸ್ತಾವಕ್ಕೆ ಒಪ್ಪದ ನೈಋತ್ಯ ರೈಲ್ವೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಉಪನಗರ ರೈಲ್ವೆಯನ್ನು ಇತರೆ ಜಿಲ್ಲೆ ಹಾಗೂ ಸುತ್ತಲಿನ ನಗರಗಳಿಗೆ 452 ಕಿ.ಮೀ.ವರೆಗೆ ವಿಸ್ತರಿಸುವ ಯೋಜನೆಗೆ ಪೂರ್ವ ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಒಪ್ಪಿಗೆ ನೀಡುವಂತೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ನೈಋತ್ಯ ರೈಲ್ವೆಗೆ ಮರು ಪ್ರಸ್ತಾವ ಸಲ್ಲಿಸಿದೆ.2023ರ ಜೂನ್‌ನಲ್ಲಿ ಕೆ-ರೈಡ್ ಮಂಡಳಿಯ ಸಭೆಯಲ್ಲಿ ಬಿಎಸ್‌ಆರ್‌ಪಿ ಎರಡನೇ ಹಂತದಲ್ಲಿ ಸುತ್ತಲಿನ ನಗರಗಳಿಗೆ ಉಪನಗರ ರೈಲು ಯೋಜನೆಯನ್ನು ವಿಸ್ತರಿಸಲು ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನ ಕೈಗೊಳ್ಳಲು ತಾತ್ವಿಕ ಒಪ್ಪಿಗೆ ಪಡೆಯಲಾಗಿತ್ತು. ಅದಕ್ಕಾಗಿ ವಲಯ ರೈಲ್ವೆ ಮೂಲಕ ರೈಲ್ವೆ ಮಂಡಳಿಯ ಪೂರ್ವಾನುಮತಿ ಪಡೆಯಲು ನಿರ್ಧರಿಸಲಾಗಿತ್ತು. ಈ ಸಂಬಂಧ ಜುಲೈನಲ್ಲಿ ಕೆ-ರೈಡ್ ನೈಋತ್ಯ ರೈಲ್ವೆ ವಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೇ ಯೋಜನೆಗೆ ಅನುಮೋದನೆ ನೀಡುವಂತೆ ರೈಲ್ವೆ ಮಂಡಳಿಗೆ ಪತ್ರ ಬರೆದಿತ್ತು. ಆದರೆ ನೈಋತ್ಯ ರೈಲ್ವೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಆದರೂ ಕೆರೈಡ್ ಈ ಯೋಜನೆ ಅಧ್ಯಯನದ ಪ್ರಸ್ತಾವನೆಯನ್ನು ಮರು ಪರಿಶೀಲನೆ ಮಾಡಲು ಹಾಗೂ ರೈಲ್ವೆ ಮಂಡಳಿಗೆ ಅನುಮೋದನೆಗಾಗಿ ಶಿಫಾರಸು ಮಾಡಲು ಮನವಿ ಮಾಡಿದೆ.
ಕೆ-ರೈಡ್ ಸದ್ಯ ಮೊದಲ ಹಂತದಲ್ಲಿ 148.17 ಕಿ.ಮೀ. ಉಪನಗರ ರೈಲ್ವೆ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಎರಡನೇ ಹಂತದಲ್ಲಿ ದೇವನಹಳ್ಳಿ-ಕೋಲಾರ (107 ಕಿ.ಮೀ.), ಚಿಕ್ಕಬಾಣಾವರದಿಂದ ದಾಬಸ್‌ಪೇಟೆ ಮೂಲಕ ತುಮಕೂರಿಗೆ (55 ಕಿ.ಮೀ.), ಕೆಂಗೇರಿಯಿಂದ ಮೈಸೂರಿಗೆ (125 ಕಿ.ಮೀ.), ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆವರೆಗೆ (45 ಕಿ.ಮೀ.), ಹೀಲಲಿಗೆಯಿಂದ ಹೊಸೂರು (23 ಕಿ.ಮೀ.), ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರ ಮೂಲಕ ಗೌರಿಬಿದನೂರಿಗೆ (52 ಕಿ.ಮೀ.) ಹಾಗೂ ಹೊಸ ಮಾರ್ಗವಾಗಿ ಕಾರಿಡಾರ್ 2ಎ ಚಿಕ್ಕಬಾಣಾವರದಿಂದ ಮಾಗಡಿವರೆಗೆ (45 ಕಿ.ಮೀ.) ಸೇರಿ ಒಟ್ಟಾರೆ 452 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇಟ್ಟುಕೊಂಡಿದೆ. ಈ ಸಂಬಂಧ ಪೂರ್ವ ಕಾರ್ಯಸಾಧ್ಯತಾ ವರದಿ ಅಧ್ಯಯನ ನಡೆಸಿ ಬಳಿಕ ವಿಸ್ತ್ರತ ಯೋಜನಾ ವರದಿ ರೂಪಿಸಲು ಯೋಜಿಸಿದೆ.ಬಾಕಿ ಹುದ್ದೆಗೂ ಕಾಯಂ ಇಲ್ಲ
ಉಪನಗರ ರೈಲ್ವೆ ಯೋಜನೆ ಜಾರಿಗೊಳಿಸುತ್ತಿರುವ ಕೆ-ರೈಡ್‌ಗೆ ಈಗಲೂ ಕಾಯಂ ವ್ಯವಸ್ಥಾಪಕ ನಿರ್ದೇಶಕರಿಲ್ಲ. ಇದರ ಜೊತೆಗೆ ಈಗ ಎಲೆಕ್ಟ್ರಿಕಲ್ ವಿಭಾಗದ ಪ್ರಧಾನ ವ್ಯವಸ್ಥಾಪಕರ ಹುದ್ದೆಯನ್ನು ಗುತ್ತಿಗೆ ಅಥವಾ ನಿಯೋಜನೆ ಹಾಗೂ ಆರ್ಥಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರ ಹುದ್ದೆಗೆ ನಿಯೋಜನೆ ಮೇರೆಗೆ ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಜಿ ಆಹ್ವಾನಿಸಿದೆ. ಈಗಾಗಲೇ ಕಾಯಂ ವ್ಯವಸ್ಥಾಪಕ ನಿರ್ದೇಶಕರು ಇಲ್ಲದೆ ಯೋಜನೆ ಕುಂಟಿತಗೊಳ್ಳುತ್ತಿದೆ ಎಂದು ನಗರ ಸಾರಿಗೆ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.