ಸಾರಾಂಶ
ಕನ್ನಡಪ್ರಭ ವಾರ್ತೆ ಚಿಟಗುಪ್ಪ
ವಿದ್ಯಾರ್ಥಿಗಳು ಸ್ವಸಾಮರ್ಥ್ಯದ ವಿಶ್ವಾಸ ಮತ್ತು ಸಾಧನೆಯ ಹಸಿವಿನ ಕಿಚ್ಚು ಹೆಚ್ಚಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಂಚಾಳ ಕರೆ ನೀಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಪಥದ ಕುರಿತಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣದ ವಿದ್ಯಾರ್ಥಿಗಳಲ್ಲಿ ಜ್ಞಾನದ ಸಾಮರ್ಥ್ಯ ಜೊತೆಗೆ ಕಲಿಕೆಯ ಆಸಕ್ತಿ ಇದ್ದರೂ ಸಹಿತ ಅಭಿವ್ಯಕ್ತಗೊಳಿಸುವ ಹಿಂಜರಿಕೆಯಿಂದ ಅವಕಾಶ ವಂಚಿತರಾಗುತ್ತಾರೆ ಎಂದರು.
ವಿದ್ಯಾರ್ಥಿಗಳು ಪದವಿಯಲ್ಲೇ ಪ್ರತಿನಿತ್ಯ ದಿನ ಪತ್ರಿಕೆಗಳನ್ನು ಓದುವ ಮೂಲಕ ಪ್ರಚಲಿತ ವಿಷಯಗಳ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಪಠ್ಯದ ಜೊತೆಗೆ ಪೂರಕ ವಿಷಯಗಳನ್ನು ಅಧ್ಯಯನ ಮಾಡಬೇಕು. ಭಾಷಾ ಜ್ಞಾನ, ಸಂದರ್ಶನ ಕೌಶಲ್ಯ ಬೆಳೆಸಿಕೊಂಡು ಯಶಸ್ವಿಯಾಗಬೇಕು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಕುಮಾರ ಸಿಂಧೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಭವಿ ಪ್ರಾಧ್ಯಾಪಕರ ಬೋಧನೆಯ ಜೊತೆಗೆ ಆಧುನಿಕ ಕಂಪ್ಯೂಟರ್, ಪ್ರಯೋಗಲಾಯ ಹಾಗೂ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ವಿಷಯ ತಜ್ಞರಿಂದ ವಿಶೇಷ ಉಪನ್ಯಾಸಗಳು ಸೇರಿದಂತೆ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವುದರ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಕಾಲೇಜಿಗೆ ಅವಶ್ಯಕವಾಗಿರುವ ಕ್ರೀಡಾ ಮೈದಾನಕ್ಕಾಗಿ 4 ಎಕರೆ ಭೂಮಿ ಒಸಗಿಸಬೇಕು ಎಂದು ತಹಸೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಮನವಿ ಸಲ್ಲಿಸಿದರು.ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ತಹಸಿಲ್ದಾರರು ಮೇಲಾಧಿಕಾರಿಗಳ ಪರವಾನಿಗೆ ಪಡೆದು ಮೈದಾನಕ್ಕಾಗಿ ಭೂಮಿ ಒದಗಿಸಲಾಗುವುದು ಎಂಬ ಭರವಸೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಪ್ರಾಧ್ಯಾಪಕರಾದ ಡಾ.ಅರುಣಕುಮಾರ ಕುರನೆ ಅವರು, ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿಯೊಂದಿಗೆ ಸತತ ಪ್ರಯತ್ನದ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಡಾ.ವೀರಶೆಟ್ಟಿ ಮೈಲೂರಕರ್ ಮಾತನಾಡಿ, 2024ರಿಂದ ಜಾರಿಗೆ ಬಂದಿರುವ ‘ರಾಜ್ಯ ಶಿಕ್ಷಣ ನೀತಿ’ಯ ಪರೀಕ್ಷೆಯ ಮಾದರಿ, ಅಂತರಿಕ ಅಂಕಗಳ ವಿಧಾನ ಕುರಿತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿವರಿಸಿದರು.
ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ.ಕೆ.ಶಿವಕುಮಾರ, ಡಾ.ರವೀಂದ್ರಕುಮಾರ ಟಿಳೇಕರ್, ಸಹ ಪ್ರಾಧ್ಯಾಪಕರಾದ ಡಾ.ಚಿತ್ರಶೇಖರ ಚಿರಳ್ಳಿ, ಶಾಂತಕುಮಾರ ಪಾಟೀಲ್, ಡಾ.ಯೇಸುಮಿತ್ರ, ಡಾ. ಮೀನಾಕುಮಾರಿ, ಮೀನಾಕ್ಷಿ, ಡಾ.ಸತೀಶಕುಮಾರ ಡೊಂಗ್ರೆ, ಡಾ.ಶೇಷರಾವ್, ಜಬಿವುಲ್ಲಾ, ರಮೇಶಕುಮಾರ ಬಿರಾದರ, ಅತಿಥಿ ಉಪನ್ಯಾಸಕಕರಾದ ಅನೀಲಕುಮಾರ ಸಿಂಧೆ, ಚಂದ್ರಕಾಂತ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.