ಸಾರಾಂಶ
ಬೈಲಹೊಂಗಲ ತಾಲೂಕಿನ ಗುಡದೂರ-ಸಂಗೊಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಎಕರೆ ಕಬ್ಬು ಗಾಳಿ-ಮಳೆಗೆ ಬಿದ್ದು ನೆಲಸಮಗೊಂಡು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕಿನ ಗುಡದೂರ-ಸಂಗೊಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಎಕರೆ ಕಬ್ಬು ಗಾಳಿ-ಮಳೆಗೆ ಬಿದ್ದು ನೆಲಸಮಗೊಂಡು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಬ್ಬು ಬೆಳೆ ಸಂಪೂರ್ಣ ನೆಲೆಕಚ್ಚಿದೆ. ಬಿದ್ದ ಕಬ್ಬನ್ನು ಸಕ್ಕರೆ ಕಾರ್ಖಾನೆಗಳ ತೊಡ್ನಿ ತಂಡದವರು ಕಟಾವು ಮಾಡಲು ಒಪ್ಪುವುದಿಲ್ಲ. ಅವರ ಕಾಡುಬೇಡಿ ಒಪ್ಪಿಸಿದರೂ ಕಟಾವೆಗೆ ಹೆಚ್ಚಿನ ಹಣ ಕೇಳುತ್ತಾರೆ. ಬಿದ್ದ ಕಬ್ಬು ಬೆಂಡುವರೆದು ಕಡಿಮೆ ತೂಕ ಬರುತ್ತದೆ. ಕಳೆದ ವರ್ಷ ಮಳೆಯಿಂದ ಬೆಳೆ ಒಣಗಿಹೋಗಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆರಂಭದಲ್ಲಿ ಉತ್ತಮ ಮಳೆಯಿಂದ ಉತ್ತಮ ಬೆಳೆ ಬಂದಿತ್ತು ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಇನ್ನೇನು ಕಟಾವು ಹಂತಕ್ಕೆ ಬಂದಿದ್ದು, ನಿರಂತರ ಮಳೆಯಿಂದ ಕಬ್ಬು ನೆಲಕ್ಕೆ ಉರುಳುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆ ಹಿಂಗಾರು ಬಿತ್ತನೆಗೂ ಅಡ್ಡಿಯುಂಟು ಮಾಡಿದೆ. ಕಳೆದ ವರ್ಷ ಮಳೆ ಅಭಾವದಿಂದ ಬೆಳೆಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದರೆ ಈ ವರ್ಷ ಅತಿವೃಷ್ಟಿ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದು ರೈತರು ಸಾಲದ ಶೂಲಕ್ಕೆ ಸಿಲುಕುವಂತೆ ಮಾಡಿದೆ.