ಕಳೆದ ಬಾರಿ ಪಂಜಾಬ್ ಮೂಲದ ಭತ್ತದ ತಳಿ ಜಿಲ್ಲೆಗೆ ಪರಿಚಯಿಸಿದ ಸುಲ್ಕೇರಿ ಗ್ರಾಮದ ಕುದ್ಯಾಡಿ ಮನೆಯ ಕೃಷಿಕ, ಉಪನ್ಯಾಸಕ ಚಂದ್ರಕಾಂತ ಗೋರೆ, ಈ ಬಾರಿ ರಕ್ತಸಾಲಿ ಎಂಬ ವಿಶಿಷ್ಟ ಭತ್ತದ ತಳಿ ಬೆಳೆಸಿದ್ದು ಅದು ಮುಂದಿನ ಕೆಲವೇ ದಿನಗಳಲ್ಲಿ ಕಟಾವಿಗೆ ಸಿದ್ಧವಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಜಯ, ಶಕ್ತಿ, ರಾಜಕಾಯಮೆ, ಜ್ಯೋತಿ, ಜೀರ್ ಸಾಲೆ, ಗಂಧ ಸಾಲೆ, ಸೋನಮಸೂರಿ ಮೊದಲಾದ ಭತ್ತದ ತಳಿಗಳ ಹೆಸರುಗಳು ಸಾಧಾರಣವಾಗಿ ಎಲ್ಲರಿಗೂ ಚಿರಪರಿಚಿತ. ಆದರೆ ರಕ್ತಸಾಲಿ ಭತ್ತದ ತಳಿ ಎಂಬುದೊಂದು ಇರುವುದು ಹೆಚ್ಚಿನವರಿಗೆ ಗೊತ್ತಿರಲಾರದು. ಇಲ್ಲೊಬ್ಬರು ರಕ್ತಸಾಲಿ ತಳಿಯನ್ನು ಬೆಳೆದು ಕಟಾವಿಗೆ ಸಿದ್ಧರಾಗಿದ್ದಾರೆ.

ಇಂದು ಭತ್ತದ ಗದ್ದೆಗಳು ನಶಿಸುತ್ತಿದ್ದರು ಗದ್ದೆ ಬೆಳೆಯುವ ಬೆರಳೆಣಿಕೆಯ ರೈತರಲ್ಲಿ ಹೊಸ ಹೊಸ ತಳಿಗಳನ್ನು ಬೆಳೆಸಿ,ಉಳಿಸುವ ಹುಮ್ಮಸ್ಸು, ಅದನ್ನು ನಮ್ಮಲ್ಲಿಯೂ ಪರಿಚಯಿಸುವ ಮನಸ್ಸು ಕಂಡು ಬರುತ್ತಿರುವುದು ಉತ್ತಮ ವಿಚಾರ. ಕಳೆದ ಬಾರಿ ಪಂಜಾಬ್ ಮೂಲದ ಭತ್ತದ ತಳಿ ಜಿಲ್ಲೆಗೆ ಪರಿಚಯಿಸಿದ ಸುಲ್ಕೇರಿ ಗ್ರಾಮದ ಕುದ್ಯಾಡಿ ಮನೆಯ ಕೃಷಿಕ, ಉಪನ್ಯಾಸಕ ಚಂದ್ರಕಾಂತ ಗೋರೆ, ಈ ಬಾರಿ ರಕ್ತಸಾಲಿ ಎಂಬ ವಿಶಿಷ್ಟ ಭತ್ತದ ತಳಿ ಬೆಳೆಸಿದ್ದು ಅದು ಮುಂದಿನ ಕೆಲವೇ ದಿನಗಳಲ್ಲಿ ಕಟಾವಿಗೆ ಸಿದ್ಧವಾಗಿದೆ.

ವೃತ್ತಿಯಲ್ಲಿ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಮನಃಶಾಸ್ತ್ರ ಉಪನ್ಯಾಸಕರಾಗಿರುವ ಚಂದ್ರಕಾಂತ ಗೋರೆ ಮೂಲತಃ ಕೃಷಿಕರು. ಹಿರಿಯರು ಮಾಡುತ್ತಾ ಬಂದ ಬೇಸಾಯ ಮುಂದುವರಿಸಿರುವ ಇವರು ಊರಿನ ಮಸೂರಿ,ರಾಜಕಾಯಮೆ, ಗಂಧಸಾಲೆ, ಜೀರಿಸಾಲೆ ಅಲ್ಲದೆ ಇತರ ಊರುಗಳ ಚಂದ್ರಮುಖಿ, ಭಾಸ್ಮತಿ ಇತ್ಯಾದಿ ತಳಿಗಳನ್ನು ತಮ್ಮ ಗದ್ದೆಯಲ್ಲಿ ಬೆಳೆದು ಯಶ ಕಂಡವರು.

ಗದ್ದೆಗೆ ದಶಕಗಳ ಹಿಂದೆ ಟ್ರ್ಯಾಕ್ಟರ್, ಕಂಬೈನ್ಡ್ ಹಾರ್ವೆಸ್ಟರ್ ಇತ್ಯಾದಿ ಅತ್ಯಾಧುನಿಕ ಯಂತ್ರಗಳನ್ನು ಊರಿನಲ್ಲಿ ಪರಿಚಯಿಸಿ ಕೃಷಿ ನಡೆಸುತ್ತಿರುವವರು.

ರಕ್ತಸಾಲಿ ತಳಿ:

ಚಂದ್ರಕಾಂತ ಗೋರೆ ಅವರ ಭತ್ತದ ಕೃಷಿಯ ವಿಶಿಷ್ಟತೆ ಬಗ್ಗೆ ಅರಿವಿದ್ದ ಶ್ರೀಪಡ್ರೆ ಅವರು ರಕ್ತಸಾಲಿ ತಳಿ ಬೆಳೆಯಲು ಬೆಂಬಲ ನೀಡಿದ್ದು ಇದಕ್ಕೆ ಪೂರಕವಾಯಿತು. ಶ್ರೀ ಪಡ್ರೆ ಅವರು,

ಭತ್ತದ ಬೆಳೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಸತ್ಯನಾರಾಯಣ ಬೇಲೇರಿ ಇವರ ಪರಿಚಯ ಮಾಡಿಸಿಕೊಟ್ಟರು. ಬೇಲೇರಿ ಅವರನ್ನು ಸಂಪರ್ಕಿಸಿ ಅವರ ಮೂಲಕ ಕೇರಳದ ವಯನಾಡಿನಿಂದ ಭತ್ತದ ಬೀಜಗಳನ್ನು ತರಿಸಿ ಬೆಳೆಸಲಾಗಿದೆ.

ರಕ್ತಸಾಲಿ ತಳಿ ಅಕ್ಕಿಗೆ ಕೆಜಿಗೆ 400 ರು. ಬೆಲೆ ಇದೆ. ಇದು ದೇಹದ ಹಿಮೋಗ್ಲೋಬಿನ್ ಅಂಶವನ್ನು ಉತ್ತಮ ಪಡಿಸುವ, ರೋಗ ನಿರೋಧಕವಾಗಿ ಕೆಲಸ ಮಾಡುವ, ಕ್ಯಾನ್ಸರ್‌ನಂತಹ ಕಾಯಿಲೆ ಕೂಡ ನಿಯಂತ್ರಣಕ್ಕೆ ತರುವಷ್ಟು ಶಕ್ತಿಯನ್ನು ಹೊಂದಿದೆ. ಇದೀಗ ಈ ತಳಿಯು ಭತ್ತ ಹುಲಸಾಗಿ ಬೆಳೆದಿದ್ದು ಉತ್ತಮ ಫಸಲಿನ ನಿರೀಕ್ಷೆಯು ಇದೆ. ಹೀಗಾಗಿ ರಕ್ತಸಾಲಿ ಭತ್ತದ ತಳಿ ದಕ ಜಿಲ್ಲೆಯಲ್ಲಿ ಯಶಸ್ಸು ಕಂಡಿದೆ ಎಂದು ಹೇಳಬಹುದು.

.................

ದ.ಕ. ಜಿಲ್ಲೆಯ ಇತಿಹಾಸದಲ್ಲಿ ಭತ್ತದ ಬೇಸಾಯಕ್ಕೆ ಅದರದೇ ಆದ ಮಹತ್ವ ಇದೆ. ಹಿರಿಯರು ಉಳಿಸಿ, ಬೆಳೆಸಿದ ಗದ್ದೆಗಳಲ್ಲಿ ಇತರ ವಾಣಿಜ್ಯ ಕೃಷಿಗಳನ್ನು ಮಾಡದೆ ಈಗಲೂ ಪ್ರತಿ ವರ್ಷ ಹೊಸ ಹೊಸ ತಳಿಯ ಭತ್ತಗಳನ್ನು ಬೆಳೆಸುವ ಪ್ರಯೋಗ ನಡೆಸುತ್ತಿದ್ದೇನೆ. ಇದಕ್ಕೆ ಉತ್ತಮ ಪ್ರತಿಫಲವು ಸಿಗುತ್ತಿದೆ.

-ಚಂದ್ರಕಾಂತ ಗೋರೆ, ಕೃಷಿಕ,ಸುಲ್ಕೇರಿ