ಬಿಸಿಲಿನ ಧಗೆ: ಹಣ್ಣು, ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ

| Published : Feb 24 2024, 02:31 AM IST

ಸಾರಾಂಶ

ಫೆಬ್ರವರಿ ತಿಂಗಳಾಂತ್ಯದಲ್ಲೇ ಬೇಸಿಗೆ ತೀವ್ರತೆ ಹೆಚ್ಚಾಗಿದೆ, ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ತಾಪಮಾನ 34ರಿಂದ 38 ಡಿಗ್ರಿವರೆಗೆ ದಾಖಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ತಾಪಮಾನ ಏರಿಕೆಯಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಈ ಬಾರಿಯೂ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದೆ. ಸೂರ್ಯ ಪ್ರಕರವಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರುವುದಕ್ಕೂ ಯೋಚಿಸುವ ಪರಿಸ್ಥಿತಿ ಎದುರಾಗಿದೆ, ಹಾಗಾಗಿ ಬಿಸಿಲಿನ ತಾಪಕ್ಕೆ ಬೆಂಡಾಗಿರುವ ಜನರು ದಣಿವಾರಿಸಿಕೊಳ್ಳಲು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.

ಸೂರ್ಯನ ತಾಪ ತಡೆಯಲಾರದೆ ಕಲ್ಲಂಗಡಿಗೆ ಮುಗಿಬಿದ್ದಿದ್ದಾರೆ. ಕೋಲಾರ ಬರದ ಜಿಲ್ಲೆ ವರ್ಷಪೂರ್ತಿ ಸುಡುವ ಬಿಸಿಲು, ಧಗ ಧಗಿಸುವ ಸೂರ್ಯ ಜನರ ನೆತ್ತಿ ಸುಡುತ್ತಿರುತ್ತಾನೆ. ಹೀಗಿರುವಾಗ ಈ ವರ್ಷ ಫೆಬ್ರವರಿ ತಿಂಗಳಲ್ಲೇ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಕೆರೆಗಳಲ್ಲಿದ್ದ ನೀರೆಲ್ಲಾ ಖಾಲಿಯಾಗಿ ಭೂಮಿ ಕಾದ ಕೆಂಡದಂತಾಗುತ್ತಿದೆ.

ಹೀಗಿರುವಾಗ ಫೆಬ್ರವರಿ ತಿಂಗಳಾಂತ್ಯದಲ್ಲೇ ಬೇಸಿಗೆ ತೀವ್ರತೆ ಹೆಚ್ಚಾಗಿದೆ, ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ತಾಪಮಾನ 34ರಿಂದ 38 ಡಿಗ್ರಿವರೆಗೆ ದಾಖಲಾಗಿದೆ. ಹಣ್ಣು, ತಂಪು ಪಾನೀಯಕ್ಕೆ ಬೇಡಿಕೆ

ಜಿಲ್ಲೆಯಲ್ಲಿ ಎಂದೂ ಕಂಡರಿಯದ ಈ ರಣಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದು, ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಎಳನೀರು ಮಜ್ಜಿಗೆಯಂತ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ ನಗರದ ಒಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್‌ಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ ತಾಪಮಾನ ಏರಿಕೆಯಾಗಿದೆ, ಈ ವರ್ಷ ಉತ್ತಮ ಮಳೆಯೂ ಆಗಿಲ್ಲ, ಹಾಗಾಗಿ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗಿ ತಾಪಪಾನ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೆಚ್ಚಾಗಿ ತಮಿಳುನಾಡು, ಆಂಧ್ರ ಪ್ರದೇಶಕ್ಕಿಂತ ಸ್ಥಳೀಯವಾಗಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯಲಾಗಿದೆ. ಹಾಗಾಗಿ ಕಡಿಮೆ ಬೆಲೆಗೆ ಅಂದರೆ ೧೮ ರಿಂದ ೨೦ ರುಪಾಯಿಗೆ ಕೆಜಿ ಕಲ್ಲಂಗಡಿನನ್ನು ರೈತರಿಂದ ಪಡೆಯುತ್ತಿರುವ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ೩೦ರು.ಗೆ ಮಾರಾಟ ಮಾಡುತ್ತಿದ್ದಾರೆ.

ಕಲ್ಲಂಗಡಿ ಹಣ್ಣಿಗೆ ಬೇಡಿಕೆ

ಇಷ್ಟು ದಿನ ಸಂಪ್ರದಾಯ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಈಗ ಕಲ್ಲಂಗಡಿ, ಪಪ್ಪಾಯ ಹಣ್ಣು ಬೆಳೆದಿದ್ದಾರೆ. ಹಾಗಾಗಿ ಕಲ್ಲಂಗಡಿ ಹಣ್ಣು ಬೆಳೆದಿರುವ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿದೆ, ಅದರ ಜೊತೆಗೆ ಕಲ್ಲಂಗಡಿ ಹಣ್ಣಿನ ವ್ಯಾಪಾರಸ್ಥರಿಗೂ ಒಳ್ಳೆಯ ಲಾಭ ಎನ್ನುವಂತಾಗಿದೆ. ಕೋಲಾರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀ ಕಿ.ಮೀ ವ್ಯಾಪ್ತಿಯಲ್ಲಿ ಒಂದು ಎರಡು ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಒಳ್ಳೆಯ ವ್ಯಾಪಾರ ಜೊತೆಗೆ ಒಂದಷ್ಟು ಆದಾಯ ಸಿಗುತ್ತಿದೆ ಅನ್ನೋ ಖುಷಿ ವ್ಯಾಪಾರಸ್ಥರದ್ದಾಗಿದೆ.