ಸುಂಟಿಕೊಪ್ಪ: ಬತ್ತದ ಕೃಷಿಗೆ ಪೂರಕ ಪೂರ್ವ ಸಿದ್ಧತೆ

| Published : May 21 2024, 12:30 AM IST

ಸಾರಾಂಶ

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಬತ್ತದ ಕೃಷಿಗೆ ಪೂರ್ವ ಸಿದ್ಧತೆ ನಡೆದಿದೆ. ರೈತರು ಬತ್ತದ ಗದ್ದೆಗಳನ್ನು ಹಸನುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿಶೇಷ ವರದಿ ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಹೋಬಳಿಯಲ್ಲಿ ಈ ಬಾರಿ ಹಿಂದೆಂದೂ ಕಾಣದ ಬೇಸಿಗೆ ಹಿನ್ನೆಲೆಯಲ್ಲಿ ಕೆರೆ ಬಾವಿ ಕಟ್ಟೆಗಳು ಮಾತ್ರವಲ್ಲದೆ ಕೊಳವೆಬಾವಿಗಳು ಕೂಡ ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಆದರೆ ಮೇ 2ನೇ ವಾರದಿಂದ ಅನಿರೀಕ್ಷಿತ ಎಂಬಂತೆ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು ಕಳೆದ ಬಾರಿಯ ಮಳೆಯ ಪ್ರಮಾಣವನ್ನು ಮೀರಿ ಬಂದಿರುವುದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಬತ್ತದ ಕೃಷಿಗೆ ಪೂರಕವಾಗಿ ಪೂರ್ವ ಸಿದ್ಧತೆಗಳು ನಡೆದಿದ್ದು, ರೈತರು ತಮ್ಮ ಬತ್ತದ ಗದ್ದೆಗಳನ್ನು ಹಸನುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಾಮಾನ್ಯವಾಗಿ ಕೃಷಿಯನ್ನು ನಂಬಿ ಜೀವನ ಮಾಡಿದರೆ ಕಷ್ಟದ ದಿನಗಳು ಇರುವುದಿಲ್ಲವೆಂಬ ಸುಭಾಶಿತ ಸಂಸ್ಕೃತ ಭಾಷೆಯಲ್ಲಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿಯನ್ನು ನಂಬಿ ಬದುಕುವುದು ಹುಲಿಸವಾರಿ ಮಾಡುವುದು ಒಂದೇ ಎಂಬ ಅಭಿಪ್ರಾಯ ಜನಮಾನಸದಲ್ಲಿದೆ. ಕಾರಣ ಹವಾಮಾನ ವೈಪರೀತ್ಯ, ಕೃಷಿ ಉತ್ಪನ್ನಗಳ ಬೆಲೆಯಲ್ಲಿನ ಏರುಪೇರು, ಕಾರ್ಮಿಕರ ಕೊರತೆ, ಉತ್ಪಾದನ ವೆಚ್ಚ ಏರಿಕೆ, ವನ್ಯಪ್ರಾಣಿಗಳ ಹಾವಳಿ ಹೀಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವೆಂಬ ಪರಿಸ್ಥಿತಿಯೇ ಹೆಚ್ಚು.

ಇದರಲ್ಲಿ ಹೆಚ್ಚಿನ ಭಾಗ ಕಾಫಿ ತೋಟವಾಗಿದ್ದು, ಹೆಚ್ಚಿನ ಪಾಲು ಅಡಕೆ ಬಾಳೆ ಮತ್ತು ಕರಿಮೆಣಸು ಬೆಳೆಯುತ್ತಿದ್ದಾರೆ. ಜೊತೆಗೆ ಬತ್ತದ ಗದ್ದೆಗಳಲ್ಲಿ ಹೆಚ್ಚಿನ ಪಾಲು ತೋಟಗಾರಿಕೆ ಮಾಡಿದ್ದರೂ ಕೂಡ ಬತ್ತ ಬೆಳೆಯುವುದನ್ನು ರೈತರು ಬಿಡದಿರುವುದು ಉಲ್ಲೇಖಾರ್ಹ ವಿಚಾರ. ಏಕೆಂದರೆ ಸಾಕಷ್ಟು ವರ್ಷಗಳಿಂದ ಬತ್ತದ ಬೆಳೆಗೆ ಕನಿಷ್ಠ ಎಕ್ರೆಯೊಂದಕ್ಕೆ10,000 ರು. ಬೆಂಬಲ ಬೆಲೆಯನ್ನು ಕೋರುತ್ತಾ ಬಂದಿದ್ದರೂ ಅದು ಇನ್ನೂ ನನಸಾಗಿಲ್ಲ. ಈಗಾಗಲೇ ವರದಿಯಾಗಿರುವಂತೆ ಬತ್ತ ಬೆಳೆಯುವ ಪ್ರದೇಶ ಕೊಡಗಿನಲ್ಲಿ ಶೇ. 50ರಷ್ಟು ಕಡಿಮೆಯಾಗಿದ್ದರೂ ಕೂಡ ಉಳಿದ ಪ್ರದೇಶದಲ್ಲಿ ಬತ್ತದ ಬೆಳೆಯಲಾಗುತ್ತಿದ್ದೂ ಬತ್ತದ ಸಸಿ ಮಡಿಯಿಂದ ಹಿಡಿದು ಬತ್ತದ ಬೆಳೆ ಕಟಾವಿಗೆ ಬರುವವರೆಗೆ ಆನೆ ಸೇರಿದಂತೆ ವನ್ಯ ಪ್ರಾಣಿ ಪಕ್ಷಿಗಳ ಬಾಯಿಗೆ ಸಿಲುಕಿ ಉಳಿದದು ರೈತರ ಮನೆಗೆ ಎಂಬಂತಾಗಿದೆ. ಕೃಷಿ ಕಾರ್ಮಿಕರ ಕೊರತೆ, ಬತ್ತದ ಬೀಜ ಕೃಷಿ ಪಡಿತರ ಮತ್ತು ಗೊಬ್ಬರಕ್ಕೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬತ್ತದ ಬೆಳೆ ಬೆಳೆಸುವುದು ಲಾಭದಾಯಕವಲ್ಲ ಹೀಗಿದ್ದರೂ ರೈತರು ಬತ್ತದ ಬೆಳೆಯನ್ನು ಸಾಂಪ್ರಾದಾಯಿಕವಾಗಿ ಪರಂಪರೆ ಹಿನ್ನೆಲೆಯಲ್ಲಿ ಕೈಬಿಡಲಾಗದೆ ಬೆಳೆಯುತ್ತಿರುವುದು ವಿಶೇಷವಾದ ಸಂಗತಿಯಾಗಿದೆ.

ಕೇವಲ ಸಾವಯವ ಅಥವಾ ಪೂರ್ತಿ ರಾಸಾಯಿನಿಕ ಗೊಬ್ಬರ ಬಳಕೆಯಿಂದ ಹೆಚ್ಚಿನ ಫಸಲು ನಿರೀಕ್ಷಿಸಲು ಸಾಧ್ಯವಿಲ್ಲ ಬದಲಾಗಿ ನಮ್ಮ ಹಿರಿಯರು ಬಳಸುತ್ತಿದ್ದ ಕೊಟ್ಟಿಗೆ ಗೊಬ್ಬರ ಮತ್ತು ತೋಟದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಗೊಬ್ಬರದ ಬಳಕೆಯಿಂದ ಮಣ್ಣಿನ ಫಲವತತ್ತೆಯನ್ನು ಕಾಪಾಡಿಕೊಳ್ಳಬಹುದು. ಕೃಷಿ ಇಲಾಖೆಯ ಮಾರ್ಗದರ್ಶನ ದೊರೆಯುವ ಸವಲತ್ತುಗಳು ಮತ್ತು ತಾಂತ್ರಿಕ ಸಹಾಯಗಳ ಜೊತೆಗೆ ಕೆಲವು ಹಿರಿಯ ಅನುಭವಿ ಕೃಷಿಕರ ಮಾರ್ಗದರ್ಶನದಿಂದ ನಮಗೆ ಇಲ್ಲಿಯವರೆಗೆ ಕೃಷಿ ಲಾಭಕರವಾಗಿ ಉಳಿದಿದೆ ಎಂದು ರೈತ ಪಟ್ಟೆಮನೆ ಉದಯಕುಮಾರ್ ಹೇಳಿದರು.