ಸಾರಾಂಶ
ಬಳ್ಳಾರಿ: ಆಂಧ್ರಪ್ರದೇಶದ ಹಿಂದೂಪುರ ಕ್ಷೇತ್ರದ ವೈಎಸ್ಸಾರ್ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಅವಕಾಶ ಸಿಗುವುದು ಖಚಿತ ಎಂದು ಬಿಜೆಪಿ ಮಾಜಿ ಸಂಸದೆ ಹಾಗೂ ಶ್ರೀರಾಮುಲು ಸಹೋದರಿ ಜೆ. ಶಾಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈವರೆಗೆ ನಾನು ಕರ್ನಾಟಕದಲ್ಲಿ ರಾಜಕೀಯ ಮಾಡಿದೆ. ಇನ್ನು ಮುಂದೆ ನನ್ನ ರಾಜಕೀಯ ಪಯಣ ಆಂಧ್ರಪ್ರದೇಶದಲ್ಲಿ ಶುರುವಾಗಲಿದೆ. ಇನ್ನೇನಿದ್ದರೂ ತವರು ಮನೆ ರಾಜಕೀಯ ಮುಗಿಯಿತು. ಗಂಡನ ಮನೆಯ ರಾಜಕೀಯಕ್ಕೆ ಅಣಿಯಾಗಿದ್ದೇನೆ ಎಂದರು.
ನನ್ನ ರಾಜಕೀಯ ನಿಲುವು ಹಾಗೂ ವೈಎಸ್ಸಾರ್ ಪಕ್ಷದಿಂದ ಸ್ಪರ್ಧಿಸುವ ಕುರಿತು ಸಹೋದರ ಶ್ರೀರಾಮುಲು ಜತೆ ಚರ್ಚೆ ಮಾಡಿಲ್ಲ. ಬಿಜೆಪಿ ಬಗ್ಗೆ ನಾನು ಮಾತನಾಡುವುದಿಲ್ಲ. ಇದೀಗ ನನ್ನ ಕುಟುಂಬ ವೈಎಸ್ಸಾರ್ ಕಾಂಗ್ರೆಸ್ ಆಗಿದೆ ಎಂದರು.
2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದೆ. 2018ರ ಉಪ ಚುನಾವಣೆಯಲ್ಲಿ ಸೋತೆ. 2019ರಲ್ಲಿ ಟಿಕೆಟ್ ಸಿಗಲಿಲ್ಲ. ಟಿಕೆಟ್ ಸಿಗದಿದ್ದರೂ ಪಕ್ಷದ ಕೆಲಸ ಮಾಡಿದೆ. ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಗಮನ ಹರಿಸಿದ್ದೇನೆ.
ಹಿಂದೂಪುರ ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ನನ್ನ ಹೆಸರಿದೆ. ಟಿಕೆಟ್ ದೊರೆಯುವ ಪೂರ್ಣ ವಿಶ್ವಾಸವಿದೆ. ಆಂಧ್ರ ಸಿಎಂ ಜಗನ್ ಮೋಹನ ರೆಡ್ಡಿ ಅವರು ಮಾಡಿದ ಜನಪರ ಕೆಲಸಗಳು ನನಗೆ ಆಂಧ್ರ ರಾಜಕೀಯದಲ್ಲಿ ಭವಿಷ್ಯವಾಗಲಿದೆ. ಯಶಸ್ಸು ಸಿಗಲಿದೆ ಎಂದು ಶಾಂತಾ ವಿಶ್ವಾಸ ವ್ಯಕ್ತಪಡಿಸಿದರು.