ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸುರೇಶ್ ಸ್ಪರ್ಧೆ?

| Published : Jun 07 2024, 12:35 AM IST / Updated: Jun 07 2024, 01:01 PM IST

ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸುರೇಶ್ ಸ್ಪರ್ಧೆ?
Share this Article
  • FB
  • TW
  • Linkdin
  • Email

ಸಾರಾಂಶ

  ಡಿ.ಕೆ.ಸುರೇಶ್ ರಾಜ್ಯ ರಾಜಕಾರಣ ಪ್ರವೇಶಿಸಲಿದ್ದು, ವಿಧಾನಸಭೆ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ? ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೆ ಇಂತದ್ದೊಂದು ಚರ್ಚೆ ಕ್ಷೇತ್ರದಲ್ಲಿ ಆರಂಭಗೊಂಡಿದೆ.

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಡಿ.ಕೆ.ಸುರೇಶ್ ರಾಜ್ಯ ರಾಜಕಾರಣ ಪ್ರವೇಶಿಸಲಿದ್ದು, ವಿಧಾನಸಭೆ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ? ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೆ ಇಂತದ್ದೊಂದು ಚರ್ಚೆ ಕ್ಷೇತ್ರದಲ್ಲಿ ಆರಂಭಗೊಂಡಿದೆ.

ಚನ್ನಪಟ್ಟಣ ಕ್ಷೇತ್ರದ ಶಾಸಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿರುವುದು ಅನಿವಾರ್ಯ. ತೆರವಾಗುವ ಚನ್ನಪಟ್ಟಣ ವಿಧಾನಸಭೆ ಚುನಾವಣೆಗೆ ನಡೆಯುವ ಉಪಚುನಾವಣೆಯಲ್ಲಿ ಸುರೇಶ್ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಒಂದು ಉಪಚುನಾವಣೆ ಹಾಗೂ ಎರಡು ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸುರೇಶ್ ಸತತ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ವಿರುದ್ಧ ಪರಾಭವಗೊಂಡಿದ್ದಾರೆ. ಮತ್ತೆ ಲೋಕಸಭೆಗೆ ಸ್ಪರ್ಧಿಸಲು ಮುಂದಿನ ಚುನಾವಣೆವರೆಗೆ ಕಾಯಬೇಕು ಅಥವಾ ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯರಾಜಕಾರಣಕ್ಕೆ ಪ್ರವೇಶ ಪಡೆಯಬೇಕು ಎಂಬ ಎರಡು ಆಯ್ಕೆಗಳು ಅವರ ಮುಂದಿದ್ದು, ಅವರು ಯಾವುದನ್ನು ಆಯ್ಕೆ ಮಾಡಿಕೊಳ್ಳುವರು ಎಂಬುದನ್ನು ಕಾದುನೋಡಬೇಕಿದೆ.

ಚನ್ನಪಟ್ಟಣದಲ್ಲಿ ಪುಟಿದೆದ್ದ ಕೈಪಡೆ:

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಬಿಟ್ಟು ಹೋದ ನಂತರ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಬಲ ಕಳೆದುಕೊಂಡಿದ್ದ ಕಾಂಗ್ರೆಸ್ 3ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತಗಳಿಕೆಯನ್ನು ಹೆಚ್ಚಿಸಿಕೊಂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪುಟಿದೆದ್ದಿದೆ.

೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ೮೦,೦೯೯ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ೭೩,೬೩೫ ಮತ ಪಡೆದಿದ್ದರು. ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಾದತ್ ಅಲಿಖಾನ್ ಕೇವಲ ೮,೧೩೪ ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದರು.

೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ೮೭,೯೯೫ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ೬೬,೪೬೫ ಮತ ಪಡೆದಿದ್ದರು. ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ೩೦,೨೦೮ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಎರಡನೇ ಬಾರಿ ಜೆಡಿಎಸ್‌ನಿಂದ ಕಣಕ್ಕೆ ಇಳಿದ ಎಚ್.ಡಿ. ಕುಮಾರಸ್ವಾಮಿ ೯೬,೫೯೨ ಮತಗಳನ್ನು ಪಡೆದು ಜಯಶೀಲರಾಗಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ೮೦,೬೭೭ ಮತಗಳನ್ನು ಪಡೆದು ಪರಾಜಿತರಾದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಗಂಗಾಧರ್ ೧೫,೩೭೪ ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು.

೨೦೧೩, ೨೦೧೪ ಲೋಕಸಭೆ ಚುನಾವಣೆಯಲ್ಲಿ ಯೋಗೇಶ್ವರ್ ಕಾಂಗ್ರೆಸ್ ಬೆಂಬಲಿಸಿದ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಲೀಡ್ ಆಗಿದ್ದರೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗಿನ ಮೈತ್ರಿಯ ಕಾರಣಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ದೊರೆತ್ತಿತ್ತು. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಕಾಂಗ್ರೆಸ್ ೮೫,೩೫೭ ಮತ ಪಡೆದುಕೊಂಡಿದೆ. ಇದು ಕ್ಷೇತ್ರದಲ್ಲಿ ಸೊರಗಿದ್ದ ಕಾಂಗ್ರೆಸ್ ಪಾಲಿಗೆ ಟಾನಿಕ್ ಆಗಿ ಪರಿಣಮಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಹೆಚ್ಚಾಗುವಂತೆ ಮಾಡಿದ್ದು, ಉಪಚುನಾವಣೆಯಲ್ಲಿ ಸುರೇಶ್ ಸ್ಪರ್ಧಿಸಿದರೆ ಗೆಲುವು ಸಾಧಿಸಬಹುದು ಎಂಬ ಭರವಸೆ ಮೂಡಿಸಿದೆ.

ಮಿಷನ್ ೮೫ ಸಾವಿರ ವೋಟ್:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಬಲ ಹೆಚ್ಚಾಗಿತ್ತು. ಚನ್ನಪಟ್ಟಣದಲ್ಲಿ ಮೈತ್ರಿ ಪಕ್ಷದ ಲೀಡ್ ಅನ್ನು ಕುಗ್ಗಿಸಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ರಣತಂತ್ರ ಹೆಣೆದಿತ್ತು. ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಸಂಘಟನೆಯನ್ನು ಚುರುಕುಗೊಳಿಸಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯ ೮೦ರಿಂದ ೮೫ ಸಾವಿರ ಮತಗಳನ್ನು ಪಡೆಯಲೇಬೇಕು ಎಂಬ ನಿಟ್ಟಿನಲ್ಲಿ ಕಾರ್ಯತಂತ್ರ ಹಣೆದ ಮುಖಂಡರು ಅದರಂತೆ ಕಾರ್ಯನಿರ್ವಹಿಸಿದ್ದರು.

ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಸೋಲು ಅನುಭವಿಸಿದ ಪಕ್ಷದಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಲು ವೇದಿಕೆ ನಿರ್ಮಿಸಲು ೮೫ ಸಾವಿರ ಮತಗಳ ಗುರಿಯೊಂದಿಗೆ ಕಾಂಗ್ರೆಸ್ ಸಂಘಟನೆ ನಡೆಸಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆಗಲೇ ಅರಂಭಗೊಂಡಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಸೋಲು ಅನುಭವಿಸಿದ್ದು, ಚನ್ನಪಟ್ಟಣದಲ್ಲಿ ಸಹ ಕಾಂಗ್ರೆಸ್ ಇಟ್ಟುಕೊಂಡಿದ್ದ ಟಾಸ್ಕ್ ಗುರಿ ಮುಟ್ಟಿರುವುದರಿಂದ ಉಪಚುನಾವಣೆಯಲ್ಲಿ ಸುರೇಶ್ ಸ್ಪರ್ಧೆ ಕುರಿತು ಚರ್ಚೆಗಳು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.

ಮತ ಲೆಕ್ಕಾಚಾರ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಮತಗಳು ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ನಡುವೆ ಹಂಚಿಹೋಗಿದ್ದವು. ಇನ್ನು ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗದ ಬಹುಪಾಲು ಮತಗಳು ಕುಮಾರಸ್ವಾಮಿ ಅವರ ಪರ ಚಲಾವಣೆಗೊಂಡ ಕಾರಣಕ್ಕೆ ಅವರು ಗೆಲುವು ಸಾಧಿಸಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಹಿಂದ ವರ್ಗ ಮತ್ತೆ ಕಾಂಗ್ರೆಸ್ ಪರ ನಿಂತಿದ್ದು, ಸುರೇಶ್ ಸ್ಪರ್ಧಿಸಿದರೆ ಒಕ್ಕಲಿಗ ಮತಗಳು ಸಹ ಕ್ರೋಢೀಕರಣಗೊಂಡು ಗೆಲುವು ಸಾಧಿಸಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.