ಸಾರಾಂಶ
- ಎಲ್ಲೆಂದರಲ್ಲಿ ಕಸದ ರಾಶಿ, ಸ್ವಚ್ಛತೆ ಮಾಯ । ಬಿರುಕು ಬಿಟ್ಟು, ಸೋರುತ್ತಿರುವ ಕೊಠಡಿ । ಅಲರ್ಜಿಯಿಂದ ವಿದ್ಯಾರ್ಥಿಗಳ ಮುಖಕ್ಕೆ ಗುಳ್ಳೆ, ಚರ್ಮ ತುರಿಕೆ
------ನಾಗರಾಜ್ ನ್ಯಾಮತಿ
ಕನ್ನಡಪ್ರಭ ವಾರ್ತೆ ಸುರಪುರಕಟ್ಟಡದ ಸುತ್ತ ಎಲ್ಲೆಂದರಲ್ಲಿ ಕಸದ ರಾಶಿ, ಕಿಟಕಿಗಳಿಗೆ ಸೊಳ್ಳೆ ಪರದೆಯ ಜಾಲರಿಯಿಲ್ಲ. ಗೋಡೆಗಳ ಮೇಲೆ ಗುಟ್ಕಾ ಚಿತ್ರಾವಳಿ, ಸಿಂಟೆಕ್ಸ್ ನಲ್ಲಿ ಸಂಗ್ರಹಿಸಿರುವ ನೀರಿನಲ್ಲಿ ಪಾಚಿಗಟ್ಟಿರುವುದು ಹೀಗೆ ಹಲವು ಅವವ್ಯಸ್ಥೆ ಹೊತ್ತು ನಿಂತಿದೆ. ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ (ಎಸ್‌ಸಿ) ವಸತಿ ನಿಲಯ.
ಹಾಸ್ಟೆಲ್‌ನಲ್ಲಿ 280ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಎಲ್ಲ ಕೊಠಡಿಗಳಿಗೂ ವಿದ್ಯುತ್ ಕಲ್ಪಿಸಿದರೂ ವಿದ್ಯುತ್ ಇಲ್ಲದೆ ಕತ್ತಲೆಯಲ್ಲೇ ಕಾಲ ಕಳೆಯಬೇಕು. ಯುಪಿಎಸ್, ಜನರೇಟರ್ ಲೆಕ್ಕಕ್ಕಿಲ್ಲ. ಕಟ್ಟಡದಲ್ಲಿರುವ ಎಲೆಕ್ಟ್ರಿಕಲ್ ಬೋರ್ಡ್‌ಗಳು ತೆರೆದಿವೆ. ಐದು ವರ್ಷದಲ್ಲಿ ಕೊಠಡಿಗಳು ಸೋರುತ್ತಿರುವುದು, ಬಿರುಕು ಬಿಟ್ಟಿರುವುದು ಕಾಮಗಾರಿ ಗುಣಮಟ್ಟ ಪ್ರಶ್ನಿಸುವಂತಿದೆ.ಹಾಸ್ಟೆಲ್ ಸುತ್ತ ಎಲ್ಲೆಂದರಲ್ಲಿ ಕಸದ ರಾಶಿ. ಗೋಡೆಗೆ ಜೇಡ ಕಟ್ಟಿದೆ. ಅದಕ್ಕೆ ಸೊಳ್ಳೆಗಳು ಜೋತು ಬಿದ್ದಿವೆ. ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ಸಿಬ್ಬಂದಿ ಮುಂದಾಗಿಲ್ಲ. ಸೊಳ್ಳೆ ಕಾಟಕ್ಕೆ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ.
ಗುಟ್ಕಾ: ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಗುಟ್ಕಾ ಚಿತ್ರಾವಳಿ ಚೆನ್ನಾಗಿ ಮೂಡಿವೆ. ಮೂಲೆ ಮೂಲೆಯಲ್ಲೂ ಕಂದು ಬಣ್ಣದ ಗುಟ್ಕಾ ಉಗುಳಿದ ಚಿತ್ರಗಳು ಇವೆ.ದುಷ್ಪರಿಣಾಮ: ಮಕ್ಕಳಿಗೆ ಸ್ನಾನಕ್ಕೆ ಪೂರೈಸುವ ಸಿಂಟೆಕ್ಸ್ ನೀರಿನಲ್ಲಿ ಪಾಚಿಗಟ್ಟಿದೆ. ಇದೇ ನೀರನ್ನು ಬಳಸುವ ವಿದ್ಯಾರ್ಥಿಗಳ ಮುಖ, ಹೊಟ್ಟೆ, ಎದೆಯ ಮೇಲೆ ಗುಳ್ಳೆಗಳಾಗಿವೆ. ಮಕ್ಕಳ ಆರೋಗ್ಯದ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಸಂಬಳ ಬಂದರೆ ಸಾಕು ಅನ್ನುವಂತಿದೆ ವಾರ್ಡನ್ ಮತ್ತು ಸಿಬ್ಬಂದಿ ಲೆಕ್ಕಚಾರ.
ತರಕಾರಿಗಿಲ್ಲ ರಕ್ಷಣೆ: ಅಡುಗೆ ಕೊಠಡಿಯಲ್ಲಿ ಸ್ವಚ್ಛತೆ ಇಲ್ಲ. ಪ್ಲಾಸ್ಟಿಕ್‌ನಲ್ಲಿ ತರಕಾರಿ ಇಟ್ಟಿದ್ದಾರೆ. ತರಕಾರಿಗಳನ್ನು ಸಂರಕ್ಷಿಸಿಡಲು ಫ್ರಿಡ್ಜ್‌ಗೆ ಸರ್ಕಾರ ಅನುದಾನ ನೀಡುತ್ತದೆ. ಇದನ್ನು ಒತ್ತುವರಿ ಮಾಡಿರುವ ವಾರ್ಡನ್ ವರ್ಗಾವಣೆಯಾಗಿದ್ದಾರೆ. ಅಡುಗೆ ವಸ್ತ್ರ ಧರಿಸದೆ ಸಿಬ್ಬಂದಿ ಅಡುಗೆ ತಯಾರಿಸುತ್ತಾರೆ. ಆರೋಗ್ಯದ ಬಗ್ಗೆ ಯಾರಿಗೂ ಕಾಳಜಿಯಿಲ್ಲ ಎಂಬುದು ವಸತಿ ನಿಲಯದ ವಿದ್ಯಾರ್ಥಿಗಳ ಅಳಲು.ಕಟ್ಟಡಗಳ ಶಿಥಿಲಾವಸ್ಥೆ: ಕಟ್ಟಡದೊಳಗೆ ಕೊಠಡಿಯ ನೀರು ಹೊರಹಾಕಲು ಅಳವಡಿಸಿದ ಪೈಪ್‌ಗಳು ಒಡೆದು ಸೋರುತ್ತಿವೆ. ಇದರಿಂದ ಗೋಡೆಗಳೆಲ್ಲ ತೇವಾಂಶದಿಂದ ಕೂಡಿ, ಕಟ್ಟಡವನ್ನು ಶಿಥಿಲಾವಸ್ಥೆಗೆ ನೂಕುವಂತಿದೆ.
ಪುಸ್ತಕವಿಲ್ಲದ ಗ್ರಂಥಾಲಯ: ಹಾಸ್ಟೆಲ್ ನಲ್ಲಿ ಪುಸ್ತಕವಿಲ್ಲದ ಗ್ರಂಥಾಲಯದಲ್ಲಿ ಮಕ್ಕಳು ಓದುವುದಾದರೂ ಹೇಗೆ? ನಿರ್ವಹಣೆ ಮಾಡದಿರುವುದನ್ನು ನೋಡಿದರೆ, ಅಧಿಕಾರಿಗಳು ನಡದಂಗೆ ಹಾಸ್ಟೆಲ್ ನಡೆಯಲಿ ಅನ್ನುವ ಮನೋಭಾವ ತಾಳಿದಂತಿದೆ.ಅನಾಥವಾಗಿ ಬಿದ್ದ ಹಾಸಿಗೆ: ಕಟ್ಟಡ ಮೇಲ್ಛಾವಣಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದ ಹಾಸಿಗೆಗಳು ಬೇಕಾಬಿಟ್ಟಿಯಾಗಿ ಬಿದ್ದಿವೆ. 20ಕ್ಕೂ ಹೆಚ್ಚು ಹಾಸಿಗೆಗಳಿದ್ದು, ಬಿಸಿಲಿನಲ್ಲಿ ಒಣಗಿದರೆ ಮಳೆಯಲ್ಲಿ ನೆನೆಯುತ್ತಿವೆ. ವಾರ್ಡನ್‌ಗೆ ಹೇಳಿದರೂ ಹಾಸಿಗೆ ಒಳಗೆ ಹಾಕಿಸಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.ಸೊಳ್ಳೆಗಳು ಉತ್ಪತ್ತಿ: ಮಕ್ಕಳು ಬಟ್ಟೆ ತೊಳೆದ ನೀರು ಮುಂದಕ್ಕೆ ಸಾಗದೆ ಚರಂಡಿಯಾಗಿದೆ. ಆದರಲ್ಲೇ ನಿಂತು ಬಟ್ಟೆ ತೊಳೆಯಬೇಕಾದ ಅನಿವಾರ್ಯತೆ. ಇ ಸೊಳ್ಳೆ ಉತ್ಪತ್ತಿ ತಾಣವಾಗಿದೆ. ಕಟ್ಟಡದ ಮೇಲ್ಛಾವಣಿ ಮೇಲೆ ಸಿಂಟೆಕ್ಸ್ ತುಂಬಿದ ಬಳಿಕ ನೀರು ನಿಲ್ಲಿಸದ ಕಾರಣ ತುಂಬಿ ಹರಿಯುತ್ತದೆ. ಅಲ್ಲಿಯೇ ನಿಲ್ಲುವ ನೀರು ಮೇಲ್ಛಾವಣಿ ನೆನೆದು ಸೋರುತ್ತಿದೆ. ನಿಂತಿರುವ ನೀರನ್ನು ಸಾಗಿಸುವ ಯತ್ನಕ್ಕೆ ಮುಂದಾಗಿರುವುದು ಹಾಸ್ಟೆಲ್ ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳ ವರ್ತನೆಗೆ ಹಿಡಿದ ಕೈಗನ್ನಡಿ.
ಬಾಲಕರ (ಪ.ಜಾ) ವಸತಿ ನಿಲಯಕ್ಕೆ ಸರ್ಕಾರ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರೂ ಸಮಸ್ಯೆಗಳು ಕಣ್ಣಿಗೆ ಬೀಳದಿರುವುದು ಅಚ್ಚರಿ ಮೂಡಿಸಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಕಾದು ನೋಡಬೇಕಿದೆ..........ಕೋಟ್........
ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಸರ್ಕಾರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯ ವ್ಯವಸ್ಥೆ ಮಾಡಿ ಅನುದಾನ ನೀಡುತ್ತದೆ. ಆದರೆ, ಅದನ್ನು ಸಮರ್ಪಕವಾಗಿ ವಿನಿಯೋಗಿಸಲು ಅಧಿಕಾರಿಗಳು ಎಡವಿದ್ದಾರೆ. ಇಲ್ಲಿ ಕಂಡಿರುವ ಸಮಸ್ಯೆಯ ಪ್ರತಿಯೊಂದರ ಸವಿವರವಾದ ವರದಿಯನ್ನು ಜಿಲ್ಲಾಧಿಕಾರಿಗೆ ಶೀಘ್ರದಲ್ಲೇ ನೀಡುತ್ತೇನೆ.- ನಿಂಗಪ್ಪ ಎಂ. ಬುಡ್ಡ, ಜಿಲ್ಲಾಮಟ್ಟದ ಎಸ್ಸಿ ಮತ್ತು ಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ.
------ಫೋಟೋ: 13ವೈಡಿಆರ್2: ಸುರಪುರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ (ಎಸ್‌ಸಿ) ಹಾಸ್ಟೆಲ್.
-----13ವೈಡಿಆರ್3: ಕಟ್ಟಡದ ಮೇಲ್ಛಾವಣಿ ಮೇಲೆ ಎಲ್ಲೆಂದರಲ್ಲಿ ಬಿದ್ದಿರುವ ಹಾಸಿಗೆ.
------13ವೈಡಿಆರ್4: ಹಾಸ್ಟೆಲ್ ಕೊಠಡಿಯ ಗೋಡೆಗಳ ಮೇಲೆ ಗುಟ್ಕಾ ತಿಂದು ಉಗುಳಿರುವುದು.
-----13ವೈಡಿಆರ್5: ಬಟ್ಟೆಯ ತೊಳೆಯುವ ಸ್ಥಳದಲ್ಲಿ ನೀರು ನಿಂತಿರುವುದು.
---000----