ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಹೊಳಲು ಗ್ರಾಮದ ಸರ್ವೆ ನಂ.1ರಲ್ಲಿ ಪೈಸಾರಿ ಗುರುತಿಸಲು ಸರ್ವೆ ಕಾರ್ಯ ನಡೆಸಲಾಯಿತು. ಪೈಸಾರಿ ಸ್ಥಳದಲ್ಲಿ ಉಪ ಆರೋಗ್ಯ ಕೇಂದ್ರದ ಸರ್ಕಾರಿ ಕಟ್ಟಡವಿದ್ದು, ಅದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಅದರಂತೆ ಕೂಡಿಗೆ ಗ್ರಾಪಂನಲ್ಲಿ ನಡೆದ ತುರ್ತು ಸಭೆಯ ನಿರ್ಣಯ ಹಾಗೂ ಗ್ರಾಮಸಭೆಯ ಬೇಡಿಕೆಯಂತೆ 4.70 ಎಕರೆ ಪೈಸಾರಿ ಊರುಡುವೆ ಜಾಗ ಗುರುತಿಸುವ ಹಿನ್ನಲೆಯಲ್ಲಿ ಗ್ರಾಮಸ್ಥರು, ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು.ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್, 2012 ರಲ್ಲಿ ಆರೋಗ್ಯ ಇಲಾಖೆಯಿಂದ ಈ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಯಿತು. ಕಾಮಗಾರಿ ಅಪೂರ್ಣವಾಗಿದ್ದು ತಡವಾದ ಸಂದರ್ಭ ಸ್ಥಳೀಯ ವ್ಯಕ್ತಿ ಈ ಕಟ್ಟಡ ಅತಿಕ್ರಮಿಸಿಕೊಂಡಿರುವುದು ಗ್ರಾ.ಪಂ. ಗಮನಕ್ಕೆ ಬಂದಿದೆ. ಇದನ್ನು ವಿಚಾರಿಸಲು ಬಂದಾಗ ಜನಪ್ರತಿನಿಧಿಗಳ ಮೇಲೆಯೇ ದೂರು ದಾಖಲಿಸುವ ಪ್ರಯತ್ನ ನಡೆದಿದೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಗ್ರಾಪಂ ತುರ್ತು ಸಭೆ, ಗ್ರಾಮಸಭೆಗಳಲ್ಲಿ ವಿಷಯ ಪ್ರಸ್ತಾಪಗೊಂಡು ಗ್ರಾಮಸ್ಥರ ಬೇಡಿಕೆ ಹಿನ್ನಲೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಶಾಸಕರು ಈ ಕಟ್ಟಡ ಉಳಿಸುವಲ್ಲಿ ಕ್ರಮವಹಿಸಬೇಕಿದೆ ಎಂದರು. ಗ್ರಾಪಂ ಸದಸ್ಯ ಟಿ.ಪಿ. ಹಮೀದ್ ಮಾತನಾಡಿ, ಹೆಬ್ಬಾಲೆ ಅರೋಗ್ಯ ಕೇಂದ್ರದ ಉಪಕೇಂದ್ರವಾಗಿ ಆರಂಭಿಸುವ ಉದ್ದೇಶದಿಂದ ಜಿಪಂ ವತಿಯಿಂದ 2011 ರಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಒಂದು ಹಂತದ ಕಾಮಗಾರಿಗೆ ಸರ್ಕಾರದ ವತಿಯಿಂದ 12 ಲಕ್ಷ ರು. ಬಿಲ್ ಕೂಡ ಮಾಡಲಾಗಿದೆ. ಮಧ್ಯದಲ್ಲಿ ಖಾಸಗಿ ವ್ಯಕ್ಯಿ ಈ ಸ್ಥಳ ನನಗೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ಹೂಡಿದ್ದ ದಾವೆ 2019ರಲ್ಲಿ ತೆರವಾಗಿತ್ತು. ನಂತರದ ದಿನಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಇತ್ತೀಚೆಗೆ ಈ ಸರ್ಕಾರಿ ಕಟ್ಟಡದಲ್ಲಿ ಕುಟುಂಬವೊಂದು ವಾಸ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಸರ್ವೆ ನಡೆಸಬೇಕೆಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಸರ್ವೆ ನಡೆಸಲಾಗುತ್ತಿದೆ. ಸರ್ಕಾರಿ ಜಾಗ ಎಂದು ವರದಿ ಬಂದ ಕೂಡಲೆ ಅಕ್ರಮವಾಗಿ ನೆಲೆಸಿರುವ ವ್ಯಕ್ತಿಗಳನ್ನು ಇಲ್ಲಿಂದ ತೆರವುಗೊಳಿಸಲು ಪಂಚಾಯಿತಿ ಮುಂದಾಗಲಿದೆ ಎಂದರು. ಸರ್ವೆ ಸಂದರ್ಭ ನೆರೆದಿದ್ದ ಗ್ರಾಮಸ್ಥರು ಅತಿಕ್ರಮಣದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಜಯಶೀಲಾ, ಲಕ್ಷ್ಮಿ, ರವಿ, ರತ್ನಮ್ಮ ಮಂಗಳಾ, ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಮಧುಸೂದನ್, ಕಂದಾಯ ಪರಿವೀಕ್ಷಕ ಸಂತೋಷ್ , ತಾಲೂಕು ಆರೋಗ್ಯ ಅಧಿಕಾರಿ ಡಾ. ಇಂದೂಧರ್, ಸರ್ವೆ ಅಧಿಕಾರಿ ವೆಂಕಟೇಶ್, ಗ್ರಾಮಲೆಕ್ಕಾಧಿಕಾರಿ ಗುರುದರ್ಶನ್, ವೆಂಕಟೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.