ಭಾಷಾ ಪತ್ರಿಕೆಗಳ ಉಳಿವು ಇಂದಿನ ತುರ್ತು ಅಗತ್ಯ

| Published : Apr 02 2024, 01:06 AM IST

ಸಾರಾಂಶ

ಚಿತ್ರದುರ್ಗದ ಎಸ್ ಆರ್ ಎಸ್ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು 26 ಮಂದಿ ಪತ್ರಕರ್ತರಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಪಿ.ಸಾಯಿನಾಥ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಪತ್ರಿಕಾ ಮಾಧ್ಯಮ ಅತ್ಯಂತ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ಭಾಷಾ ಪತ್ರಿಕೆಗಳ ಉಳಿವು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಪ್ರತಿಪಾದಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಇಲ್ಲಿನ ಎಸ್‌ಆರ್‌ಎಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ 26 ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ವರದಿ ಪ್ರಕಟಿಸಿದ್ದರ ಪರಿಣಾಮ ಇಂಗ್ಲೆಂಡ್‌ನಲ್ಲಿ ಅನ್ಯ ಭಾಷಾ ಪತ್ರಿಕೆಗಳನ್ನು ಹತ್ತಿಕ್ಕುವ ಕೆಲಸವಾಯಿತು. ಬೆಂಗಾಲಿ ಭಾಷೆಯ ಅಮೃತಾ ಬಜಾರ್ ಇಂಗ್ಲೀಷ್ ಪತ್ರಿಕೆಯಾಯಿತು. ಪ್ರಭುತ್ವ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಮುಂದಾಗುತ್ತಿರುವುದು ಸರಿಯಾದ ಧೋರಣೆಯಲ್ಲ. ಭಾಷಾ ಪತ್ರಿಕೆಗಳ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕೆಂದರು.

ಭಾರತದ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕ ಕೂಡ ಸರಿಯಾಗಿಲ್ಲ. ತೀವ್ರ ಕುಸಿತ ಕಂಡಿದೆ. ವಿಶ್ವದ ಮಾಧ್ಯಮ ಸ್ವಾತಂತ್ರೃ ಸೂಚ್ಯಂಕ 180 ದೇಶಗಳಿಗೆ ಹೋಲಿಸಿದರೆ ಭಯ ಆವರಿಸುತ್ತದೆ. ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅಂಬಾನಿ, ಆದಾನಿಯಂತಹ ಉದ್ದಿಮೆದಾರರು ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವುದರಿಂದ ಅಪಾಯದ ಗಂಟೆ ಬಾರಿಸಿದೆ. ಉದ್ದಿಮೆದಾರರ ಬಿಗಿ ಹಿಡಿತದಿಂದ ಪಾರಾಗುವ ಮಾರ್ಗಗಳ ಬಗ್ಗೆ ಚರ್ಚೆಯಾಗುತ್ತಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.

ಕೋವಿಡ್ ದಾಳಿ ವೇಳೆ 47 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ವಿಶ್ವಗುರು 4.82 ಲಕ್ಷ ಜನ ಸತ್ತಿದ್ದಾರೆ ಎಂದು ಹೇಳುತ್ತಾರೆ. ಮೋದಿ ವಿಚಾರದಲ್ಲಿ ಪ್ರಶ್ನೆ ಮಾಡುವ ಮನೋಭಾವಗಳೇ ನೇಪಥ್ಯಕ್ಕೆ ಸರಿದಿವೆ. ಕಳೆದ 10 ವರ್ಷದಲ್ಲಿ ಒಂದೂ ಸುದ್ದಿಗೋಷ್ಠಿ ಮಾಡದ ಪ್ರಧಾನಿ ನರೇಂದ್ರ ಮೋದಿ ಕುರಿತು ಯಾವ ಮಾಧ್ಯಮವೂ ಪ್ರಶ್ನಿಸಿಲ್ಲ. ಕಳೆದ ಫೆಬ್ರವರಿ 11 ಮತ್ತು 12 ರಂದು ಪಂಜಾಬ್‌ನ ಹರಿಯಾಣದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಡ್ರೋನ್ ಬಳಸಿ ದಾಳಿ ಮಾಡಲಾಯಿತು. ಅತ್ಯಂತ ಘೋರವಾದ ಈ ಘಟನೆಯ ದೇಶದ ಯಾವ ಪತ್ರಿಕೆಗಳು ತನ್ನ ಸಂಪಾದಕೀಯದಲ್ಲಿ ನಮೂದು ಮಾಡದೇ ಇರುವುದು ಮಾಧ್ಯಮಗಳ ತಪ್ಪಿರುವ ಹಾದಿಯ ನಿಚ್ಚಳವಾಗಿಸಿದೆ ಎಂದರು

ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಪತ್ರಕರ್ತರ ವರದಿಗಳು ಸಾಮಾಜಿಕ ಬದಲಾವಣೆಗೆ ಹೆಚ್ಚು ಆದ್ಯತೆ ನೀಡುವಂತಿರಬೇಕು. ಸಮಾಜಕ್ಕೆ ಏನು ಬೇಕೋ ಅದನ್ನು ಕೊಡುವ ಕೆಲಸ ಪತ್ರಿಕೆಗಳಿಂದ ಆಗುತ್ತಿಲ್ಲ. ಪ್ರಸ್ತುತ ಮಾಧ್ಯಮಗಳ ಜವಾಬ್ದಾರಿ ಹೆಚ್ಚು ಆಗಬೇಕಿತ್ತು. ಆದರೆ ಅಂತಹ ಮನೋಧರ್ಮ ಎಲ್ಲಿಯೂ ಕಾಣಿಸುತ್ತಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪತ್ರಿಕೋದ್ಯಮದ ಅಗತ್ಯವಿಲ್ಲ ಎಂದರು.

ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ವೇಗವನ್ನು ಹೆಚ್ಚಿಸಿದೆಯೇ ಹೊರತು ಸಂವಹನ ಕ್ರಿಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತ ವಿಶೇಷ ವರದಿ ಬರೆದು ರಾಜ್ಯ, ದೇಶದ ಗಮನ ಸೆಳೆಯುವ ಜವಾಬ್ದಾರಿಯ ಪತ್ರಕರ್ತರು ಹೊರಬೇಕೆಂದರು

ಪತ್ರಕರ್ತರಾದ ಬಿ.ಎಂ.ಬಶೀರ್, ಆರ್.ಜಯಕುಮಾರ್, ವಿಜಯಕುಮಾರ್ ವಾರದ, ಕುಂತಿನಾಥ ಶ್ರೀ ಕಲಮನಿ, ಸಿ.ಕೆ.ಮಹೇಂದ್ರ, ಎನ್.ಬಾಬು, ವಿ.ವೆಂಕಟೇಶ್, ಡಿ.ಆರ್.ಅಶೋಕ್‌ರಾಮ್, ನಾಮದೇವ ವಾಟ್ಕರ್, ಸಿ.ಜಿ.ಮಂಜುಳಾ, ಚಿಕ್ಕಪ್ಪನಹಳ್ಳಿ ಷಣ್ಮುಖ, ಪ್ರಭುದೇವ ಶಾಸ್ತ್ರಿಮಠ. ಆರ್.ರವಿ, ಮಲ್ಲಿಗೆ ಮಾಚಮ್ಮ, ಶಶಿಕುಮಾರ ಜಿ ಕೆರೂರ, ಕೆ.ಗೋಪಿಕಾ ಮಲ್ಲೇಶ್, ಮೋಹನ ಹೆಗಡೆ, ಮನೋಹರ ಮಲ್ಲಾಡದ, ಆರ್.ಸಿ.ಪುಟ್ಟರಾಜು, ಸನತ್‌ಕುಮಾರ್ ಬೆಳಗಲಿ, ಎಚ್.ಕೆ.ಬಸವರಾಜು, ಬಿ.ಎಂ.ನಂದೀಶ್ ಸೇರಿ 22ಮಂದಿಗೆ 2023ರ ದತ್ತಿನಿಧಿ ಪ್ರಶಸ್ತಿ ಹಾಗೂ ಶ.ಮಂಜುನಾಥ್, ರವಿ ಮಲ್ಲಾಪುರ, ಎಸ್.ಬಿ.ರವಿಕುಮಾರ್, ಎಚ್.ರಾಮಚಂದ್ರ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಎಸ್ ಆರ್ ಎಸ್ ಸಮೂಹ ಸಂಸ್ಥೆ ಮುಖ್ಯಸ್ಥ ಬಿ.ಎ.ಲಿಂಗಾರೆಡ್ಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ, ಉಪಾಧ್ಯಕ್ಷರಾದ ಪುಂಡಲೀಕ ಭೀ ಬಾಳೋಜಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಐಯುಡಬ್ಲ್ಯುಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜನಯ್ಯ, ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್.ಸಿದ್ಧರಾಜು, ಖಜಾಂಚಿ ಡಿ.ಕುಮಾರಸ್ವಾಮಿ, ಎಂ.ಎನ್. ಅಹೋಬಲಪತಿ, ಉಪಾಧ್ಯಕ್ಷ ಸಿ.ಪಿ.ಮಾರುತಿ, ಕಾರ್ಯದರ್ಶಿಗಳಾದ ವಿ.ವೀರೇಶ್, ನಾಗರಾಜ ಕಟ್ಟೆ, ಬಿ.ಎಸ್.ವಿನಾಯಕ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಯೋಗೀಶ್ ಇತರರಿದ್ದರು.