ಸಾರಾಂಶ
ಹೊಸದುರ್ಗ : ಸ್ವಾಮಿಗಳು ಬಹಿರಂಗವಾಗಿ ಕಾವಿ ಹಾಕಿಕೊಳ್ಳುವುದು ಮುಖ್ಯವಲ್ಲ. ತಮ್ಮ ಕಾಮನೆಗಳಿಗೆ ಕಾವಿಹಾಕಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ನಡೆಯುತ್ತಿರುವ ವಚನ ಕಮ್ಮಟ 3 ದಿನದ ಕಾರ್ಯಕ್ರಮದಲ್ಲಿ ಲಿಂಗಾಯತ ಮಠಗಳು ಮತ್ತು ಬಸವತತ್ವ ಅನುಷ್ಠಾನ ಕುರಿತು ಮಾತನಾಡಿದರು.
ಮಾನವನ ಮೂಲಭೂತ ಅಗತ್ಯಗಳನ್ನು ಪೂರೈಸಿದರೆ ಆದರ್ಶದ ಪಥದತ್ತ ಸಾಗಲು ಸಾಧ್ಯ. ಖಾವಿ ಧರಿಸಿದವರ ಬದುಕು ಹೇಗಿದೆ ಅನ್ನೋದನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪತಿಯೊಬ್ಬರು ಅಂತರಂಗದ ಶುದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಬಹಳಷ್ಟು ಜನ ಅರಿಷಡ್ವರ್ಗಗಳನ್ನು ತುಂಬಿಕೊಂಡು ತಮ್ಮ ದೇಹವನ್ನು ಚರಂಡಿ ಮಾಡಿಕೊಂಡಿದ್ದಾರೆ ಎಂದರು.
ಕಾವಿಧಾರಿಗಳು ಕಾಮನೆಗಳ ಹಿಂದೆ ಓಡದೆ ಜಿತೇಂದ್ರಿಯಗಳ ಮೇಲೆ ಹಿಡಿತ ಸಾಧಿಸಬೇಕು. ತಮ್ಮ ಕಾಮನೆಗಳನ್ನು ತಾವೇ ನಿಯಂತ್ರಿಸಿಕೊಳ್ಳುವುದರಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು. ಪರಸ್ತ್ರೀಯನ್ನು ಕಣ್ಣೆತ್ತಿಯೂ ನೋಡಬಾರದು ಎನ್ನುವ ಗುರು ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕು. ಮೌಢ್ಯದಿಂದ ಮುಕ್ತರಾಗರಬೇಕು. ಹೋಮ, ಹವನ ಲಿಂಗಾಯತ ಧರ್ಮದ ಆಚರಣೆಗಳಲ್ಲ. ತುಂಬಾ ಆಳವಾಗಿ ನಮ್ಮನ್ನು ಆಳುತ್ತಿರುವ ವೈದಿಕ ಆಚರಣೆಗಳಿಂದ ಮುಕ್ತರಾಗಲು ಬಸವತತ್ವಗಳಿಗೆ ಹೆಚ್ಚು ಹೆಚ್ಚು ಅಂಟಿಕೊಳ್ಳಬೇಕು ಎಂದರು.
ಮನುಷ್ಯ ಸಾಕ್ಷರರಾಗಬೇಕೇ ಹೊರತು ರಾಕ್ಷಸರಾಗಬಾರದು. ಕಾವಿಧಾರಿಗಳು ಕಾಲಿಗೆ ಬೀಳಿಸಿಕೊಳ್ಳುವ ಯೋಗ್ಯತೆ ನನ್ನಲ್ಲಿ ಇದೆಯಾ ಎಂದು ಆಲೋಚನೆ ಮಾಡಿ ಕಾಲಿಗೆ ಬೀಳಿಸಿಕೊಳ್ಳಬೇಕು. ಕೆಲವು ಮಠಾಧಿಪತಿಗಳು ಈಗಲೂ ವೈದಿಕ ಪರಂಪರೆಯ ವಾರಸುದಾರರ ಹಾಗೆ ವರ್ತಿಸುತ್ತಿದ್ದಾರೆ ಇದರಿಂದ ಗದ್ದುಗೆ ಪವಾಡಗಳು ಹೆಚ್ಚಾಗುತ್ತಿವೆ.
ಸ್ವಾಮಿಗಳಾದವರು ಮಾರ್ಗದರ್ಶನ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು. ಮಠಾಧೀಶರಿಗೆ ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ಅವುಗಳನ್ನು ಮಾಡುವುದು ಬಿಟ್ಟು ಅನ್ಯ ಕೆಲಸಗಳಿಗೆ ಕೈಹಾಕಿದರೆ ತಪ್ಪು ದಾರಿ ತುಳಿಯಲಿಕ್ಕೆ ಅವಕಾಶ ಮಾಡಿಕೊಡುವುದು. ಪೀಠಕ್ಕೆ ಕೂರಿಸುವಾಗ ಯಾವುದೇ ಜಾತಿ, ಧರ್ಮ, ಪಂಥ, ಪಂಗಡ ನೋಡದೇ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಮಠಾಧಿಪತಿಗಳು ಶರಣ ಸಾಹಿತ್ಯದ ಹಿನ್ನಲೆಯಲ್ಲಿ ಸಾಮೂಹಿಕ ವಿವಾಹ, ವಿಧವಾ ವಿವಾಹಕ್ಕೆ ಪ್ರೋತ್ಸಾಹ ಮಾಡಬೇಕು ಎಂದರು.
ಗೋಷ್ಠಿಯಲ್ಲಿ "ಕರಣ ಹಸಿಗೆ " ಕುರಿತು ಮೈಸೂರಿನ ಡಾ. ಶರಶ್ಚಂದ್ರ ಸ್ವಾಮಿಗಳು, ವಚನಕಾರರ ನೆಲೆಯಲ್ಲಿ ಪಾಪ-ಪುಣ್ಯ, ಸ್ವರ್ಗ-ನರಕ’ ವಿಷಯ ಕುರಿತಂತೆ ಚಿಂತಕಿ ಎಂ.ಎಸ್.ಆಶಾದೇವಿ, ಆತ್ಮನಿವೇದನೆ’ ಕುರಿತು ಸಾಹಿತಿ ಲೋಕೇಶ್ ಅಗಸನಕಟ್ಟೆ ಮಾತನಾಡಿದರು.
ಸಾಹಿತಿ ಬಸವರಾಜ ಸಾದರ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಗ್ಗೆ ಜಡೆ ಸ್ವಾಮಿಗಳವರಿಂದ ಯೋಗಾಭ್ಯಾಸ ನಡೆಯಿತು. ನಂತರ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಪ್ರಸಾದ ನಡೆಯಿತು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು.