5ಕ್ಕೆ ಡಾ.ಬಸವ ಮರುಳಸಿದ್ದ ಸ್ವಾಮೀಜಿ ದೀಕ್ಷಾ ಸಮಾರಂಭ

| Published : Dec 03 2024, 12:31 AM IST

5ಕ್ಕೆ ಡಾ.ಬಸವ ಮರುಳಸಿದ್ದ ಸ್ವಾಮೀಜಿ ದೀಕ್ಷಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಡಿ.5 ರಂದು ಡಾ.ಬಸವ ಮರುಳಸಿದ್ದ ಸ್ವಾಮೀಜಿಯವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 5 ಗಂಟೆಗೆ ಬೆಕ್ಕಿನ ಕಲ್ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಮ್ಮ ಲಿಂಗ ಹಸ್ತದಿಂದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮಿಗಳಿಗೆ ಅನುಗ್ರಹಿಸಲಿದ್ದಾರೆ. ಈ ದೀಕ್ಷಾ ವಿಧಿ ವಿಧಾನದ ಸಂದರ್ಭದಲ್ಲಿ, ಈರ್ವರು ಶ್ರೀಗಳ ಜೊತೆಯಲ್ಲಿ 6 ಷಡಸ್ಥಲ ಮೂರ್ತಿಗಳು, ಒಬ್ಬರು ವಚನ ಮೂರ್ತಿಗಳು ಹಾಗೂ ನಾಡಿನ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡಲಿದ್ದಾರೆ ಎಂದರು.

11ಗಂಟೆಯಿಂದ ಮಾಚೇನಹಳ್ಳಿ ಡೈರಿ ಪಕ್ಕದಲ್ಲಿರುವ ಬಸವ ನೆಲೆಗೆ ನೀಡಿರುವ ಜಾಗದಲ್ಲಿ ನಡೆಯುವ ಬಹಿರಂಗ ಅಧಿವೇಶನದಲ್ಲಿ ಶ್ರೀಗಳ ಜೊತೆ ನಿಟ್ಟೂರಿನ ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ಜಗದ್ಗುರು ರೇಣುಕಾನಂದ ಮಹಾ ಸ್ವಾಮೀಜಿ ಹಾಗೂ ಕಡೂರಿನ ಯಳನಾಡು ಸಂಸ್ಥಾನ ಮಠದ ಜಗದ್ಗುರು ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ನಾಡಿನ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಜರುಗುವ ಈ ಅಧಿವೇಶನವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಉಪಸ್ಥಿತರಿರುವರು.

ಚಿನ್ಮಯನುಗ್ರಹ ದೀಕ್ಷೆಯ ಕುರಿತಾಗಿ ಹಿರಿಯ ಸಂಶೋಧಕ ಡಾ.ವೀರಣ್ಣ ರಾಜೂರ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಸಮಾಜ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಡಿಸಿ, ಎಸ್‌ಪಿ ಹಾಗೂ ಜಿಪಂ ಸಿಇಒ, ಶಿವಮೊಗ್ಗ ತಹಸೀಲ್ದಾರ್, ನಿದಿಗೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಭಾಗವಹಿಸಲಿದ್ದಾರೆ. ಈ ಅಧಿವೇಶನದಲ್ಲಿ 2ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಎಚ್.ಸಿ.ಯೋಗೇಶ್, ಎಸ್.ಪಿ.ದಿನೇಶ್, ಜಿ.ವಿಜಯ್‍ಕುಮಾರ್, ಬಾಳೆಕಾಯಿ ಮೋಹನ, ಟಿ.ಬಿ.ಜಗದೀಶ್, ಕಿರಣ್, ಮಹಾರುದ್ರ, ಹಾಲಸ್ವಾಮಿ ಉಪಸ್ಥಿತರಿದ್ದರು.