ಭಾರತ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಸಿದ್ಧತೆಯಲ್ಲಿದೆ

| Published : Jul 26 2024, 01:35 AM IST

ಭಾರತ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಸಿದ್ಧತೆಯಲ್ಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಗಾಲ ಹೀರಿಕೊಳ್ಳುವ ಯಂತ್ರಗಳ ಅಭಿವೃದ್ಧಿ, ಖರೀದಿಯ ಜೊತೆಗೆ ಇಂಗಾಲ ಹೊರಸೂಸುವ ಘಟಕಗಳ ಸುಧಾರಣೆಗೆ ಕ್ರಮವಹಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಶೂನ್ಯ ಇಂಗಾಲದ ಆರ್ಥಿಕತೆ ಸಾಧಿಸುವುದು ಸೇರಿದಂತೆ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಿದ್ಧತೆಯನ್ನು ಭಾರತ ಮಾಡಿಕೊಂಡಿದೆ ಎಂದು ನಾಗ್ಪುರದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ (ನೀರಿ) ಮುಖ್ಯ ವಿಜ್ಞಾನಿ ಡಾ.ಆರ್‌.ಜೆ. ಕೃಪಾದಂ ತಿಳಿಸಿದರು.

ಬನ್ನಿಮಂಟಪದ ಜೆಎಸ್‌ಎಸ್‌ ಔಷಧ ವಿಜ್ಞಾನ ಕಾಲೇಜಿನಲ್ಲಿ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಹವಾಮಾನ ಬದಲಾವಣೆ– ತಗ್ಗಿಸುವಿಕೆ, ಅಳವಡಿಸುವಿಕೆ ಹಾಗೂ ಸ್ಥಿತಿಸ್ಥಾಪಕತ್ವ ಕುರಿತು ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಂಗಾಲ ಹೀರಿಕೊಳ್ಳುವ ಯಂತ್ರಗಳ ಅಭಿವೃದ್ಧಿ, ಖರೀದಿಯ ಜೊತೆಗೆ ಇಂಗಾಲ ಹೊರಸೂಸುವ ಘಟಕಗಳ ಸುಧಾರಣೆಗೆ ಕ್ರಮವಹಿಸಬೇಕು. ಸದ್ಯದಲ್ಲಿ ಇಂಗಾಲ ಹೀರುವಿಕೆಯ ತಂತ್ರಜ್ಞಾನ ದುಬಾರಿಯಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಅಗತ್ಯಗಳ ಪೂರೈಕೆಗೆ ಇಂಗಾಲ ಹೊರಸೂಸುವಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಅಗತ್ಯ ವಸ್ತುಗಳು, ಸಂಪನ್ಮೂಲಗಳ ಬಳಕೆಯಲ್ಲೂ ಸುಸ್ಥಿರತೆ ಕಾಪಾಡಿಕೊಳ್ಳಬೇಕು. ಜಾಗತಿಕ ತಾಪಮಾನ ಪ್ರಮಾಣವನ್ನು 1.5 ಡಿಗ್ರಿ ಸೆಲ್ಸಿಯಸ್‌ ಗೇ ಸೀಮಿತಗೊಳಿಸುವುದಕ್ಕೆ ಪೂರಕವಾಗಿ ವಾತಾವರಣಕ್ಕೆ ಇಂಗಾಲದ ಹೊರಸೂಸುವಿಕೆಯ ಪ್ರಮಾಣ ಶೂನ್ಯಗೊಳಿಸಲು ಭಾರತವು ಬದ್ಧತೆ ತೋರಿದೆ. 2070ರ ವೇಳೆಗೆ ಶೂನ್ಯ ಇಂಗಾಲದ ಆರ್ಥಿಕತೆ ಸಾಧಿಸಲು ಗುರಿ ಹಾಕಿಕೊಂಡಿದೆ ಎಂದರು.

ಹಸಿರು ಇಂಧನಕ್ಕೆ ಭಾರತವು ಹೊರಳಲು ಸಿದ್ಧತೆ ನಡೆಸಿದೆ. ಹೀಗಾಗಿ ನವೀಕೃತ ಇಂಧನಗಳ ಬಳಕೆಗೆ ಮುಂದಾಗಿದೆ. ಹಸಿರು ಮನೆ ಅನಿಲಗಳ ಹೆಚ್ಚಳದಿಂದ ವಾತಾವರಣದ ಉಷ್ಣಾಂಶ ಹೆಚ್ಚಾಗಲಿದೆ. ಅದ್ದರಿಂದ ಕೀಟಗಳು ವ್ಯಾಪಕ ನಾಶವಾಗಲಿದೆ. ತಾಪಮಾನವು 3 ಡಿಗ್ರಿ ಸೆಲ್ಸಿಯಸ್‌ ನಷ್ಟು ಹೆಚ್ಚಾದರೆ ಜಗತ್ತಿನ ಶೇ. 60ರಷ್ಟು ಕೀಟಗಳು ನಿರ್ನಾಮವಾಗಲಿವೆ. ಇದು ಜೀವ ವೈವಿಧ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದರು.

ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆ ಮನುಷ್ಯನಿಗೆ ಸವಾಲಾಗಿದೆ. ವಾಸ್ತವವನ್ನು ಒಪ್ಪಿಕೊಂಡು ತಾಪಮಾನ ಏರಿಕೆ ತಡೆಗೆ ಮನುಷ್ಯನ ಜೀವನಶೈಲಿ ಬದಲಾಗಬೇಕು. ಇದಕ್ಕೆ ಸಂ‍ಪನ್ಮೂಲಗಳ ಸುಸ್ಥಿರ ಬಳಕೆಯೇ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಮನೆ ಬಳಕೆಯ ವಿದ್ಯುತ್‌ ಗೆ ಸೌರಶಕ್ತಿ ಬಳಸಬೇಕು. ಸರ್ಕಾರದ ಯೋಜನೆಗಳ ಸೌಲಭ್ಯವನ್ನು ಜನರು ಬಳಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಧ್ಯೇಯವಾಗಬೇಕು. ನವೀಕೃತ ಇಂಧನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಹವಾಮಾನ ಬದಲಾವಣೆ ತಡೆಗೆ ಕೇಂದ್ರ ಸರ್ಕಾರ 2008ರಲ್ಲಿ ರಾಷ್ಟ್ರೀಯ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಅದನ್ನು ಜಾರಿಗೊಳಿಸಲು ವಾರ್ಷಿಕ 11 ಲಕ್ಷ ಕೋಟಿ ರು. ಬೇಕಾಗುತ್ತದೆ. ಹೀಗಾಗಿ ಅದರ ಅನುಷ್ಠಾನ ಅಸಾಧ್ಯ. ಇಂಗಾಲವನ್ನು ಅಧಿಕ ಪ್ರಮಾಣದಲ್ಲಿ ಹೊರಸೂಸುತ್ತಿರುವ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುವುದು ಅಗತ್ಯ ಎಂದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ, ಅಕಾಡೆಮಿಯ ಸಹ ಕುಲಪತಿ ಡಾ.ಬಿ. ಸುರೇಶ್, ಕುಲಪತಿ ಡಾ.ಎಚ್‌. ಬಸವನಗೌಡ‌ಪ್ಪ, ಕುಲಸಚಿವ ಡಾ.ಬಿ. ಮಂಜುನಾಥ್‌, ಡೀನ್‌ ಡಾ.ಕೆ.ಎ. ರವೀಶ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಕಾರ್ಯಕ್ರಮ ಸಲಹೆಗಾರ್ತಿ ಡಾ. ಪ್ರೀತಿ ಸೋನಿ, ಸಂಯೋಕರಾದ ಡಾ.ಎಚ್‌.ಪಿ. ಶಿವರಾಜು, ಡಾ.ಎಚ್‌.ಚಿ. ಲಿಂಗರಾಜು ಇದ್ದರು.