ಮಲೆನಾಡಲ್ಲಿ ಗಣಿಗಾರಿಕೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಿ: ಬೆಳೆಗಾರರ ಒಕ್ಕೂಟದ ಕೆ.ಬಿ.ಕೃಷ್ಣಪ್ಪ

| Published : May 26 2024, 01:36 AM IST

ಮಲೆನಾಡಲ್ಲಿ ಗಣಿಗಾರಿಕೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಿ: ಬೆಳೆಗಾರರ ಒಕ್ಕೂಟದ ಕೆ.ಬಿ.ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು ಭಾಗದಲ್ಲಿನ ಕಾಡಾನೆ ಹಾಗೂ ಮಾನವ ಸಂಘರ್ಷ ತಡೆಯಲು ಸರ್ಕಾರ ವಿಫಲವಾಗಿದ್ದು ಇದರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ. ಕೂಡಲೇ ಗಣಿಗಾರಿಕೆ ನಿಷೇಧ ಮಾಡಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಬೆಳಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಮನವಿ ಮಾಡಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಕಾಡಾನೆ, ಮಾನವ ಸಂಘರ್ಷ ತಡೆಗೆ ಸರ್ಕಾರ ವಿಫಲ । ಕ್ರಮ ಇಲ್ಲದಿದ್ದರೆ ಹೋರಾಟ

ಕನ್ನಡಪ್ರಭ ವಾರ್ತೆ ಹಾಸನ

ಮಲೆನಾಡು ಭಾಗದಲ್ಲಿನ ಕಾಡಾನೆ ಹಾಗೂ ಮಾನವ ಸಂಘರ್ಷ ತಡೆಯಲು ಸರ್ಕಾರ ವಿಫಲವಾಗಿದ್ದು ಇದರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ. ಕೂಡಲೇ ಗಣಿಗಾರಿಕೆ ನಿಷೇಧ ಮಾಡಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಬೆಳಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಮನವಿ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಇಲ್ಲಿನ ಜನಸಾಮಾನ್ಯರ ಬದುಕು ಚಿಂತಾಜನಕವಾಗಿದೆ. ಕಾಡಾನೆಗಳ ದಾಂಧಲೆಯಿಂದ ಮಾನವ ಪ್ರಾಣಹಾನಿ ಜತೆಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವುಂಟಾಗುತ್ತಿದೆ. ಕಾಡಾನೆ ದಾಳಿಯಿಂದ ಉಂಟಾಗುತ್ತಿರುವ ಬೆಳೆನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರವೂ ಕೂಡಾ ಲಭ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸಂಪೂರ್ಣವಾಗಿ ಹಿಡಿದು ಸ್ಥಳಾಂತರಿಸಿ ಕಾಡಾನೆ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರಕಿಸಿಕೊಡಬೇಕು. ಅದೇ ರೀತಿ ರೈತರಿಗೆ ಉಪಟಳ ನೀಡುತ್ತಿರುವ ಇತರೆ ಕಾಡು ಪ್ರಾಣಿಗಳಾದ ನವಿಲು, ಚಿಂಕೆ, ಕಾಡುಹಂದಿ, ಮಂಗಗಳು, ಕಾಡೆಮ್ಮೆ ಇವುಗಳನ್ನು ಹಿಡಿದು ಸ್ಥಳಾಂತರಿಸಬೇಕಾಗಿ ಕೇಳಿಕೊಳ್ಳುತ್ತೇವೆ’ ಎಂದು ಹೇಳಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟವು ೨೦೨೨ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಕಾಡಾನೆ ಸಮಸ್ಯೆಗೆ ಪರಿಹಾರವಾಗಿ ಪ್ರತೀ ೨ ತಿಂಗಳಿಗೊಮ್ಮೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಪರಿಶೀಲನಾ ಸಭೆ ನಡೆಸಿ ಕಾಡಾನೆ ಹಾಗೂ ಕಾಡು ಪ್ರಾಣಿಗಳ ಕುರಿತಾಗಿ ಉಂಟಾದ ಆಗುಹೋಗುಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದರೂ ಸಹ ಇದು ಕಾರ್ಯಗತಗೊಂಡಿಲ್ಲ. ನ್ಯಾಯಾಲಯದ ಆದೇಶವನ್ನು ಸಹ ಪಾಲಿಸಬೇಕು ಎಂದು ಹೇಳಿದರು.

‘ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಗೆ ಒಳಪಡುವ ಹಾಸನ ಜಿಲ್ಲೆ, ಯಸಳೂರು ಹೋಬಳಿಯ ಸುತ್ತಮುತ್ತಲಿನ ಹೊಸೂರು, ಚಂಗಡಿಹಳ್ಳಿ, ಉಚ್ಚಂಗಿ ಗ್ರಾಮ ಪಂಚಾಯಿತಿಗಳಿದ್ದು, ಈ ಪ್ರದೇಶದ ಸುತ್ತ ರೈತರು ಕೃಷಿ ಚಟುವಟಿಕೆ ನಡೆಸುತ್ತಿರುತ್ತಾರೆ. ಆದರೆ ಗ್ರಾಮ ಪಂಚಾಯಿತಿಗಳಿಂದ ಯಾವುದೇ ನಿರಪೇಕ್ಷಣಾ ಪತ್ರ ಪಡೆಯದೆ ಇಂತಹ ಸ್ಥಳದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ವಿಷಾದನೀಯ. ಈ ಪ್ರದೇಶದಲ್ಲಿ ಅತಿಯಾದ ಮಳೆ-ಗಾಳಿ ಬರುವುದರಿಂದ ಕೃಷಿ ಭೂಮಿಗಳು ಮುಳುಗುವ ಸಾಧ್ಯತೆಯಿದೆ. ಸುತ್ತಲೂ ಕೃಷಿಕರು ಮತ್ತು ಕಾರ್ಮಿಕರು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ವಾಸಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆ ಭೂ ಕುಸಿತವು ಸಹ ನಡೆದಿದೆ. ಈ ಭಾಗವು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶವಾಗಿದ್ದು ಗಿರಿ ಕಂದರಗಳಿಂದ ಕೂಡಿರುತ್ತದೆ. ಇಂತಹ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುವಂತಹದ್ದು ಈ ಪ್ರದೇಶದ ಕೃಷಿಕರಿಗೆ, ಜನ ಜಾನುವಾರಿಗೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಎಲ್ಲಾ ಕಾರಣಗಳಿಂದ ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡುವುದನ್ನು ಈ ಭಾಗದ ಎಲ್ಲಾ ಬೆಳೆಗಾರರು, ಕೃಷಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಒಕ್ಕೊರಲಿನಿಂದ ವಿರೋಧಿಸಿದ್ದು ಈಗ ಹಾಲಿ ಅನುಮೋದನೆ ಮಾಡಿರುವ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧ ಮಾಡಬೇಕಾಗಿ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಕರ್ನಾಟಕ ಗ್ರೋವರ್ಸ್ ಫ್ರೆಡರೇಷನ್ ಸಂಘದ ಉಪಾಧ್ಯಕ್ಷ ಬಿ.ಎಂ.ನಾಗರಾಜ್, ಪುಟ್ಟೇಗೌಡ, ಹೋಬಳಿ ಅಧ್ಯಕ್ಷ ರಾಮಚಂದ್ರ, ವಾಸಪ್ಪ, ಬಿ.ಜೆ.ಯತೀಶ್ ಕುಮಾರ್, ಪುಟ್ಟಸ್ವಾಮಿ ಇತರರು ಇದ್ದರು.