ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರ ಸಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಡಿ.16 ಹಾಗೂ 17ರಂದು ನಡೆಯುವ ಪರೀಕ್ಷೆಗಳು ವ್ಯವಸ್ಥಿತವಾಗಿ ಜರುಗುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಬಾಲಕರ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಜರುಗುವ ಕನ್ನಡ ಭಾಷಾ ಪರೀಕ್ಷೆಗೆ 59 ಅಭ್ಯರ್ಥಿಗಳು ಹಾಗೂ ಡಿ.17 ರಂದು ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜು, ಸರ್ಕಾರಿ ಬಾಲಕಿಯರ ಕಿರಿಯ ಪದವಿಪೂರ್ವ ಕಾಲೇಜು ಹಾಗೂ ಪಿಡಿಜೆ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ 11.30ರವರೆಗೆ ಪತ್ರಿಕೆ-1 ಸಾಮಾನ್ಯ ಜ್ಞಾನ, ಹಾಗೂ ಅಪರಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಪತ್ರಿಕೆ-2 ಸಾಮಾನ್ಯ ಕನ್ನಡ, ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ಪರೀಕ್ಷೆಗೆ 227 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು. ಪರೀಕ್ಷೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಜಿಲ್ಲಾ ಖಜಾನೆಯಿಂದ ನಿಗದಿತ ಪರೀಕ್ಷಾ ಕೇಂದ್ರಗಳಿಗೆ ರವಾನೆ, ಪರೀಕ್ಷಾ ಕೇಂದ್ರದಲ್ಲಿನ ಅಗತ್ಯ ಸಿದ್ಧತೆ ಕುರಿತು ಪರಿಶೀಲನೆ ನಡೆಸಬೇಕು ಎಂದರು. ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ, ಶಿಕ್ಷಣಾಧಿಕಾರಿ ಅಶೋಕ ಲಿಮಕರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಆಶಾಪುರ, ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ಹಣಮಂತ ಕಾಲತಿಪ್ಪಿ ಸೇರಿದಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.