ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರನ್ನು ಅಪಮಾನ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಹಳೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಪ್ರತಿಭಟನಾಕಾರರು ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ವ್ಯಕ್ತಿಗಳು ಮಾಡಿರುವ ಆರೋಪಗಳ ತನಿಖೆಗೆ ಅನುಮತಿ ನೀಡಿದ ಕೂಡಲೇ ರಾಜ್ಯಪಾಲರ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು.ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿ ನಿಂದನೆ ಕೇಸುಗಳನ್ನು ದಾಖಲಿಸಬೇಕು. ಇಂತಹ ಹೇಳಿಕೆಗಳು ಸಂವಿಧಾನಕ್ಕೆ ಮತ್ತು ಪರಿಶಿಷ್ಟ ಜನಾಂಗಕ್ಕೆ ಮಾಡಿದ ಅವಮಾನ. ಈ ಕೂಡಲೇ ಸಚಿವರಾದ ಜಮೀರ್ ಅಹಮದ್ ಖಾನ್ , ಕೃಷ್ಣಭೈರೇಗೌಡ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಸೇರಿ ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿ ನಿಂದನೆ ಹಾಗೂ ಗೂಂಡಾ ಕಾಯಿದೆಯಡಿ ತಕ್ಷಣ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೊದಲಿನಿಂದಲೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡ ಕಾಂಗ್ರೆಸ್ ನಾಯಕರು ಈಗಲೂ ಅದೇ ಚಾಳಿ ಮುಂದುವರೆಸಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಗೆ ಕಾರಣರಾದ ಹಾಗೂ ಮುಡಾದ ನಿವೇಶನಗಳನ್ನು ತಮ್ಮ ಪತ್ನಿಗೆ ಅಕ್ರಮವಾಗಿ ವರ್ಗಾಯಿಸಿಕೊಳ್ಳುವ ಮೂಲಕ ನಾಡಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ನಾಯಕರು ಈಗ ಶೋಷಿತ ವರ್ಗಕ್ಕೆ ಸೇರಿದ ರಾಜ್ಯಪಾಲರ ಮೇಲೆ ಮುಗಿಬಿದ್ದಿರುವುದು ಕಾಂಗ್ರೆಸ್ ಪಕ್ಷದ ಶೋಷಿತ ಸಮುದಾಯದ ವಿರೋಧಿ ಪ್ರವೃತ್ತಿಯ ದ್ಯೋತಕವಾಗಿದೆ ಎಂದು ಟೀಕಿಸಿದರು.ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಘನತೆಯನ್ನು ಅರಿಯದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ. ಈ ಹಿಂದೆ ಯಡಿಯೂರಪ್ಪನವರ ವಿಷಯದಲ್ಲಿ ಅಂದಿನ ರಾಜ್ಯಪಾಲರು ಆದೇಶ ನೀಡಿದ್ದಾರೆ. ಅತ್ಯಂತ ವಿವೇಚನಾಯುಕ್ತವಾಗಿ ಕಾನೂನು ತಜ್ಞರೊಡನೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮಾತಿಸೂಕ್ಷ್ಮಗಳನ್ನು ಪರಾಮರ್ಶಿಸಿ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸುವುದು, ಅವರ ಪ್ರತಿಕೃತಿಯನ್ನು ಸುಡುವುದು ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ. ಇಂತಹ ಕೃತ್ಯಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಮೇಲೆ ಕ್ರಮಕೈಗೊಳ್ಳದೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರಾಮನಗರ ಗ್ರಾಮಾಂತರ ತಾಲೂಕು ಅಧ್ಯಕ್ಷ ಪಿ.ಎಸ್.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಗರ ಪ್ರಧಾನ ಕಾರ್ಯದರ್ಶಿ ಕಾಳಯ್ಯ, ಮುಖಂಡರಾದ ಎಸ್ಆರ್ ನಾಗರಾಜ್, ಪ್ರಸಾದ್ ಗೌಡ, ಪದ್ಮನಾಭ್, ರಾಜು, ರುದ್ರ ದೇವರು, ರಾಘವೇಂದ್ರ, ಪುಷ್ಪಲತಾ, ಶಿವಾನಂದ್, ಚಂದ್ರಶೇಖರ್ ರೆಡ್ಡಿ, ನಾಗೇಶ್, ಸುರೇಶ್, ಚೆನ್ನಪ್ಪ, ಕುಮಾರ್, ಆನಂದ್ ಜೆಡಿಎಸ್ ಮುಖಂಡರಾದ ಗೂಳಿಗೌಡ, ಜಯಕುಮಾರ್, ಕೆಂಪರಾಜು ಮತ್ತಿತರರು ಭಾಗವಹಿಸಿದ್ದರು.‘ಪ.ಜಾತಿ ಮತ್ತು ಪಂಗಡದ ಹೆಸರನ್ನು ಬಳಸಿಕೊಂಡು ಅಧಿಕಾರ ಬಂದ ಮೇಲೆ ಆ ಜನಾಂಗಕ್ಕೆ ಸೇರಬೇಕಾದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಕಾಂಗ್ರೆಸ್ ನಾಯಕರು, ಈಗ ನಿಯಮಾವಳಿಗಳ ಪ್ರಕಾರವೇ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದ ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲರನ್ನು ವೈಯಕ್ತಿಕವಾಗಿ ನಿಂದನೆ ಮಾಡುವಂತಹ ಕೀಳು ಮಟ್ಟಕ್ಕೆ ಇಳಿದಿರುವುದು ಅತ್ಯಂತ ದುರದೃಷ್ಟಕರ.’
- ಆನಂದ ಸ್ವಾಮಿ, ಜಿಲ್ಲಾಧ್ಯಕ್ಷರು, ಬಿಜೆಪಿ.‘ಮುಡಾ ಪ್ರಕರಣದಲ್ಲಿ ಭಾಗಿಯಾಗಿ ತಪ್ಪು ಮಾಡಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು. ಹಿಂದೆ ಯಡಿಯೂರಪ್ಪರವರ ವಿರುದ್ಧ ಆರೋಪ ಕೇಳಿ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಸರಿಯಾಗಿದೆ ಎಂದಿದ್ದರು. ಈಗ ಅಂಥದ್ಧೇ ಸಂದರ್ಭದಲ್ಲಿ ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಸಿದ್ದರಾಮಯ್ಯ ಬಂಡೆಗೆಟ್ಟಿದ್ದು, ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದಾರೆ.’
- ಪ್ರಸಾದ್ ಗೌಡ, ಮುಖಂಡರು, ಬಿಜೆಪಿ.