ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಎಲ್ಲ ಮರಳು ತಪಾಸಣಾ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಅಕ್ರಮ ಮರಳು ಸಾಗಾಣಿಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬರುತ್ತಿದ್ದು, ಈ ಅಕ್ರಮ ಮರಳು ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಸಮಿತಿ ಎಲ್ಲಾ ಸದಸ್ಯರಿಗೆ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೂಚಿಸಿದರು.ನಗರದ ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಮರಳು ಸಮಿತಿ ಸಭೆ ನಡೆಸಿ ಅವರು ಮಾತನಾಡಿ, 2023-24ನೇ ಸಾಲಿನಿಂದ ಇಲ್ಲಿಯವರೆಗೆ ಅಕ್ರಮ ಮರಳು ಸಾಗಾಣಿಕೆ ಕುರಿತು ದಾಖಲಾದ ಪ್ರಕರಣಗಳ ಕುರಿತು ಆರಕ್ಷಕ ಉಪ ಅಧೀಕ್ಷಕರು ಸುರಪುರ ಮಾಹಿತಿ ನೀಡಿ ಸುರಪುರ ತಾಲೂಕಿಗೆ ಸಂಬಂಧಿಸಿದಂತೆ ಒಟ್ಟು 36 ಹಾಗೂ ಶಹಾಪೂರ ತಾಲೂಕಿಗೆ ಸಂಬಂಧಿಸಿದಂತೆ ಒಟ್ಟು 29 ಪ್ರಕರಣಗಳು ದಾಖಲಾಗಿರುತ್ತವೆ ಮತ್ತು ಆರಕ್ಷಕ ಉಪ ಅಧೀಕ್ಷಕರು ಯಾದಗಿರಿ ರವರು ಮಾಹಿತಿ ನೀಡಿ ವಡಗೇರಾ ತಾಲೂಕಿಗೆ ಸಂಬಂಧಿಸಿದಂತೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 4 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿರುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ತಾಲೂಕು ಮೋಟಾರ್ ವಾಹನ ನಿರೀಕ್ಷಕರು ಸುರಪುರ, ಶಹಾಪುರ ಮತ್ತು ವಡಗೇರಾ ಇವರಿಗೆ ಹೆಚ್ಚುವರಿ ಮರಳು ಸಾಗಿಸುತ್ತಿರುವ ಮತ್ತು ಹೆಚ್ಚುವರಿ ಫಿಟ್ಟಿಂಗ್ ಇರುವ ವಾಹನಗಳ ಕುರಿತು ಕ್ರಮ ವಹಿಸುಂತೆ ತಿಳಿಸಿದರು.ಮರಳು ಬ್ಲಾಕ್‌ಗಳಿಗೆ ಈಗಾಗಲೇ ಸ್ಥಳ ತನಿಖೆ ಕೈಗೊಂಡಿರುವ ಕುರಿತು ಮಾಹಿತಿ ಪಡೆದು ಹಾಗೂ ತಹಸೀಲ್ದಾರರು ಸುರಪುರ, ಶಹಾಪುರ ಮತ್ತು ವಡಗೇರಾ ಮತ್ತು ಸಮಿತಿ ಎಲ್ಲಾ ಸದಸ್ಯರುಗಳಿಗೆ ಸ್ಥಳ ತನಿಖೆ ಕೈಗೊಳ್ಳುವಂತೆ ಸೂಚಿಸಿದರು.
ಹೊಸದಾಗಿ ಗುರುತಿಸಲಾದ ಮತ್ತು ಸ್ಥಾಪಿಸಬಹುದಾದ ಶಹಾಪುರ ತಾಲೂಕಿಗೆ ಸಂಬಂಧಿಸಿದಂತೆ ಮುಡಬೂಳ ಗ್ರಾಮದಲ್ಲಿ, ವಡಗೇರಾ ತಾಲೂಕಿನ ಗೊಂದೇನೂರ ಮತ್ತು ಹಾಲಗೇರಾ ಗ್ರಾಮಗಳಲ್ಲಿ ಹೊಸದಾಗಿ ಮರಳು ತಪಾಸಣಾ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಿರುವುದಾಗಿ ತಿಳಿಸಿದರು.ಮರಳು ತಪಾಸಣಾ ಕೇಂದ್ರಗಳಿಗೆ ಈಗಾಗಲೇ ಪೊಲೀಸ್ ಮತ್ತು ಕಂದಾಯ ಸಿಬ್ಬಂದಿ ನೇಮಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ಎಲ್ಲಾ ಸಿಬ್ಬಂದಿ ಹಾಜರಾಗಿ ಜಿಪಿಎಸ್ ಭಾವಚಿತ್ರವನ್ನು ಯಾದಗಿರಿ ಜಿಲ್ಲಾ ಕಂದಾಯ ಗ್ರೂಪ್‌ನಲ್ಲಿ ಹಾಕಬೇಕೆಂದರು.
ಈ ಸಂದರ್ಭದಲ್ಲಿ ಸಮಿತಿಗೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.-
ಯಾದಗಿರಿ ನಗರದ ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಮರಳು ಸಮಿತಿ ಸಭೆ ನಡೆಯಿತು.