ಡೆಂಘೀ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ: ಕೆ.ಎಂ. ಮಲ್ಲಿಕಾರ್ಜುನ

| Published : May 30 2024, 12:49 AM IST

ಡೆಂಘೀ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ: ಕೆ.ಎಂ. ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಡೆಂಘೀ ಕುರಿತು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕುರಿತು ಬ್ಯಾಡಗಿ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಸಭೆ ನಡೆಸಲಾಯಿತು.

ಬ್ಯಾಡಗಿ: ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಡೆಂಘೀ ಜ್ವರ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಹೇಳಿದರು.

ಇಲ್ಲಿಯ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಡೆಂಘೀ ಕುರಿತು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು. ತಕ್ಷಣ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅವರು ಸೂಚಿಸಿದರು.

ಮುಂಗಾರು ಮಳೆ ಆರಂಭವಾದ ಪರಿಣಾಮ ಎಲ್ಲೆಡೆ ರೋಗರುಜಿನಗಳು ಹೆಚ್ಚಾಗುತ್ತಿವೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಗ್ರಾಪಂ ಹಾಗೂ ಪುರಸಭೆ ಸಿಬ್ಬಂದಿ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳ ನಿಯಂತ್ರಿಸಬೇಕಿದೆ. ಇದಕ್ಕಾಗಿ ಈಗಾಗಲೇ ನಾವು ಎಲ್ಲ ಪಿಡಿಒಗಳಿಗೆ ಖಡಕ್ಕಾಗಿ ಸೂಚಿಸಿದ್ದೇವೆ. ಮೇ ೩೧ರಂದು ತಾಲೂಕಿನ ಎಲ್ಲ ಗ್ರಾಪಂ ಅಧಿಕಾರಿಗಳ ಸಭೆ ನಡೆಸುವ ಮೂಲಕ ಮತ್ತೊಮ್ಮೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ತಿಳಿಸಲಾಗುವುದು. ಡೆಂಘೀ ಹೆಚ್ಚಾದಲ್ಲಿ ಸ್ಥಳೀಯ ಅಧಿಕಾರಿಗಳು ಹೊಣೆ ಹೊರಬೇಕಾಗಲಿದ್ದು, ಎಲ್ಲರೂ ಇಂತಹ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಡೆಂಘೀ ತಡೆಗಟ್ಟುವಲ್ಲಿ ಕೇವಲ ಅಧಿಕಾರಿಗಳ ಪಾತ್ರವೆಂದು ಸಾರ್ವಜನಿಕರು ಕೈಕಟ್ಟಿ ಕುಳಿತುಕೊಳ್ಳಬಾರದು. ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಸಹಕರಿಸಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಅರಾಫತ್‌ ಕಾಗದಗಾರ ಮಾತನಾಡಿ, ತಾಲೂಕಿನಾದ್ಯಂತ ಕಳೆದ ಎರಡು ವರ್ಷಗಳಲ್ಲಿ ೭೦ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಆದರೆ ಯಾರೊಬ್ಬರೂ ಬಲಿಯಾಗಿಲ್ಲ. ಶಂಕಿತರೆಂದು ತಿಳಿದ ತಕ್ಷಣ ಅಂತಹ ರೋಗಿಗಳ ರಕ್ತವನ್ನು ತಪಾಸಣೆಗೆ ಕಳುಹಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ಪ್ರತಿದಿನ ೫ರಿಂದ ೧೦ ರೋಗಿಗಳ ರಕ್ತ ಮಾದರಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದೇವೆ. ಈಗಾಗಲೇ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಖುದ್ದಾಗಿ ತೆರಳಿ ಪರಿಸ್ಥಿತಿ ಪರಿಶೀಲನೆ ನಡೆಸಿರುವೆ. ಅಧಿಕಾರಿಗಳಿಗೆ ತಕ್ಷಣ ಜಾಗೃತಿಗೆ ಸೂಚನೆ ನೀಡಿರುವೆ. ಇದಕ್ಕೆ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಮನೆಯಲ್ಲಿ ನೀರನ್ನು ತುಂಬಿ ಬಾಯಿ ತೆರೆದಿಡದೆ, ಮುಚ್ಚಿಡಬೇಕು. ಅದರಲ್ಲಿ ಸೊಳ್ಳೆಗಳು ಕುಳಿತುಕೊಂಡು ಸಂತಾನ ಉತ್ಪತ್ತಿ ಮಾಡಲು ಬಿಡಬಾರದು. ಹಗಲು ಹೊತ್ತಿನಲ್ಲಿ ಸೊಳ್ಳೆಯಿಂದ ಕಚ್ಚಿಸಿಕೊಳ್ಳದೆ, ಸಾರ್ವಜನಿಕರು ಹೆಚ್ಚು ಜಾಗ್ರತರಾಗಿರಬೇಕು. ಇಂತಹ ಸೊಳ್ಳೆಗಳು ಕಚ್ಚಿದಲ್ಲಿ ಡೆಂಘೀ ಜ್ವರ ಉಲ್ಬಣಿಸಲಿದ್ದು, ಈ ಸೊಳ್ಳೆ ಕಚ್ಚಿದ ನಾಲ್ಕೈದು ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳಲಿದೆ ಎಂದರು.

ತಹಸೀಲ್ದಾರ್ ಪಟ್ಟರಾಜ, ಡೆಂಘೀ ಜ್ವರ ನಿಯಂತ್ರಣಾಧಿಕಾರಿ ಡಾ. ಸರಿತಾ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಇದ್ದರು.

ಶಂಕಿತ ಡೆಂಘೀ ಜ್ವರಕ್ಕೆ ಬಾಲಕಿ ಬಲಿ

ಬ್ಯಾಡಗಿ ತಾಲೂಕಿನಾದ್ಯಂತ ಡೆಂಘೀ ಉಲ್ಬಣಗೊಂಡಿದ್ದು, ಚಿಕ್ಕಬಾಸೂರು ಗ್ರಾಮದ ಬಾಲಕಿಯೊಬ್ಬಳು ಶಂಕಿತ ಡೆಂಘೀ ಜ್ವರಕ್ಕೆ ಬಲಿಯಾದ ಘಟನೆ ಸೋಮವಾರ ಜರುಗಿದೆ.ತಾಲೂಕಿನ ಚಿಕ್ಕಬಾಸೂರು ಗ್ರಾಮದ ಅನುರಾಧಾ ಪಂಚಾನನ (೧೫) ಮೃತಪಟ್ಟ ಬಾಲಕಿ.೪ ದಿನಗಳ ಹಿಂದೆ ಶಂಕಿತ ಡೆಂಘೀ ಜ್ವರ ಕಾಣಿಸಿಕೊಂಡಿತ್ತು. ಮೇ ೨೬ರಂದು ಬಾಲಕಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಸೋಮವಾರ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಪ್ರಕರಣ ಹೆಚ್ಚಳ: ತಾಲೂಕಿನ ಕದರಮಂಡಲಗಿ, ಶಂಕ್ರಿಪುರ, ಚಿಕ್ಕಬಾಸೂರು, ಕಾಗಿನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಕಷ್ಟು ಜನರಲ್ಲಿ ಡೆಂಘೀ ಕಾಣಿಸಿಕೊಂಡಿದೆ. ದಿನವೂ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ರೋಗದ ಭೀತಿ ಹೆಚ್ಚಾಗಿ ಇನ್ನಷ್ಟು ಆತಂಕ ಶುರುವಾಗಿದೆ. ತಾಲೂಕಿನಾದ್ಯಂತ ಜನವರಿಯಿಂದ ಮೇ ತಿಂಗಳ ವರೆಗೆ ಒಟ್ಟು ೩೧ ಜನರಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದೆ.ಚಿಕ್ಕಬಾಸೂರಿನಲ್ಲಿ ಮೃತಪಟ್ಟ ಬಾಲಕಿಗೆ ಜ್ವರ ಬಂದಿದೆ. ಆದರೆ ಡೆಂಘೀ ಎನ್ನುವುದು ಖಚಿತವಾಗಿಲ್ಲ, ಎರಡ್ಮೂರು ದಿನಗಳಲ್ಲಿ ಖಚಿತ ಮಾಹಿತಿ ಸಿಗಲಿದೆ. ತಾಲೂಕಿನಾದ್ಯಂತ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಡೆಂಘೀ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅರಾಫತ್‌ ಕಾಗದಗಾರ ಸ್ಪಷ್ಟನೆ ನೀಡಿದ್ದಾರೆ.