ಸಾರಾಂಶ
ರಾಜ್ಯ ಸರ್ಕಾರದಿಂದ ಮಂಜೂರಾದ ಹಲವು ಯೋಜನೆಗಳ ತಡೆಯಲು ಅರಣ್ಯಾಧಿಕಾರಿಗಳಿಗೆ ಪತ್ರ ಬರೆದು ಶರಾವತಿ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಗೆ ಒಳ ಪಡುವ ಗ್ರಾಮಗಳಿಗೆ ರಸ್ತೆ ಹಾಗೂ ವಿದ್ಯುತ್ ಮಾರ್ಗಕ್ಕೂ ಅಡ್ಡಿಪಡಿಸುವ ಹುನ್ನಾರ ಬಲಗೊಳ್ಳುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.
ಕಲಗಾರು ಲಕ್ಷ್ಮೀನಾರಾಯಣ ಹೆಗಡೆ
ತಾಳಗುಪ್ಪ : ತಾಳಗುಪ್ಪ ಗ್ರಾಮ ಮತ್ತು ದಟ್ಟಾರಣ್ಯದ ನಡುವೆ ತಲಾ ತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಮೂಲ ನಿವಾಸಿಗಳಿಗೆ ಇದೀಗ ಅಭದ್ರತೆಯ ಭೀತಿ ಕಾಡುತ್ತಿದೆ. ಶರಾವತಿ ಸಿಂಗಳೀಕ ಅಭಯಾರಣ್ಯ ಸುತ್ತುವರಿದ ಉರುಳುಗಲ್ಲು ಹಾಗೂ ಕಾನೂರು, ಮೇಘಾನೆ ಗ್ರಾಮಗಳಿಗೆ ರಸ್ತೆ, ವಿದ್ಯುತ್, ದೂರಸಂಪರ್ಕ ಸೇರಿದಂತೆ ಮುಂತಾದ ಮೂಲ ಸೌಲಭ್ಯ ಕಲ್ಪಿಸಲು ಕೆಲ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ.
ಮಂಜೂರಾದ ಯೋಜನೆಗಳಿಗೆ ತಡೆ:
ಗ್ರಾಮಗಳಿಗೆ ಮೂಲ ಸೌಕರ್ಯ ನಿರ್ಮಾಣ ತಡೆಯೊಡ್ಡಲು ಬೆಂಗಳೂರು ಮೂಲದ ಕೆಲ ಪರಿಸರ ಸಂಘಟನೆಗಳು ಅಡ್ಡಿ ಆಗುತ್ತಿವೆ ಎಂಬುದು ಗ್ರಾಮಸ್ಥರ ಆರೋಪ. ಈ ಗ್ರಾಮಗಳಿಗೆ ಯಾವುದೇ ಯೋಜನೆ ಮಂಜೂರಾದರೂ ಈ ಸಂಘಟನೆಗಳು ತನ್ನ ಪ್ರಭಾವ ಬಳಸಿ ತಡೆಯಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರದಿಂದ ಮಂಜೂರಾದ ಹಲವು ಯೋಜನೆಗಳ ತಡೆಯಲು ಅರಣ್ಯಾಧಿಕಾರಿಗಳಿಗೆ ಪತ್ರ ಬರೆದು ಶರಾವತಿ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಗೆ ಒಳ ಪಡುವ ಹೆಬ್ಬಾನಕೇರಿ, ಮುಂಡವಾಳ, ಸಾಲಕೊಡ್ಲ, ಚೀಕನಹಳ್ಳಿ ಗ್ರಾಮಗಳಿಗೆ ರಸ್ತೆ ಹಾಗೂ ವಿದ್ಯುತ್ ಮಾರ್ಗಕ್ಕೂ ಅಡ್ಡಿಪಡಿಸುವ ಹುನ್ನಾರ ಬಲಗೊಳ್ಳುತ್ತಿದೆ ಎಂಬುದು ಗ್ರಾಮಸ್ಥರ ಆರೋಪ. ಗ್ರಾಮಸ್ಥರು ತಮ್ಮ ಪ್ರಭಾವ ಬಳಸಿ, ಹೋರಾಟ ನಡೆಸಿ ತಮ್ಮ ಮೂಲಭೂತ ಹಕ್ಕಿಗಾಗಿ ಇನ್ನಿಲ್ಲದ ಯತ್ನ ನಡೆಸಿ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ಪರಿಸರ ಸಂಘಟನೆಗಳು ಇಲ್ಲ ಸಲ್ಲದ ಕಾನೂನುಗಳ ಮುಂದಿಟ್ಟು ಸರ್ಕಾರದ ಇಲಾಖೆಗಳ ದಾರಿ ತಪ್ಪಿಸುತ್ತಿವೆ ಎನ್ನುತ್ತಿದ್ದಾರೆ.
ಪ್ರಸ್ತಾವನೆ ಸಲ್ಲಿಸಿದರೂ ಅನುಮತಿ ಇಲ್ಲ:
ಅಭಿವೃದ್ಧಿ ವಂಚಿತ ಪ್ರದೇಶಗಳಿಗೆ ಅಂದು ವಿಧಾನ ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪನವರ ಸೂಚನೆಯಂತೆ ಕೇಂದ್ರ ಸರ್ಕಾರದ ಗ್ರಾಮೀಣ ವಿದ್ಯುದೀಕರಣ ಯೋಜನೆಯಲ್ಲಿ ಕೇಂದ್ರಿಕೃತ ವಿದ್ಯುತ್ ವಿತರಣೆ ಮತ್ತು ಉತ್ಪಾದನೆ (ಡಿಡಿಜಿ)ವ್ಯವಸ್ಥೆಯಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಿ, ವಿದ್ಯುತ್ ಉತ್ಪಾದಿಸಿ, ಏರಿಯಲ್ ಬಂಚ್ಡ್ ಕೇಬಲ್ ಮೂಲಕ ಉರಳುಗಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅರಣ್ಯ ಇಲಾಖೆಯಿಂದ ಇದಕ್ಕೆ ಅನುಮತಿ ದೊರೆಯಲಿಲ್ಲ. ಶರಾವತಿ ಅಭಯಾರಣ್ಯ ವ್ಯಾಪ್ತಿಯ ಕಂದಾಯ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಲು ಭೂಗತ ಕೇಬಲ್ ಅಳವಡಿಸಲು ಡಿಪಿಆರ್ ಸಿದ್ದಗೊಳಿಸಿ ಮನವಿ ಮಾಡಿದ್ದರೂ ತಿರಸ್ಕರಿಲಾಗಿತ್ತು.
ಅಭಿವೃದ್ಧಿ ಯೋಜನೆಗೆ ಅರಣ್ಯ ಇಲಾಖೆ ಅಡ್ಡಗಾಲು:
3 ವರ್ಷಗಳ ಹಿಂದೆಯೇ ಹೆಬ್ಬಾನಕೇರಿ ಹೊಳೆಗೆ ಸೇತುವೆ ಮಂಜೂರಾಗಿ ನಿರ್ಮಾಣ ಸಾಮಗ್ರಿಗಳು ಬಂದಿದ್ದರೂ ಕಾಮಗಾರಿ ನಿರ್ವಹಣೆಗೆ ಅವಕಾಶವಾಗುತ್ತಿಲ್ಲ. ಉರಳುಗಲ್ಲು ಕಂದಾಯ ಗ್ರಾಮದಲ್ಲಿ 94 ಸಿಯಲ್ಲಿ ಹಲವು ಅರ್ಜಿ ಸಲ್ಲಿಕೆಯಾಗಿದ್ದರೂ ಇತ್ಯರ್ಥಗೊಳಿಸಿಲ್ಲ. ಬಿಎಸ್‍ಎನ್‍ಎಲ್ ನ 4 ಜಿ ಟವರ್ ಮಂಜೂರಾಗಿದ್ದರೂ ಕಾಮಗಾರಿ ನಿರ್ವಹಣೆಗೆ ಹಾಗೂ ಜಲಜೀವನ್ ಮಿಷನ್‍ನ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದರೂ ಅವಕಾಶವಾಗುತ್ತಿಲ್ಲ. ಕಂದಾಯ ಗ್ರಾಮಕ್ಕೆ ಮಂಜೂರಾದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೂ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಇದಕ್ಕೆ ಪರಿಸರವಾದಿಗಳ ಒತ್ತಡವೇ ಕಾರಣ ಎಂದು ಅಲ್ಲಿನ ಜನ ಆರೋಪಿಸಿದ್ದಾರೆ.
2010ರ ವರೆಗೂ ಅಭಯಾರಣ್ಯ ವ್ಯಾಪ್ತಿಯ ಗ್ರಾಮಸ್ಥರ ಮೇಲೆ ಮರಗಳ್ಳತನ, ಪ್ರಾಣಿ ಬೇಟೆಯ ಒಂದೂ ಕೇಸ್ ಇರಲಿಲ್ಲ. ಅದು ಅಲ್ಲಿನ ಜನಗಳ ಅರಣ್ಯ ಕಾಳಜಿ ಆಗಿತ್ತು. ಆದರೆ ನಂತರದ ವರ್ಷಗಳಲ್ಲಿ ಕೆಲ ಅಧಿಕಾರಿಗಳು ರಸ್ತೆಗೆ ಅಡ್ಡವಾಗಿ ಬಿದ್ದ ಮರ ಸರಿಸಿದರೂ, ಪ್ರಕರಣ ದಾಖಲಿಸಿ ಗ್ರಾಮೀಣ ಜನರನ್ನು ಹೈರಾಣಾಗಿಸುತ್ತಿದ್ದಾರೆ.
-------
ಉರಳುಗಲ್ಲು ಕಾನೂರು, ಮೇಘಾನೆ ಅರಣ್ಯ ಪ್ರದೇಶವಲ್ಲ. ಇಡೀ ಬಾರಂಗಿ ಹೋಬಳಿಯಲ್ಲಿನ ಬಹುತೇಕ ಮಜಿರೇ ಗ್ರಾಮಗಳು ಕಂದಾಯ ಗ್ರಾಮಗಳಾಗಿವೆ. ಹಲವೆಡೆ ಅಭಯಾರಣ್ಯ ಘೋಷಣೆಯ ಪೂರ್ವದ ರಸ್ತೆಗಳಿವೆ. ಬಿಳಿಗಾರಿನಿಂದ ಕಾನೂರಿಗೆ ಅಭಯಾರಣ್ಯ ಘೋಷಣೆ ಪೂರ್ವದ ಸರ್ವ ಋತು ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಡಾಂಬರೀಕರಣ ಮಾಡಲಾಗಿದೆ. ವಾಸ್ತವವಾಗಿ ಉರಳುಗಲ್ಲು ಗ್ರಾಮಕ್ಕೆ ಮೊದಲಿನಿಂದಲೂ 12 ಅಡಿ ಅಗಲದ ರಸ್ತೆ ಇದೆ.
-ಉದಯಕುಮಾರ ಸಾಲ್ಕೋಡು.
--------------
ಮೆಸ್ಕಾಂ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಶೆಟ್ಟಿಹಳ್ಳಿ, ಚಿತ್ರ ಶೆಟ್ಟಿ ಕುಗ್ರಾಮಕ್ಕೆ ಅಂಡರ್‌ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ನೀಡಿದೆ. ಅದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಿಲ್ಲ. ಆದರೆ ಉರಳುಗಲ್ಲಿಗೆ ಭೂಗತ ಕೇಬಲ್ ಅಳವಡಿಸಲು ಅಡ್ಡಿ ಏಕೆ ?
-ನಾಗರಾಜ ಸಾಲ್ಕೋಡು.
---------------
ಅಭಯಾರಣ್ಯ ಘೋಷಣೆಯಾಗಿ 50 ವರ್ಷ ಗತಿಸಿದರೂ ಸರ್ಕಾರ ಅರಣ್ಯ ಹಾಗೂ ಕಂದಾಯ ಗ್ರಾಮಗಳ ಗಡಿ ಗುರುತಿಸುವ ಕಾರ್ಯವನ್ನೇ ಮಾಡದಿರುವುದರಿಂದ ಅರಣ್ಯ ಇಲಾಖೆಯ ಹಸ್ತಕ್ಷೇಪಕ್ಕೆ ಅವಕಾಶವಾಗಿದೆ. ಜಂಟಿ ಸರ್ವೆಗೆ ಆದೇಶವಾಗಿದೆ ಎಂದು ಹೇಳುತ್ತಲೇ ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದು ಹೋಗುತ್ತಿದ್ದರೂ ಯಾರೂ ಇಚ್ಛಾಶಕ್ತಿ ತೋರುತ್ತಿಲ್ಲ.
- ಬಿ.ಸಿ.ಲಕ್ಷ್ಮೀನಾರಾಯಣ ಬಣ್ಣುಮನೆ.
--------------
ಹಲವು ವರ್ಷಗಳಿಂದ ಅರಣ್ಯಾಧಿಕಾರಿಗಳ ಜೊತೆ ಎನ್‌ಜಿಒ ಗಳು ಗ್ರಾಮಕ್ಕೆ ಬಂದು ಎಷ್ಟು ವರ್ಷ ಕಾದರೂ ನಿಮಗೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಪರಿಹಾರ ತೆಗೆದುಕೊಂಡು ನೀವು ಊರು ತೊರೆಯುವುದು ಒಳ್ಳೆಯದು ಎಂದು ಉಪದೇಶ ನೀಡುತ್ತಿರುವುದು ಯಾವುದೋ ಹುನ್ನಾರದ ಭಾಗ ಎನಿಸುತ್ತದೆ.
-ಲಕ್ಷ್ಮಣ ಹೆಬ್ಬಾನಕೆರೆ.