ಮಕ್ಕಳಿಗೆ ಕನ್ನಡದ ಬಗ್ಗೆ ತಿಳಿಹೇಳಿ: ಡಾ.ಪರುಷೋತ್ತಮ

| Published : Sep 23 2024, 01:19 AM IST

ಸಾರಾಂಶ

ಕನ್ನಡ ದ್ವೇಷದ ಭಾಷೆಯಲ್ಲ ಅದು ಪ್ರೀತಿಯ ಭಾಷೆ. ಕನ್ನಡ ಕಥೆ, ಕಾದಂಬರಿ, ಕಾವ್ಯಗಳನ್ನು ಓದಿದರೆ ಮನುಷ್ಯನಲ್ಲಿ ಪ್ರೀತಿ ಬೆಳೆಯುತ್ತದೆ. ವೈದ್ಯರು ಕನ್ನಡದಲ್ಲಿ ಔಷಧಿ, ರೋಗಿ ಹೆಸರು ಬರೆಯಲು ಒತ್ತಾಯ. ಒಂದು ದಿನದ ಕಾರ್ಯಾಗಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ನಮ್ಮ ಕನ್ನಡ ನಾಡು ಧರ್ಮಾತೀತವಾಗಿದ್ದು ಬಹು ಸಂಸ್ಕೃತಿಯ ಸಮನ್ವಯದ ಬೀಡಾಗಿದೆ. ಈಗಿನ ಮಕ್ಕಳಿಗೆ ಕನ್ನಡದ ಬಗ್ಗೆ ತಿಳಿಹೇಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟರು.

ನಗರದ ಶರಣಬಸವ ವಿವಿ ಅನುಭವ ಮಂಟಪದಲ್ಲಿ ಶನಿವಾರದಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಆಯೋಜಿಸಲ್ಪಟ್ಟ ‘ಕನ್ನಡ ಸಾಮರಸ್ಯದ ನೆಲೆಗಳು ಮಾಲಿಕೆಯ ಕರ್ನಾಟಕ ಬರಹಗಾರರಿಗೆ’ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹತ್ತನೇ ಶತಮಾನದಲ್ಲಿ ಕನ್ನಡದಲ್ಲಿ ಮಹಾಭಾರತವನ್ನು ಪರಿಚಯಿಸಿದ ಶ್ರೇಯಸ್ಸು ಪಂಪನಿಗೆ ಸಲ್ಲುತ್ತದೆ. ಬೌದ್ಧರು, ಜೈನರು ಕನ್ನಡಕ್ಕೆ ಸಂಸ್ಕೃತಿಯ ಮೂಲ ಕೊಟ್ಟಿದ್ದಾರೆ. ನಮ್ಮಲ್ಲಿ ಅನೇಕ ಆಚರಣೆಗಳುಂಟು, ಒಳ್ಳೆಯ ಕಾರ್ಯ ಶುರು ಮಾಡಲು ಗಣೇಶನಿಗೆ ಪೂಜೆ ಮಾಡಿ ಆರಂಭಿಸುವ ಪದ್ಧತಿ ಇದ್ದಾಗ, ಪ್ರಕಾಶಮಾನವಾದ ಜ್ಯೋತಿಯ ಮೂಲಕ ಆರಂಭ ಮಾಡುವ ಪದ್ಧತಿ ತಂದಿದ್ದು ಬೌದ್ಧರು. ಕನ್ನಡ ದ್ವೇಷದ ಭಾಷೆಯಲ್ಲ ಅದು ಪ್ರೀತಿಯ ಭಾಷೆ. ಕನ್ನಡ ಕಥೆ, ಕಾದಂಬರಿ, ಕಾವ್ಯಗಳನ್ನು ಓದಿದರೆ ಮನುಷ್ಯನಲ್ಲಿ ಪ್ರೀತಿ ಬೆಳೆಯುತ್ತದೆ. ಯಾವಾಗಲೂ ಭಾಷೆಯ ಮೂಲಕ ಜನರಿಗೆ ಪ್ರೀತಿ ಹಂಚುತ್ತಿರುವವರು ಕನ್ನಡದವರು ಹಾಗೆಂದೇ ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದರು.

ವೈದ್ಯರಿಗೆ ಕನ್ನಡದಲ್ಲಿ ಚೀಟಿ ಬರೆಯಲು ಬಹಳ ಸಲ ಮನವಿ ಮಾಡಿದ್ದಾಗಿದೆ. ಆದರೂ ಆ ಕೆಲಸವಿನ್ನೂ ಆಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಬಿಳಿಮಲೆ, ಚೀಟಿಯಲ್ಲಿ ರೋಗಿಯ ಹೆಸರನ್ನಾದರೂ ಕನ್ನಡದಲ್ಲಿ ಬರೆಯಬೇಕೆಂದು ಮನವಿ ಮಾಡಿದರು.

ಶರಣಬಸವ ವಿವಿ ಉಪಕುಲಪತಿ ಪ್ರೊ.ಅನಿಲ ಕುಮಾರ ಬಿಡವೆ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶರಣಬಸವ ವಿಶ್ವವಿದ್ಯಾಲಯವು ಎಲ್ಲಾ ರಂಗಗಳಲ್ಲಿಯೂ ಕನ್ನಡವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ನಾಡಿಗೆ ಕವಿರಾಜ್ಯ ಮಾರ್ಗ, ವಚನ ಸಾಹಿತ್ಯ ಕೊಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗ. ನಿಜಾಮನ ಆಳ್ವಿಕೆಯಲ್ಲಿ ಲಿಂಗೈಕ್ಯ ದೊಡ್ಡಪ್ಪ ಅಪ್ಪಾಜಿಯವರು 1934ರಲ್ಲಿಯೇ ಕನ್ನಡ ಶಾಲೆ ತೆರೆದಿದ್ದರು ಅದು ಈಗ ಹೆಮ್ಮರವಾಗಿ ಬೆಳೆದಿದೆ ಎಂದರು.

ಗೋಷ್ಠಿಯಲ್ಲಿ ಮಾಲಿಕೆಯ ವಸ್ತು, ವಿನ್ಯಾಸ, ಭಾಷೆ, ಶೈಲಿ ಮತ್ತು ಆಶಯ ಕುರಿತು ಲೇಖಕರೊಂದಿಗೆ ಸಂವಾದ ನಡೆಯಿತು. ಎರಡನೇ ಗೋಷ್ಠಿಯಲ್ಲಿ ಸಾಮರಸ್ಯದ ನೆಲೆಗಳು ಮತ್ತು ಬರವಣಿಗೆಯ ಸವಾಲುಗಳು ಕುರಿತು ಲೇಖಕರೊಂದಿಗೆ ಸಂವಾದ ನಡೆಯಿತು. ಈ ಕಾರ್ಯಗಾರದಲ್ಲಿ ಕರ್ನಾಟಕದ 12 ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಲೇಖಕರು ಪಾಲ್ಗೊಂಡಿದ್ದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ತಮ್ಮ ಆಶಯ ನುಡಿಗಳನ್ನಾಡಿದರು. ಕನ್ನಡ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಕಲ್ಯಾಣರಾವ ಪಾಟೀಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರೆ, ಶೈಲಜಾ ಜಮಾದಾರ ನಿರೂಪಿಸಿ, ವಂದಿಸಿದರು. ಅಕ್ಕಲಕೋಟನ ಡಾ.ಗುರುಲಿಂಗಪ್ಪ ಧಬಾಲೆ ವೇದಿಕೆ ಮೇಲಿದ್ದರು.