ಕಬ್ಬು ಬಿಟ್ಟು ಭತ್ತ ಬೆಳೆಯಲು ಅನ್ನದಾತರ ಒಲವು

| Published : May 26 2024, 01:33 AM IST

ಕಬ್ಬು ಬಿಟ್ಟು ಭತ್ತ ಬೆಳೆಯಲು ಅನ್ನದಾತರ ಒಲವು
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಕಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ರೈತರು ಭತ್ತವನ್ನು ಒಲವು ತೋರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಭತ್ತದ ಬೆಳೆ ಕಡೆ ಒಲವು ತೋರುವ ಸಾಧ್ಯತೆಗಳಿವೆ. ಅಕ್ಕಿ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಭತ್ತ ಬೆಳೆದು ಆರ್ಥಿಕವಾಗಿ ಚೇತರಿಕೆ ಕಾಣುವ ಮನೋಧೋರಣೆ ಹೊಂದಿದ್ದಾರೆ. ಕಬ್ಬು ನೆಟ್ಟು ವರ್ಷವೆಲ್ಲಾ ಕಾಯುವ ಬದಲು ಭತ್ತ ನಾಟಿ ಮಾಡಿ 3ರಿಂದ 5ತಿಂಗಳೊಳಗೆ ಒಂದಷ್ಟು ಹಣ ಮಾಡಿಕೊಳ್ಳುವ ಧಾವಂತದಲ್ಲಿರುವಂತೆ ಕಂಡುಬರುತ್ತಿದ್ದಾರೆ.ಕಳೆದ ವರ್ಷ ಬರಗಾಲ ಎದುರಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಮಳೆ ಕೊರತೆಯಿಂದ ಬೆಳೆಗಳಿಗೆ ನೀರು ಸಿಗಲಿಲ್ಲ. ಅಣೆಕಟ್ಟೆಯಲ್ಲಿದ್ದ ನೀರೆಲ್ಲವೂ ತಮಿಳುನಾಡಿಗೆ ಹರಿಯಿತು. ಗದ್ದೆಯಲ್ಲಿ ನೆಟ್ಟ ಕಬ್ಬೆಲ್ಲವೂ ಬಿಸಿಲಿಗೆ ಒಣಗಿಹೋಯಿತು. ರೈತರಿಗೆ ಬಿಡುಗಾಸೂ ಸಿಗಲಿಲ್ಲ. ಮತ್ತೆ ಕಬ್ಬು ನೆಟ್ಟು ಹಣಕ್ಕಾಗಿ ವರ್ಷವಿಡೀ ಕಾಯುವ ಸ್ಥಿತಿಯಲ್ಲಿ ರೈತರೂ ಇಲ್ಲ. ಜೊತೆಗೆ ಕಬ್ಬು ಬೆಳೆಗೆ ಕೆಆರ್‌ಎಸ್ ಅಣೆಕಟ್ಟು ನೀರು ಸಿಗುವುದೆಂಬ ಖಚಿತತೆಯೂ ಇಲ್ಲ. ಕಳೆದ ವರ್ಷದಂತೆ ಈ ವರ್ಷವೂ ಕಾವೇರಿ ವಿವಾದ ಭುಗಿಲೆದ್ದು ಮತ್ತೆ ತಮಿಳುನಾಡಿಗೆ ನೀರು ಹರಿದರೆ ಮತ್ತೆ ಬೆಳೆ ನಷ್ಟಕ್ಕೊಳಗಾಗಬೇಕಾಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.ಬೆಳೆ ಬೆಳೆಯಲು ಸಿದ್ಧತೆ: ಪೂರ್ವ ಮುಂಗಾರು ಚುರುಕಾಗಿದ್ದು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ಭೂಮಿಯನ್ನು ಉಳುಮೆ ಮಾಡಿ ಹದ ಮಾಡಿಕೊಳ್ಳುತ್ತಿರುವ ರೈತರು ಬೆಳೆ ಬೆಳೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೀರ್ಘಾವಧಿ ಬೆಳೆಯಾದ ಕಬ್ಬಿಗೆ ಬದಲಾಗಿ ಅಲ್ಪಾವಧಿ ಬೆಳೆಯಾದ ಭತ್ತವನ್ನು ಬೆಳೆಯುವುದಕ್ಕೆ ಹೆಚ್ಚು ಆಸಕ್ತಿ ತೋರುವ ಸಾಧ್ಯತೆಗಳಿವೆ.ಪ್ರತಿ ಕ್ವಿಂಟಾಲ್ ಅಕ್ಕಿ ಬೆಲೆ ಏಕಾಏಕಿ ೧೦೦೦ ರು.ನಿಂದ ೧೨೦೦ ರು.ವರೆಗೆ ಹೆಚ್ಚಾಗಿದೆ. ಅಕ್ಕಿಗೆ ಕೊರತೆ ಎದುರಾಗಿರುವುದರಿಂದ ರೈತರು ಭತ್ತ ಬೆಳೆಯುವುದಕ್ಕೆ ಒಲವು ತೋರುತ್ತಿದ್ದಾರೆ. ಭತ್ತ ಬೆಳೆಯುವುದಕ್ಕೆ ಸ್ವಲ್ಪ ಖರ್ಚು ಹೆಚ್ಚಾಗಬಹುದು. ಆದರೂ ಭತ್ತ ಬೆಳೆದು ಬೇಗ ಒಂದಷ್ಟು ಹಣವನ್ನು ಕೈಸೇರಿಸಿಕೊಳ್ಳಬೇಕೆಂಬ ಹಂಬಲ ರೈತರದ್ದಾಗಿದೆ.ಜಿಲ್ಲೆಯಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರು ಭತ್ತದ ಬೆಳೆಯುವ ಕಡೆಗೆ ಆಕರ್ಷಿತರಾಗಬಹುದು. ಅಕ್ಕಿಗೆ ಕೊರತೆ ಇರುವುದರಿಂದ ಬೆಲೆಯೂ ಹೆಚ್ಚಿದೆ. ಭತ್ತ ಬೆಳೆದರೆ ಕಡಿಮೆ ಅವಧಿಯಲ್ಲಿ ಹಣವನ್ನು ಪಡೆಯಬಹುದು. ಭತ್ತವನ್ನು ಮುಂದಿನ ವರ್ಷಕ್ಕೂ ಸಂಗ್ರಹಿಸಿಟ್ಟುಕೊಳ್ಳಬಹುದೆಂಬ ಲೆಕ್ಕಾಚಾರವೂ ರೈತರ ಮನದಲ್ಲಿದೆ.ಭತ್ತ ಬೆಳೆಯುವುದಕ್ಕೂ ನೀರಿನ ಅವಶ್ಯಕತೆ ಇದೆ. ಮುಂಗಾರು ಆಶಾದಾಯಕವಾಗಬಹುದೆಂಬ ನಿರೀಕ್ಷೆ ಇದೆ. ಅಣೆಕಟ್ಟು ಭರ್ತಿಯಾದರೂ ಅಥವಾ ಭರ್ತಿಯಾಗದಿದ್ದರೂ ಡಿಸೆಂಬರ್‌ವರೆಗೆ ನೀರು ಸಿಗುವ ಖಚಿತತೆ ಇದೆ. ಹಾಗಾಗಿ ಈಗ ಜೋಳ, ಎಳ್ಳು, ಅಲಸಂದೆ ಸೇರಿದಂತೆ ಇತರೆ ಕಾಳು ಬೆಳೆಗಳನ್ನು ಬೆಳೆದುಕೊಳ್ಳುತ್ತಿರುವ ರೈತರು ನೀರಿನ ಲಭ್ಯತೆಯನ್ನು ನೋಡಿಕೊಂಡು ಬೆಳೆಯನ್ನು ಅಂತಿಮಗೊಳಿಸಲಿದ್ದಾರೆ.ಕಬ್ಬಿಗೆ ತೀವ್ರ ಕೊರತೆ: ಈ ಬಾರಿ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ತೀವ್ರ ಕೊರತೆ ಎದುರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಜಿಲ್ಲಾದ್ಯಂತ ಈ ಸಾಲಿನಲ್ಲಿ ಕಾರ್ಖಾನೆಗಳಿಗೆ ೮ ರಿಂದ ೧೦ ಲಕ್ಷ ಟನ್ ಕಬ್ಬು ಸಿಗುವುದೇ ಹೆಚ್ಚು. ಬೇಸಿಗೆ ಸಮಯದಲ್ಲೇ ಬಹುತೇಕ ಕಬ್ಬು ನೀರಿಲ್ಲದೆ ಸಂಪೂರ್ಣವಾಗಿ ಒಣಗಿಹೋಯಿತು. ಹಲವಾರು ರೈತರು ನೀರು ಸಿಗದಿರುವುದನ್ನು ಮನಗಂಡು ೮ ತಿಂಗಳ ಕಬ್ಬನ್ನೇ ಕಟಾವು ಮಾಡಿ ಬೇರೆ ಜಿಲ್ಲೆಯ ಕಾರ್ಖಾನೆಗೆ ಸಾಗಿಸಿದರು. ಇದರಿಂದ ಕಬ್ಬು ಯಥೇಚ್ಛವಾಗಿ ಸಿಗುವ ಯಾವ ಸಾಧ್ಯತೆಗಳೂ ಇಲ್ಲ.ಕಳೆದ ಬಾರಿ ಕಬ್ಬು ಬೆಳೆ ಬೆಳೆದವರು ಬೆಳೆ ಕಳೆದುಕೊಂಡು ಸಾಲದ ಶೂಲಕ್ಕೆ ಸಿಲುಕಿದ್ದಾರೆ. ಮನೆಯಲ್ಲಿದ್ದ ಚಿನ್ನ ಗಿರವಿ ಅಂಗಡಿಗಳನ್ನು ಸೇರಿಕೊಂಡಿವೆ. ಈಗ ತಕ್ಷಣಕ್ಕೆ ಸಾಲದ ಸುಳಿಯಿಂದ ಸ್ವಲ್ಪ ಸುಧಾರಿಸಿಕೊಳ್ಳಬೇಕಾದರೆ ಭತ್ತ ಮತ್ತು ರಾಗಿಯನ್ನು ಆಶ್ರಯಿಸಬೇಕಿದೆ. ನೀರಾವರಿ ಆಶ್ರಿತ ಪ್ರದೇಶದ ಬಹುತೇಕ ರೈತರು ಬತ್ತ ಬೆಳೆಯುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವರೆಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ.ಬಿತ್ತನೆಗೆ ಬೇಕು ಶೇ.೩೦ರಷ್ಟು ಕಬ್ಬು: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಸುಮಾರು ಶೇ.೩೦ರಷ್ಟು ಕಬ್ಬಿನ ಅಗತ್ಯವಿದೆ. ಕೊಳವೆ ಬಾವಿ ಆಶ್ರಯಿಸಿಕೊಂಡವರು ಕಬ್ಬು ಬೆಳೆಯುವ ಸಾಧ್ಯತೆಗಳೂ ಇವೆ. ಬಿತ್ತನೆಗೆ ಸಾಕಷ್ಟು ಕಬ್ಬಿನ ಅಗತ್ಯವಿರುವುದರಿಂದ ಕಾರ್ಖಾನೆಗಳಿಗೆ ಸಿಗುವ ಕಬ್ಬಿನಲ್ಲಿ ಇನ್ನಷ್ಟು ಖೋತಾ ಆಗುವ ಎಲ್ಲಾ ಲಕ್ಷಣಗಳೂ ಇವೆ ಎನ್ನುವುದು ಹಲವರು ಹೇಳುವ ಮಾತಾಗಿದೆ.ಕಬ್ಬು ನಾಟಿ ಮಾಡಿದರೆ ಒಂದು ವರ್ಷದವರೆಗೆ ಕಾಯಬೇಕು. ನೀರು ಸಿಗುವುದೋ, ಇಲ್ಲವೋ ಎಂಬ ಖಚಿತತೆಯೂ ಇಲ್ಲ. ಒಮ್ಮೆ ಕಾವೇರಿ ವಿವಾದ ಭುಗಿಲೆದ್ದು ನೀರು ಸಿಗದಿದ್ದರೆ ಮತ್ತೆ ಬೆಳೆ ನಷ್ಟ ಎದುರಿಸಬೇಕಾಗುತ್ತದೆ. ಈಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವುದಕ್ಕೆ ಬಯಸುವುದಿಲ್ಲ. ಅದರಿಂದ ಕಬ್ಬು ಬೆಳೆಯುವ ಮನಸ್ಥಿತಿಯಿಂದ ಭತ್ತ ಬೆಳೆಯುವ ಕಡೆಗೆ ವಾಲುವ ಸಾಧ್ಯತೆಗಳೇ ಹೆಚ್ಚಾಗಿವೆ ಎನ್ನಲಾಗುತ್ತಿದೆ.ಕೋಟ್‌...ಕಬ್ಬು ವರ್ಷದ ಬೆಳೆ. ನೀರು ಸಿಗುತ್ತದೆಂಬ ಭರವಸೆ ಇದ್ದರೆ ಬೆಳೆ ಬೆಳೆಯುತ್ತಾರೆ. ನೀರಿನ ಭರವಸೆ ಸಿಗದಿದ್ದರೆ ಬೆಳೆ ಬೆಳೆಯುವ ಸಾಧ್ಯತೆಗಳಿಲ್ಲ. ಕಳೆದ ವರ್ಷ ಕಬ್ಬು ಬೆಳೆದ ಬಹುತೇಕ ರೈತರು ಸಾಲ ಮಾಡಿಕೊಂಡಿದ್ದಾರೆ. ಸಾಲ ತೀರಿಸಲಾಗದೆ ಹೆಣಗಾಡುತ್ತಿದ್ದಾರೆ. ಬ್ಯಾಂಕುಗಳು ನೋಟೀಸ್ ನೀಡುತ್ತಿವೆ. ಹಾಗಾಗಿ ರೈತರು ಭತ್ತದ ಕಡೆಗೆ ಆಕರ್ಷಿತರಾಗುವ ಸಾಧ್ಯತೆಗಳಿವೆ.ನಾಗರಾಜು, ಹನಿಯಂಬಾಡಿ, ರೈತಕೋಟ್‌.....ಈ ಬಾರಿ ಎಲ್ಲಾ ಕಾರ್ಖಾನೆಗಳಿಗೂ ಕಬ್ಬಿನ ಕೊರತೆ ಬಹಳವಾಗಿ ಕಾಡಲಿದೆ. ಜಿಲ್ಲೆಯಲ್ಲಿ ೮ ರಿಂದ ೧೦ ಲಕ್ಷ ಟನ್ ಕಬ್ಬು ಇರುವುದೇ ಹೆಚ್ಚು. ಇದರಲ್ಲಿ ಶೇ.೩೦ರಷ್ಟು ಬಿತ್ತನೆಗೆ ಹೋಗಲಿದೆ. ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ನೀರು ಸಿಗುವ ಭರವಸೆ ಸಿಕ್ಕರೆ ಕಬ್ಬು ನಾಟಿ ಮಾಡಬಹುದು. ನೀರಿನ ಕೊರತೆ ಮತ್ತೆ ಎದುರಾದರೆ ಮತ್ತೆ ನಷ್ಟ ಅನುಭವಿಸಬೇಕು.ಕೊಳವೆ ಬಾವಿ ಆಶ್ರಿತದಲ್ಲಿರುವವರು ಕಬ್ಬು ಬೆಳೆಯಬಹುದು. ಶೇ.೭೦ರಷ್ಟು ರೈತರು ಈ ಬಾರಿ ಭತ್ತದ ಕಡೆ ವಾಲಬಹುದು.ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಒಕ್ಕೂಟಕೋಟ್‌.....

ಈ ಸಾಲಿನಲ್ಲಿ ಕಬ್ಬು ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಖಾನೆಗಳಿಗೆ ಸಿಗುವ ಯಾವ ಸಾಧ್ಯತೆಗಳೂ ಇಲ್ಲ. ಕಬ್ಬು ಬೆಳೆದು ಹಣಕ್ಕೆ ಕಾಯುವ ಬದಲು ಅಲ್ಪಾವಧಿ ಬೆಳೆಯಾಗಿರುವ ಭತ್ತಕ್ಕೆ ರೈತರು ಮಾರುಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಕ್ಕಿ ಬೆಲೆ ದುಬಾರಿಯಾಗಿದೆ. ಸಾಕಷ್ಟು ಬೇಡಿಕೆಯೂ ಇರುವುದರಿಂದ ಭತ್ತ ಬೆಳೆಯುವುದಕ್ಕೆ ರೈತರು ಒಲವು ತೋರಬಹುದು. ಕಬ್ಬು ಬೆಳೆಗೆ ಆಸಕ್ತಿ ಕಡಿಮೆಯಾಗುವ ಸಾಧ್ಯತೆಗಳಿವೆ.

- ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ