ಆಮ್ ಆದ್ಮಿ ಪಾರ್ಟಿ ನಡೆ ಹಳ್ಳಿಯ ಕಡೆ ಅಭಿಯಾನಕ್ಕೆ ಚಾಲನೆ

| Published : Jan 08 2024, 01:45 AM IST

ಆಮ್ ಆದ್ಮಿ ಪಾರ್ಟಿ ನಡೆ ಹಳ್ಳಿಯ ಕಡೆ ಅಭಿಯಾನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ನೇತೃತ್ವದಲ್ಲಿ ವಿವಿಧ ಗ್ರಾಮಗಳಿಗೆ ತೆರಳಿದ ಪ್ರಮುಖರು, ಗ್ರಾಮಸ್ಥರಿಂದ ಮಾಹಿತಿ ಪಡೆದರು. ಪೊನ್ನಂಪೇಟೆ ತಾಲೂಕಿನ ಬಿರುನಾಣಿ, ಪೂಕಳ, ತೆರಾಲು, ಬೀರುಗ, ನಾಲ್ಕೇರಿ, ಕಾನೂರು, ಬಾಳೆಲೆ ಮತ್ತು ನಿಟ್ಟೂರು ಗ್ರಾಮಗಳಿಗೆ ಭೇಟಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಂಗ್ರಹಿಸುವ ಉದ್ದೇಶದಿಂದ ‘ಆಮ್ ಆದ್ಮಿ ಪಾರ್ಟಿ ನಡೆ ಹಳ್ಳಿಯ ಕಡೆ’ ಎಂಬ ಗ್ರಾಮ ಸಂಪರ್ಕ ಕಾರ್ಯಕ್ರಮವನ್ನು ಆಮ್ ಆದ್ಮಿ ಪಾರ್ಟಿ ಆರಂಭಿಸಿದೆ.

ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ನೇತೃತ್ವದಲ್ಲಿ ವಿವಿಧ ಗ್ರಾಮಗಳಿಗೆ ತೆರಳಿದ ಪ್ರಮುಖರು, ಗ್ರಾಮಸ್ಥರಿಂದ ಮಾಹಿತಿ ಪಡೆದರು. ಪೊನ್ನಂಪೇಟೆ ತಾಲೂಕಿನ ಬಿರುನಾಣಿ, ಪೂಕಳ, ತೆರಾಲು, ಬೀರುಗ, ಕುಟ್ಟ, ಕೆ.ಬಾಡಗ, ನಾಲ್ಕೇರಿ, ಕಾನೂರು, ಬಾಳೆಲೆ ಮತ್ತು ನಿಟ್ಟೂರು ಗ್ರಾಮಗಳಿಗೆ ಭೇಟಿ ನೀಡಲಾಯಿತು.

ಸರ್ಕಾರಿ ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳು, ಶಿಕ್ಷಕರು, ಆಸ್ಪತ್ರೆ ಸಿಬ್ಬಂದಿಯ ಸ್ಥಿತಿಗತಿ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಭೋಜಣ್ಣ ಸೋಮಯ್ಯ, ಬಹಳಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಶಿಕ್ಷಕರ ಕೊರತೆ ಕಾಡುತ್ತಿದೆ, ಪೂಕಳ, ಬಾಡಗರಕೇರಿ, ಕಲ್ಕೂರು, ತೆರಾಲು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಶಾಲೆ ಯಾವಾಗ ಬೇಕಾದರೂ ಮುಚ್ಚುವ ಹಂತದಲ್ಲಿದೆ. ನಿಟ್ಟೂರು ಗ್ರಾಮದ ಮೂರ್ಕಲ್ಲು ಪ್ರಾಥಮಿಕ ಶಾಲೆಯಲ್ಲಿ ಇಡೀ ಶಾಲೆಗೆ ಒಬ್ಬ ವಿದ್ಯಾರ್ಥಿ, ಒಬ್ಬರು ಶಿಕ್ಷಕರು ಇದ್ದಾರೆ. ಗ್ರಾಮಕ್ಕೆ ಬಸ್‌ಗಳ ವ್ಯವಸ್ಥೆ ಇಲ್ಲದೆ ಇರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಕುಟ್ಟ, ಕಾನೂರು, ಬಿರುನಾಣಿ ಸಮುದಾಯದ ಆಸ್ಪತ್ರೆಯಲ್ಲಿ ಮಂಜೂರು ಆಗಿರುವ ಸಂಖ್ಯೆಗಿಂತ ಕಡಿಮೆ ವೈದ್ಯರು ಹಾಗೂ ನರ್ಸ್ ಗಳು ಇದ್ದಾರೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಲ್ಯಾಬ್ ಉಪಕರಣ ಇದ್ದರೆ ಟೆಕ್ನಿಷಿಯನ್ ಕೊರತೆ ಇದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಥಳೀಯ ಆಮ್ ಆದ್ಮಿ ಮುಖಂಡರು ಹೋರಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬಿರುನಾಣಿಯಲ್ಲಿ ನಕ್ಸಲ್ ಚಟುವಟಿಕೆ ತಡೆಯಲು ಪ್ರತಿ ದಿನ ಪೊಲೀಸ್‌ ಬೆಂಗಾವಲು ಪಡೆ ಇದ್ದು, ಗ್ರಾಮಸ್ಥರಲ್ಲಿ ಒಂದು ರೀತಿಯ ಆತಂಕವಿದೆ ಎಂದು ಭೋಜಣ್ಣ ಸೋಮಯ್ಯ ಅಭಿಪ್ರಾಯಪಟ್ಟರು.

ಗ್ರಾಮ ಸಂಪರ್ಕ ಕಾರ್ಯಕ್ರಮದ ಮೂಲಕ ಅಂತಿಮವಾಗಿ ಸಂಗ್ರಹಿಸಿದ ಸಮಸ್ಯೆಗಳ ವಿವರವನ್ನು ಅವಲೋಕಿಸಿ ಮುಂಬರುವ ಲೋಕಸಭೆ, ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಪಕ್ಷ ತಯಾರಿ ನಡೆಸಲಿದೆ ಎಂದರು.