ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಾಗರದಷ್ಟು ಆಳವೂ ವಿಶಾಲವೂ ಆದ ಸಂಸ್ಕೃತ ಭಾಷೆಯ ಬಿಂದುಮಾತ್ರವನ್ನು ಆಸ್ವಾದಿಸಿ ಸಂತೃಪ್ತರಾಗಿದ್ದೇವೆ. ಶ್ರೀಮಂತವಾದ ಸಂಸ್ಕೃತ ಭಾಷೆಯಲ್ಲಿ ಪ್ರಾಚೀನ ಸಂಸ್ಕೃತಿಯ ತಳಹದಿ ದೃಢವಾಗಿದೆ. ಜ್ಞಾನದ ವಿವಿಧ ಶಾಖೆಗಳ ಗ್ರಂಥಗಳು, ರಾಮಾಯಣ, ಮಹಾಭಾರತದಂತಹ ವಿಶ್ವ ಕೃತಿಗಳು ಸಂಸ್ಕೃತ ಭಾಷೆಯಲ್ಲಿ ರಚನೆಯಾಗಿರುವುದು ಹಿಂದೆ ಸಂಸ್ಕೃತವು ಜನಸಾಮಾನ್ಯರ ಆಡುಭಾಷೆಯಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿವೆ ಎಂದು ಮೂಡುಬಿದಿರೆ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕರಾದ ಗಜಾನನ ಮರಾಠೆ ಸಂಸ್ಕೃತ ಮಹತ್ವವನ್ನು ಸಾರಿದರು.ಅವರು ಎಕ್ಸಲೆಂಟ್ ಸಂಸ್ಥೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಭಾಷೆಯ ಅಕ್ಷರ ವಿನ್ಯಾಸ ವೈಜ್ಞಾನಿಕವಾಗಿದೆ. ಸಂಸ್ಕೃತ ಪರಂಪರೆಯ ಸ್ರೋತಸ್ಸಾಗಿ ಭಾರತೀಯರ ಮನಸ್ಸುಗಳಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಸಂಸ್ಕೃತ ಮಾತೆಯನ್ನು ಹೃದಯದಲ್ಲಿರಿಸಿ ಆರಾಧಿಸೋಣ. ನಾಲಿಗೆಯಲ್ಲಿ ನಲಿಯುವಂತೆ ಮಾಡೋಣ. ಇಂದು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆಯುವಂತೆ ಸಂಸ್ಕೃತವನ್ನು ಪೋಷಿಸಿ ಗತ ವೈಭವವನ್ನು ಮರುಸೃಷ್ಟಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಮಾತನಾಡಿ, ಭಾಷೆಗಳಿಗೆಲ್ಲ ತಾಯಿ ಬೇರಿನಂತಿರುವ ಸಂಸ್ಕೃತವು ಭಾರತೀಯ ಭಾಷೆಗಳನ್ನು ಪೋಷಿಸಿದ ರೀತಿ ಅನನ್ಯವಾದುದು. ಭಾರತೀಯರ ಆಧ್ಯಾತ್ಮಿಕತೆಗೆ ಬೆರಗಾದ ವಿದೇಶಿಗರು ಅದರ ಮಾಧ್ಯಮವಾದ ಸಂಸ್ಕೃತಕ್ಕೆ ಶರಣಾದರು. ಶಾಲಾ ಕಾಲೇಜುಗಳಲ್ಲಿ ಸಂಸ್ಕೃತಾಧ್ಯಯನ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರದೀಪ ಕುಮಾರ ಶೆಟ್ಟಿ ಮಾತನಾಡಿ, ಶಾಂತಿ ಪ್ರಿಯ ರಾಷ್ಟ್ರವಾಗಿ ಹೆಗ್ಗಳಿಕೆ ಪಡೆದ ಭಾರತಕ್ಕೆ ಸಂಸ್ಕೃತ ಭಾಷೆ ಮತ್ತು ಸಂಸ್ಕೃತಿಯೇ ಹೆಗ್ಗುರುತಾಗಿದೆ. ವಿಶ್ವವೇ ಒಂದು ಕುಟುಂಬ ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟ ಮಾಧ್ಯಮವೇ ಸಂಸ್ಕೃತ. ಸಂಸ್ಕೃತ ಭಾಷಿಕರ ಸಂಖ್ಯೆ ಜಾಸ್ತಿಯಾಗಿ ಸಂಸ್ಕೃತ ವ್ಯವಹಾರದ ಭಾಷೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.ಈ ಸಂದರ್ಭ ಸಂಸ್ಕೃತ ಗೀತ ಗಾಯನ, ಭರತ ನಾಟ್ಯಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕರಾದ ತೇಜಸ್ವೀ ಭಟ್ ಮತ್ತು ಪಾರ್ಶ್ವನಾಥ ಜೈನ್ ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸಂಸ್ಕೃತದಲ್ಲೇ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಾದ ಯೋಗಾನಂದ ವೇದಘೋಷವನ್ನು ಮೊಳಗಿಸಿ, ಧೃತಿ ಶೆಣೈ ಸ್ವಾಗತಿಸಿ, ಗುಂಜನ ಕಾಳೆ ಅತಿಥಿಗಳನ್ನು ಪರಿಚಯಿಸಿ, ಗಗನ ಪಾಟೀಲ್ ವಂದಿಸಿದರು. ಸುಪ್ರಜಾಕಾಮತ್ ನಿರೂಪಿಸಿದರು.