ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿ:ದೇಶದ ಮಹಾನಗರಗಳಲ್ಲಿ ಇರುವಂತೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡದಲ್ಲೂ ಸಣ್ಣ ಕೈಗಾರಿಕೆಗಳು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿವೆ. ಆದರೆ, ಉದ್ಯಮಿಗಳು, ಏಜೆಂಟರು, ಕಾರ್ಮಿಕರು, ಈ ಉದ್ಯಮ ಅವಲಂಬಿಸಿದ ಜನತೆಯ ಸಮಸ್ಯೆಗಳು ಮಾತ್ರ ಹಲವು ವರ್ಷಗಳಿಂದ ದೊಡ್ಡದಾಗಿವೆ.
ಧಾರವಾಡ ಜಿಲ್ಲೆ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿಯ ಗೋಕುಲ ಕೈಗಾರಿಕೆ ವಸಾಹತು, ತಾರಿಹಾಳ ಕೈಗಾರಿಕಾ ವಸಾಹತು, ಗಾಮನಗಟ್ಟಿ ಕೈಗಾರಿಕೆ, ರಾಯಾಪುರ ಕೈಗಾರಿಕಾ ವಸಾಹತು, ಧಾರವಾಡದ ಬೇಲೂರು ಕೈಗಾರಿಕಾ ವಸಾಹತವಿನಲ್ಲಿ ಸಾವಿರಾರು ಸಣ್ಣ ಕೈಗಾರಿಕೆಗಳು ತಲೆ ಎತ್ತಿದ್ದು, ಹಲವಾರು ಸಮಸ್ಯೆಗಳ ಮಧ್ಯೆಯೂ ಮಹತ್ತರ ಸಾಧನೆ ಮಾಡಿ ಹುಬ್ಬಳ್ಳಿ-ಧಾರವಾಡಕ್ಕೆ ಉದ್ಯಮ ನಗರ ಎಂತಲೂ ಖ್ಯಾತಿ ತಂದುಕೊಟ್ಟಿವೆ.ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿರುವ ಉದ್ದಿಮೆದಾರರೇ ಸರ್ಕಾರ ಸೇರಿದಂತೆ ಸಂಬಂಧಿಸಿದವರಿಗೆ ಅಹವಾಲು ಸಲ್ಲಿಸಲು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ರಚಿಸಿಕೊಂಡಿದ್ದಾರೆ. 840 ಸದಸ್ಯರಿದ್ದು, ಕೆಲ ಉದ್ದಿಮೆದಾರರೇ (ಪದಾಧಿಕಾರಿಗಳು) ಸಂಘದ ನೊಗ ಹೊತ್ತಿದ್ದು, ಸಂಘದ ಸಭೆಯಲ್ಲಿ ಸದಸ್ಯರು ಹೇಳಿದ ಸಮಸ್ಯೆಗಳನ್ನು ಸಂಘದ ಮೂಲಕ ಸರ್ಕಾರ, ಪಾಲಿಕೆ, ಜಿಲ್ಲಾಧಿಕಾರಿ, ಕೈಗಾರಿಕೆ ಸಚಿವರಿಗೆ ಸಚಿವರಿಗೆ ಮನವಿ ಸಲ್ಲಿಸುತ್ತಾರೆ.
ನೀರಿಲ್ಲ: ಇಲ್ಲಿಯ ಗೋಕುಲ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮೂಲಭೂತ ಅವಶ್ಯಕತೆಗಳಾದ ನೀರು, ರಸ್ತೆ, ಚರಂಡಿ ಸೇರಿ ಹಲವಾರು ಸಮಸ್ಯೆಗಳು ಉದ್ಯಮದಾರರು, ಕಾರ್ಮಿಕರನ್ನು ಕಂಗೆಡಿಸಿವೆ.ಈ ಪ್ರದೇಶದಲ್ಲಿ 2 ಸಾವಿರ ಸಣ್ಣ ಕೈಗಾರಿಕೆಗಳಿವೆ. 5 ಸಾವಿರಕ್ಕೂ ಅಧಿಕ ಕಾರ್ಮಿಕರು ಇಲ್ಲಿ ವಿವಿಧ ಕೆಲಸದಲ್ಲಿ ತೊಡಗಿದ್ದು, ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಡೀ ಪ್ರದೇಶದಲ್ಲಿ ಎರಡೇ ಎರಡು ಸಾರ್ವಜನಿಕ ಶೌಚಾಲಯಗಳಿದ್ದು, ಅವು ಕೂಡಾ ನಿರ್ವಹಣೆ ಕೊರತೆಯಿಂದ ಬಂದಾಗಿವೆ. ಹೀಗಾಗಿ ಕಾರ್ಮಿಕರು ಸೇರಿ ಇಲ್ಲಿಗೆ ಕೆಲಸದ ನಿಮಿತ್ತ ಆಗಮಿಸುವ ಜನರು ಮೂತ್ರ, ಶೌಚಕ್ಕೂ ತೀವ್ರ ಪ್ರಯಾಸ ಪಡಬೇಕಾಗಿದೆ.120 ಎಕರೆ ಪ್ರದೇಶದಲ್ಲಿ ಈ ಕೈಗಾರಿಕಾ ಪ್ರದೇಶ ಹರಡಿಕೊಂಡಿದ್ದು, ಮೊದಲ ಹಂತದ 70 ಎಕರೆ ಪ್ರದೇಶ ಕೆಎಸ್ಎಸ್‌ಐಡಿಸಿಯಿಂದ ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. ಉಳಿದ 50 ಎಕರೆ ಮಾತ್ರ ಕೆಎಸ್‌ಎಸ್‌ಐಡಿಸಿ ವ್ಯಾಪ್ತಿಯಲ್ಲಿದೆ. ಹೀಗೆ ಹಸ್ತಾಂತರವಾದ ಮೇಲೆ ಪಾಲಿಕೆ ಮೂಲಭೂತ ಸೌಕರ್ಯ ಕಲ್ಪಿಸಲು ತೀವ್ರ ನಿರ್ಲಕ್ಷ್ಯ ತೋರಿದ್ದು, ಉದ್ಯಮಿಗಳು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆ ಬಂದರೆ ಸಾಕು, ಗೋಕುಲ ರಸ್ತೆಯ ನೀರು ಕೈಗಾರಿಕೆ ಪ್ರದೇಶದಲ್ಲಿ ನುಗ್ಗುತ್ತಿದ್ದು, ನೀರು ಹೊರ ತೆಗೆಯಲು ಸಣ್ಣ ಸಣ್ಣ ಉದ್ದಿಮೆದಾರರು ಎರಡೆರಡು ದಿನ ಪ್ರಯಾಸ ಪಡಬೇಕಾಗುತ್ತದೆ.ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಹೀಗಾಗಿ ಸಣ್ಣ ಮಳೆಯಾದರೂ ನೀರು ಹರಿದು ಹೋಗದೇ ತೀವ್ರ ಯಾತನೆ ಅನುಭವಿಸುತ್ತೇವೆ ಎನ್ನುತ್ತಾರೆ ಉದ್ಯಮಿಗಳು.
ಇಡೀ ಕೈಗಾರಿಕೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕುಡಿಯಲು ನೀರೇ ಸಿಗುವುದಿಲ್ಲ. ಹೊರಗಿನಿಂದ ನೀರು ತರಿಸಿಕೊಳ್ಳುತ್ತೇವೆ. ಕನಿಷ್ಠ ಕೈ ತೊಳೆಯಲು ಕಾರ್ಮಿಕರಿಗೆ ನೀರು ಇಲ್ಲದಿದ್ದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.ಈ ಪ್ರದೇಶದಲ್ಲಿ ಸಂಜೆಯಾದರೆ ಸಾಕು ಕುಡುಕರ ಹಾವಳಿಯೂ ಹೆಚ್ಚಾಗಿದ್ದು, ಅವರನ್ನು ನಿಯಂತ್ರಿಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಅವರಿಂದ ನೊಂದವರು.
ಕಸ ಎತ್ತಲೂ ದಮ್ಮಯ್ಯ ಎನ್ನಬೇಕು: ವಾರ್ಡ್‌ನಲ್ಲಿ ಸಂಚರಿಸುವಂತೆ ಇಲ್ಲಿ ಕಸ ತುಂಬುವ ಗಾಡಿಗಳೇ ಬರುವುದಿಲ್ಲ. ಹೀಗಾಗಿ ಎಲ್ಲೆಂದರಲ್ಲೇ ಇಲ್ಲಿ ಕಸದ ರಾಶಿ ಕಂಡು ಬರುತ್ತದೆ. ರಸ್ತೆ ಪಕ್ಕ, ಖಾಲಿ ಜಾಗದಲ್ಲಿನ ಕಸ ಎತ್ತಲೂ ಪಾಲಿಕೆಯವರಿಗೆ ಹಲವಾರು ಬಾರಿ ಕೋರಿದರೂ ಬೇಗ ಗಾಡಿಯನ್ನೇ ಕಳಿಸುವುದಿಲ್ಲ. ಒಂದೊಮ್ಮೆ ಕಾರ್ಮಿಕರು ಕಸ ತುಂಬಲು ಬಂದರೂ ಅವರು ಪೂರ್ತಿ ತುಂಬುವವರೆಗೂ ಅಲ್ಲೊಬ್ಬರೂ ಉಸ್ತುವಾರಿ ನೋಡಿಕೊಳ್ಳಬೇಕು ಹಾಗ ಮಾತ್ರ ಪೂರ್ತಿಯಾಗಿ ಕಸ ತುಂಬುತ್ತಾರೆ. ಇಲ್ಲಾಂದರೆ ಅರ್ಧಂಬರ್ಧ ತುಂಬಿ ಹೋಗಿಬಿಡುತ್ತಾರೆ.ಎಲ್ಲೆಲ್ಲಿ ಸಣ್ಣ ಕೈಗಾರಿಕೆ ಸಂಘಗಳು:
ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಧಾರವಾಡದ ಬೇಲೂರು, ಹುಬ್ಬಳ್ಳಿಯ ತಾರಿಹಾಳ, ಗಾಮನಗಟ್ಟಿ ಪ್ರದೇಶದಲ್ಲೂ ಸಹ ಸಣ್ಣ ಕೈಗಾರಿಕೆಗಳ ಸಂಘಗಳು ಇದ್ದು, ಅವು ಪ್ರತ್ಯೇಕ ಸದಸ್ಯರನ್ನು ಹೊಂದಿವೆ. ಸಮಸ್ಯೆಗಳನ್ನು ನಿವಾರಿಸಲು ಒಟ್ಟಾಗಿ ಹೋರಾಟ ಮಾಡುತ್ತಿವೆ.ಕೈಗಾರಿಕೆಗಳಿಗೆ ನೀರು, ಶೌಚಾಲಯ ವ್ಯವಸ್ಥೆ, ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಸರಿಪಡಿಸಿ ಮಳೆ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸುವಂತೆ ಹಲವಾರು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಇಲ್ಲಿಂದಲೂ ಕಸ ಎತ್ತಲೂ ಸಹ ಪಾಲಿಕೆ ಕಾರ್ಮಿಕರಿಗೆ ದುಂಬಾಲು ಬೀಳಬೇಕಾಗಿದೆ ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಜಂಟಿ ಕಾರ್ಯದರ್ಶಿ ಭರತ ಕುಲಕರ್ಣಿ ಹೇಳಿದರು.