ಸಾರಾಂಶ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯನ ಬೆಂಬಲಿಗರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕಾಂಗ್ರೆಸ್ ದೇಶ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗಿದ ನೂರಾರು ಕಾರ್ಯಕರ್ತರು, ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯನ ಬೆಂಬಲಿಗರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕಾಂಗ್ರೆಸ್ ದೇಶ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗಿದ ನೂರಾರು ಕಾರ್ಯಕರ್ತರು, ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಬಂದಿದ್ದು, ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತಳ್ಳಾಟ ನಡೆದು ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಬಳಿಕ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಪಾಕ್ ಹೆಸರು ಸಹ ಹೇಳಲು ನಮಗೆ ಅಸಹ್ಯವಾಗುತ್ತದೆ. ಅದರಲ್ಲಿ ವಿಧಾನಸೌಧದದಲ್ಲಿ ಪಾಕ್ ಜಿಂದಾಬಾದ್ ಎಂದು ಹೇಳಿರುವುದು ಅತ್ಯಂತ ಖಂಡನಾರ್ಹ, ಕಾಂಗ್ರೆಸ್ ಪಕ್ಷ ತೀರಾ ಲಜ್ಜಗೆಟ್ಟಿದೆ, ದೇಶಭಕ್ತಿ ಸಹ ಆ ಪಕ್ಷಕ್ಕೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭರತ ಭೂಮಿ ಪರಮ ಪವಿತ್ರ, ಈ ಭೂಮಿಯಲ್ಲಿದ್ದು ಪಾಕ್ ಜಿಂದಾಬಾದ್ ಎಂದು ಹೇಳಿದವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿದ ಬುದ್ಧಿಗೇಡಿ, ಲಜ್ಜೆಗೆಟ್ಟ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಪಾಕ್ ಎನ್ನುವ ಹೆಸರು ಅವರ ನಾಲಿಗೆಯಲ್ಲಿ ಅಲ್ಲ ಮನಸ್ಸಿನಲ್ಲಿಯೂ ಬರದಂತೆ ಕಠಿಣ ಶಿಕ್ಷೆ ನೀಡಬೇಕು. ಕಾಂಗ್ರೆಸ್ ನಾಯಕರ ವರ್ತನೆ ಮಿತಿಮೀರಿದ್ದು, ರಾಷ್ಟ್ರ ಪುರುಷರಾದ ಅಬ್ದುಲ್ ಕಲಾಂ, ಅಷ್ಪಾಕ್ ಉಲ್ಲಾಖಾನ್ ಇಂಥ ನಾಯಕರನ್ನು ಪ್ರೇರಣೆಯಾಗಿ ಇಟ್ಟುಕೊಳ್ಳದೆ ಮತಾಂಧ ರಾಷ್ಟ್ರ ವಿರೋಧಿ ಸಂಘಟನೆಗಳ ಜೊತೆಗೂಡಿ ದೇಶವಿರೋಧಿ ಹೇಳಿಕೆ ನೀಡುವುದನ್ನ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನ ನೀಡಿದರು.ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿರುವ ವ್ಯಕ್ತಿಯ ಪೂರ್ವಾಪರ ತನಿಖೆಯಾಗಬೇಕು. ಆ ವ್ಯಕ್ತಿ ವಿಧಾನಸೌಧ ಪ್ರವೇಶಿಸಲು ಪಾಸ್ ನೀಡಿದವರು ಯಾರು ಎಂಬಿತ್ಯಾದಿ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಶಂಕರ ಹೂಗಾರ, ಮಂಜುನಾಥ ಮಿಸೆ, ಬಸವರಾಜ ಬಿರಾದಾರ, ಪ್ರೇಮಾನಂದ ಬಿರಾದಾರ, ಕಿರಣ್ ಪಾಟೀಲ್, ರಾಜೇಶ ತವಸೆ, ಮಹೇಶ್ ಒಡೆಯರ್, ಚಿದಾನಂದ ಚಲವಾದಿ, ಶ್ರೀಕಾಂತ ಶಿಂಧೆ, ವಿಜಯ್ ಜೋಶಿ, ಚಂದ್ರು ಚೌದ್ರಿ, ಪಾಪುಸಿಂಗ ರಜಪೂತ, ಸಂತೋಷ ಕುಬದಡ್ಡಿ, ಆನಂದ್ ಮುಚ್ಚಂಡಿ, ರಾಮಚಂದ್ರ ಚವ್ಹಾಣ, ಪ್ರಶಾಂತ ಅಗಸರ, ಪರಶುರಾಮ್, ನಾಗೇಶ್, ರವಿ ಚವ್ಹಾಣ, ಪ್ರೇಮ್ ಬಿರಾದಾರ್ದ, ಶರಥ ಕಾಂಬಳೆ, ವಿಠ್ಠಲ ನಡುವಿನಕೆರಿ, ಜಗದೀಶ್ ಮುಚ್ಚಂಡಿ, ವಿನಾಯಕ ಗೌಳಿ, ಸತಾರ್ ಕೋಲಾರ್, ಸಚಿನ್ ಕುಮ್ಸಿ, ವಿನೋದ ಮಣೂರ, ವಿನೋದ ತೆಲಸಂಗ, ಸಚಿನ ಬಂಬಳೆ, ಸಂತೋಷ ಕುರದಡ್ಡಿ ಸೇರಿ ಹಲವರು ಭಾಗವಹಿಸಿದ್ದರು.