ಸಾರಾಂಶ
ಮಂಗಳೂರು: ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಗೌರವ ಸಂಪಾದಕತ್ವದ ‘ಮೂಲ್ಕಿ ಸೀಮೆ ಅರಸು ಕಂಬುಲ’ ಪುಸ್ತಕ ಬಿಡುಗಡೆ ಸಮಾರಂಭ ನಗರದ ಪ್ರೆಸ್ ಕ್ಲಬ್‌ನಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಲ್ಕಿ ಸೀಮೆ ಅರಸ ಎಂ. ದುಗ್ಗಣ್ಣ ಸಾವಂತ, ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸ ಇರುವ ಮೂಲ್ಕಿ ಸೀಮೆ ಅರಸು ಕಂಬಳವನ್ನು ಸಂಪ್ರದಾಯ ಬಿಡದೆ ಆಧುನಿಕತೆಯೊಂದಿಗೆ ನಡೆಸಲಾಗುತ್ತಿದೆ. ಈ ಕಂಬಳದ ಕುರಿತು ಪುಸ್ತಕ ಹೊರತಂದಿರುವುದು ಶ್ಲಾಘನೀಯ ಎಂದು ಹೇಳಿದರು.ಹಿಂದಿನ ಕಾಲದಲ್ಲಿ ಅರಮನೆ, ಬೀಡು ಇದ್ದ ಎಲ್ಲ ಕಡೆ ಕಂಬಳ ನಡೆಯುತ್ತಿತ್ತು. 1971ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಗೊಳ್ಳುವವರೆಗೆ ಇಲ್ಲಿ ಕಂಬಳಗಳು ನಡೆಯುತ್ತಿದ್ದವು. ಪ್ರಸ್ತುತ ಅಳದಂಗಡಿ, ಮೂಲ್ಕಿ ಅರಮನೆಯಲ್ಲಿ ಕಂಬಳ ನಡೆಯುತ್ತಿದೆ ಎಂದರು.ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕಾರ್ನಾಡು ಶ್ರೀ ಹರಿಹರ ದೇವಸ್ಥಾನದ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ, ಅರಸು ಕಂಬಳವು ಹಿಂದೆ ನಡೆಯುತ್ತಿದ್ದಂತೆ ವಿಜೃಂಭಣೆಯಿಂದ ನಡೆಯಬೇಕು. ಈ ಬಗ್ಗೆ ಯಾವುದೇ ಗೊಂದಲ ಇರಬಾರದು ಎಂದರು.ಪುಸ್ತಕದ ಬಗ್ಗೆ ಮಾತನಾಡಿದ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮೂಲ್ಕಿ ಸೀಮೆ ಅರಸು ಕಂಬುಲ ಪುಸ್ತಕದ ಮೂಲಕ ಕಂಬಳ ಆಚರಣೆಗಳಿಗೆ ಸೂಕ್ತ ವ್ಯಾಖ್ಯಾನ ಒದಗಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯವಾಗುವ ಅರ್ಹತೆ ಈ ಪುಸ್ತಕಕ್ಕಿದೆ ಎಂದರು.ಪುಸ್ತಕದ ಗೌರವ ಸಂಪಾದಕ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಸ್ವಾಗತಿಸಿದರು. ಪ್ರಧಾನ ಸಂಪಾದಕಿ ಡಾ. ಸಾಯಿಗೀತಾ ಹೆಗ್ಡೆ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))