ಲೋಕಸಭೆ ಚುನಾವಣೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಸಂಸತ್ತಿಗೆ ಆಯ್ಕೆಯಾಗಿ ತೆರವಾಗಿರುವ ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಸವಾಲು ಬಿಜೆಪಿಗೆ ಎದುರಾಗಿದೆ.

ಶೇಷಮೂರ್ತಿ ಅವಧಾನಿ

 ಕಲಬುರಗಿ : ಲೋಕಸಭೆ ಚುನಾವಣೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಸಂಸತ್ತಿಗೆ ಆಯ್ಕೆಯಾಗಿ ತೆರವಾಗಿರುವ ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಸವಾಲು ಬಿಜೆಪಿಗೆ ಎದುರಾಗಿದೆ.

2023ರ ಅಸೆಂಬ್ಲಿ ಚುನವಣೆ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಬರೋಬ್ಬರಿ 6 ತಿಂಗಳು ತೆಗೆದುಕೊಂಡಿತ್ತು. ಈಗಲೂ ಲೋಕಸಭೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಸ್ಥಾನಗಳನ್ನು ಗೆದ್ದಿಲ್ಲವಾದರೂ ಪಕ್ಷದ ಬಲ ವರ್ಧನೆ, ಜಾತಿ- ಮತಗಳ ಗಣಿತ, ಪ್ರದೇಶವಾರು ಲೆಕ್ಕಾಚಾರದಡಿಯಲ್ಲಿ ಈ ಬಗ್ಗೆ ಬಿಜೆಪಿಯಲ್ಲಿ ಅದಾಗಲೇ ಚರ್ಚೆಗಳಂತೂ ಶುರುವಾಗಿವೆ.

ಅತ್ತ ಕಮಲ ಪಾಳಯದಲ್ಲಿ ಮೇಲ್ಮನೆ ವಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ಶುರುವಾಗಿರುವಾಗಲೇ, ಇತ್ತ ಬಿಜೆಪಿ ಅಧಿಕಾರಾವಧಿಯಲ್ಲಿ ತೀವ್ರ ಅವಗಣನೆಗೆ ಒಳಗಾಗಿರುವ ಕಲ್ಯಾಣ ಕರ್ನಾಕದವರು ಪ್ರತಿಪಕ್ಷ ನಾಯಕ ಸ್ಥಾನಮಾನಕ್ಕಾಗಿ ಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲಾ ಕಲ್ಯಾಣವನ್ನ ಅಲಕ್ಷಿಸಲಾಗಿರೋದು ಕಟು ವಾಸ್ತವ, ಸಚಿವ ಸ್ಥಾನ, ಪಕ್ಷ , ಸಂಘಟನೆಯಲ್ಲಿ ಉನ್ನತ ಹುದ್ದೆಗಳನ್ನು ನೀಡದೆ ಇಲ್ಲಿನ ಪ್ರಬಲ ವೀರಶೈವ ಲಿಂಗಾಯಿತ ಸಮೂಹವನ್ನೇ ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಇಲ್ಲಿ ಹೆಚ್ಚುತ್ತಿದೆ.

ಇವೆಲ್ಲದರ ಸಂಚಿತ ಫಲವಾಗಿ ಕಳೆದ ಅಸೆಂಬ್ಲಿ, ಈಚೆಗಿನ ಪಾರ್ಲಿಮೆಂಟ್‌, ಈಶಾನ್ಯ ಪದವೀಧರ ಕ್ಷೇತ್ರ ಮೇಲ್ಮನೆ ಚುನಾವಣೆಗಳಲ್ಲೆಲ್ಲಾ ಕಲ್ಯಾಣ ಭಾಗದದ 7 ಜಿಲ್ಲೆಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ, ಅರಳಿದ್ದ ತಾವರೆ ಇಲ್ಲಿ ಮುದುಡಿ ಹೋಗಿದೆ. ಹಿಂದುಳಿದ ನೆಲದಲ್ಲಿ ಬಿಜೆಪಿ ಪಕ್ಷಕ್ಕಾಗಿರುವ ಈ ಹಿನ್ನೆಡೆಯಿಂದ ಮೇಲೆದ್ದು ಬರಬೇಕಾದಲ್ಲಿ ಮೇಲ್ಮನೆ ಪ್ರತಿಪಕ್ಷ ನಾಯಕನ ಸ್ಥಾನಮಾನ ಕಲ್ಯಾಣದವರಗೆ ನೀಡಲೇಬೇಕೆಂಬ ಕೂಗು ಪ್ರತಿಧ್ವನಿಸುತ್ತಿದೆ.

ಪಕ್ಷಕ್ಕಾಗಿರುವ ಡ್ಯಾಮೇಜ್‌ ಕಂಟ್ರೋಲ್‌ ಮಾಡಿಕೊಂಡು ಪಕ್ಷದ ವರ್ಚಸ್ಸು ಇಲ್ಲಿ ಬೆಳೆಸಬೇಕಾದಲ್ಲಿ ಬಿಜೆಪಿಗೆ ಕಲ್ಯಾಣ ಭಾಗದ ವೀರಶೈವ- ಲಿಂಗಾಯಿತ ನಾಯಕನಿಗೆ ಪ್ರತಿಪಕ್ಷ ನಾಯಕನ ಜವಾಬ್ದಾರಿ ನೀಡುವ ಅನಿವಾರ್ಯತೆ ಎದುರಾಗಿದ ಎಂದೇ ಹೇಳಲಾಗುತ್ತಿದೆ. ಹೀಗಾದಾಗ ಮಾತ್ರ ಖರ್ಗೆ ತವರೂರು ನೆಲ ಕಲಬುರಗಿ ಸೇರಿದಂತೆ ಕಲ್ಯಾಣದಲ್ಲಿ ಕಾಂಗ್ರೆಸ್‌ ಕಟ್ಟಿಹಾಕಬಹದೆಂಬು ಚರ್ಚೆಗಳು ಪಕ್ಷದಲ್ಲಿ ಶುರುವಾಗಿವೆ.

ನಾಲ್ಕನೆ ಬಾರಿ ಎಂಎಲ್‌ಸಿ ಶಶಿಲ್‌ ನಮೋಶಿ ವರಿಷ್ಠರ ಹಾಟ್‌ ಫೆವರಿಟ್‌?:

ಮೇಲ್ಮನೆಯಲ್ಲಿ ವಿಷಯಾಧಾರಿತವಾಗಿ ಸದಾಕಾಲ ಗುಡುಗುತ್ತ ಸರಕಾರವನ್ನು ಕಟ್ಟಿ ಹಾಕುವಂತಹ ಗಟ್ಟಿ ಧ್ವನಿಯ ಜಗಜಟ್ಟಿಗನನ್ನು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಕೂರಿಸುವ ಯೋಚನೆ ಬಿಜೆಪಿ ವರಿಷ್ಠರದ್ದಾಗಿದೆ ಎಂಬುದು ಪಕ್ಷದ ಮೂಲಗಳು ಹೇಳುತ್ತಿದ್ದು ಅಂತಹ ಸಮರ್ಥರ ಶೋಧ ಅದಾಗಲೇ ಶುರುವಾಗಿದೆಯಂತೆ. ಇದರ ಜೊತೆಗೇ ಜಾತಿ, ಸಮುದಾಯ ಆದ್ಯತೆತೆಗಳೆಲ್ಲವನ್ನು ಜೋಡಿಸಿ, ಹೊಸ ಸಮೀಕರಣ ರಚಿಸಿ, ಎಲ್ಲದರಲ್ಲೂ ಹೊಂದಿಕೆಯಾಗುವಂತಹ ನಾಯಕ ಮೇಲ್ಮನೆಯಲ್ಲಿರಲಿ ಎಂದು ಬಿಜಪಿ ವರಿಷ್ಠರು ಹುಡುಕುತ್ತಿದ್ದಾರೆ.

ಕೋಟಾ ಪೂಜಾರಿಯವರ ಉತ್ತರಾಧಿಕಾರಿ ಯಾರೆಂದು ಕಮಲ ಪಾಳಯದಲ್ಲಿ ಅದಾಗಲೇ ಸಾಗಿರುವ ತಲಾಶೆಯಲ್ಲಿ ಬಿಸಿಲೂರಿನ ಶಿಕ್ಷಕ ಮತಕ್ಷೇತ್ರದಿಂದ 4 ನೇ ಬಾರಿ ಎಂಎಲ್ಸಿಯಾಗಿ ಮೇಲ್ಮನೆಯಲ್ಲಿರುವ ಹಿರಿಯ ನಾಯಕ ಶಶಿಲ್‌ ನಮೋಶಿ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.

ಜಾತಿ, ಜನ ಸಮುದಾಯ, ಪ್ರದೇಶ, ಹಿರಿತನದಂತಹ ಹಲವು ಮಾನದಂಡಗಳೊಂದಿಗಿನ ಹುಡುಕಾಟದಲ್ಲಿ ಶಶಿಲ್‌ ನಮೋಶಿ ವರಿಷ್ಠರ ಹಾಟ್‌ ಫೆವರಿಟ್‌ ಆಗಿ ಹೊರಹೊಮ್ಮುವ ಎಲ್ಲಾ ಅರ್ಹತೆ ಹೊಂದಿದ್ದಾರೆಂಬ ಮಾತುಗಳಿವೆ.

4 ಬಾರಿ ಎಂಎಲ್‌ಸಿ, ಪ್ರಸ್ತುತ ಹೈಕಶಿ ಸಂಸ್ಥೆಯ ಅಧ್ಯಕ್ಷರಾಗಿರುವ ನಮೋಶಿ ಪ್ರಬಲ ವೀರಶೈವ ಲಿಂಗಾಯಿತ ಸಮುದಾಯದ ನಾಯಕ, ಹಿಂದಿನ ಬಿಜೆಪಿ ಸರಕಾರದಲ್ಲಿ 2 ಬಾರಿ ಸಚಿವ ಸ್ಥಾನದ ಪೈಪೋಟಿಯಲ್ಲಿದ್ದರೂ ಅದು ಅವರ ಕೈಗೆಟುಕಿರಲಿಲ್ಲ. ನಮೋಶಿಯಂತಹ ಕ್ರಿಯಾಶೀಲ ಮುಖಂಡಗೆ ಪ್ರತಿಪಕ್ಷ ನಾಯಕ ಪಟ್ಟ ದಕ್ಕಿದಾಗ ಮಾತ್ರ ಕಲ್ಯಾಣ ನಾಡಲ್ಲಿ ನಾನಾ ಕಾರಣಗಳಿಂದ ಪಕ್ಷಕ್ಕಾಗಿರುವ ಹಾನಿ ನಿಯಂತ್ರಿಸಲು ಸಾಧ್ಯವೆಂಬ ಚರ್ಚೆಗಳೂ ಸಾಗಿವೆ.

ತಮ್ಮ ಸುದೀರ್ಘ ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ಕಲ್ಯಾಣದ ಜ್ವಲಂತ ಸಮಸ್ಯೆಗಳನ್ನು ಹಿಡಿದುಕೊಂಡು ಸದನದ ಒಳಗೆ - ಹೊರಗೆ ಹೋರಾಡುವ ನಮೋಶಿ ಜನಪರ ನಿಲುವಿನ ಮುಖಂಡ ಎಂಬುದರಲ್ಲಿ ದೂಸ್ರಾ ಮಾತಿಲ್ಲ. ಈ ಬಾರಿಯಾದರೂ ಕಲ್ಯಾಣದವರಿಗೆ ಸೂಕ್ತ ಸ್ಥಾನಮಾನ ಕೊಟ್ಟು ಬಿಜೆಪಿ ಈ ಭಾಗದಲ್ಲಿ ಕಳೆದುಕೊಂಡಿರುವ ಪಕ್ಷದ ಹಿಡಿತ ಪುನಃ ಬಿಗಿಗೊಳಿಸಿಕೊಂಡೀತೆ? ಎಂಬುದನ್ನ ಕಾದು ನೋಡಬೇಕಿದೆ.

ಎನ್‌.ರವಿ- ಸಿಟಿ ರವಿ ಹೆಸರುಗಳೂ ಚರ್ಚೆಯಲ್ಲಿ:

2023ರ ಅಸೆಂಬ್ಲಿಯಲ್ಲಿ ಸೋತು, ಈಚೆಗಷ್ಟೇ ಮೇಲ್ಮನೆ ಪ್ರವೇಶ ಮಾಡಿರುವ ಸಿಟಿ ರವಿ ಹೆಸರು ಈ ಸ್ಥಾನಕ್ಕೆ ಕೇಳಿ ಬರುತ್ತಿದೆ. ಈಗಾಗಲೇ ಒಕ್ಕಲಿಗ ಸಮುದಾಯದ ಆರ್‌ ಅಶೋಕ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಕರು, ರವಿ ಕೂಡಾ ಅದೇ ಸಮುದಾಯಕ್ಕೆ ಸೇರಿದವರು. ಒಂದೇ ಸಮುದಾಯದ ಇಬ್ಬರನ್ನು ವರಿಷ್ಠರು ಉನ್ನತ ಹುದ್ದೆಗಳಲ್ಲಿ ಕುಳ್ಳಿರಿಸೋದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಇನ್ನು ಓಬಿಸಿಗೆ ಸಮುದಾಯದ, 2 ನೇ ಬಾರಿ ಎಂಎಲ್‌ಸಿ ಎನ್‌ ರವಿಕುಮಾರ್‌ ಹೆಸರೂ ಮಂಚೂಣಿಯಲ್ಲಿದೆ. ಗಟ್ಟಿ ಧ್ವನಿಯ ರವಿ ಕುಮಾರ್‌ ಸಂಘ ಪರಿವಾರದಲ್ಲೂ ನಂಟು ಹೊಂದಿರೋರು. ತಮ್ಮ ಮಾತಿನ ವರಸೆಯಿಂದಲೇ ಗಮನ ಸೆಳೆಯುವ ಇವರು ಬಿಎಸ್ವೈ, ಬಿವೈ ವಿಜಯೇಂದ್ರ ಸೇರಿದಂತೆ ಪಕ್ಷದ ವರಿಷ್ಠರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಈಗಾಗಲೇ ಪರಿಷತ್‌ನಲ್ಲಿ ಬಿಜೆಪಿ ಚೀಫ್‌ ವಿಪ್‌ ಹುದ್ದೆಯಲ್ಲಿ ರವಿಕುಮಾರ್‌ ಇರೋದರಿಂದ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಇವರ ಆಯ್ಕೆಯನ್ನ ಅಷ್ಟು ಸುಲಭದಲ್ಲಿ ವರಿಷ್ಠರು ಒಪ್ಪುವರೆ? ಎಂಬುವುದೇ ಯಕ್ಷ ಪ್ರಶ್ನೆ.

ಕಲ್ಯಾಣದವರಿಗೆ ಬಿಜೆಪಿ ಮೇಲ್ಮನೆಯಲ್ಲಿ ವಿಪಕ್ಷ ನಾಯಕ ಸ್ಥಾನ ಒಮ್ಮೆಯೂ ನೀಡಿಲ್ಲ:

ಕಲ್ಯಾಣದ ಈಶಾನ್ಯ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರಗಳು ಸದಾಕಾಲ ಬಿಜೆಪಿ ಬೆಂಬಲಿಸುತ್ತಿದ್ದರೂ ಪ್ರತಿಪಕ್ಷ ನಾಯಕ ಸ್ಥಾನಮಾನ ಗಗನ ಕುಸುಮ. ಬಿಜೆಪಿಯ ಒಳ ರಾಜಕೀಯವೇ ಇಲ್ಲಿ ಪಕ್ಷದ ಹಿನ್ನೆಡೆ ಕಾರಣ. ಪಕ್ಷದ ಸರಕಾರ ಇದ್ದಾಗಲೂ ಸಚಿವ ಸ್ಥಾನ ಸೇರಿದಂತೆ ಹಲವು ಹುದ್ದೆಗಳಿಗೆ ಕಲ್ಯಾಣದವರಿಗೆ ಕ್ಯಾರೆ ಕೂಡಾ ಎನ್ನದೆ ಬಿಜೆಪಿ ಎಡವಿರೋದು ಸ್ಪಷ್ಟ. ಇದೀಗ ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಬಿಜೆಪಿಗೆ ಇದು ಸಕಾಲ. ಕಲಬುರಗಿ ವಿಭಾಗದ ಎಂಎಲ್‌ಸಿಗೆ ಮೇಲ್ಮನೆಯ ವಿಪಕ್ಷ ನಾಯಕನ ಸ್ಥಾನಮಾನ ಕೊಟ್ಟು ಪಕ್ಷಕ್ಕಾಗಿರುವ ಡ್ಯಾಮೇಜ್‌ ಕಂಟ್ರೋಲ್‌ ಕಸರತ್ತು ಕಮಲ ಪಡೆ ಆರಂಭಿಸುವುದೆ?

ಕರಾವಳಿ, ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದವರಿಗೆ ಮೇಲ್ಮನೆ ವಿಪಕ್ಷ ನಾಯಕ ಹುದ್ದೆ ಒಲಿದಿವೆ. ಕಲ್ಯಾಣ ಕರ್ನಾಟಕಕ್ಕೆ ಈ ಸದವಕಾಶ ಇದೆಯಾದರೂ ಪಕ್ಷದ ರಾಜಕೀಯ ಒಳ ಸುಳಿಯಲ್ಲಿ ಈ ಬೇಡಿಕೆ ಅದ್ಯಾವ ತಿರುವು ಪಡೆಯುವುದೋ ಕಾದುನೋಡಬೇಕಿದೆ.