ಮದ್ಯ ಮಾರಾಟ ವಿರೋಧಿಸಿದವರ ಮೇಲೆಯೇ ಪ್ರಕರಣ

| Published : Jul 04 2024, 01:10 AM IST

ಸಾರಾಂಶ

ಅಲ್ಲಿನ ನಿವಾಸಿಗಳು ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆ ಭಾಗದಲ್ಲಿ ಮದ್ಯ ಮಾರಾಟದಿಂದ ಮಹಿಳೆಯರಿಗೆ ಸೇರಿದಂತೆ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯ ಕುರಿತು ಪ್ರತಿಭಟನೆ ಮಾಡಿದ್ದರು

ಅಶೋಕ ಡಿ.ಸೊರಟೂರ ಲಕ್ಷ್ಮೇಶ್ವರ

ಪಟ್ಟಣದ ಜನ ನಿಬಿಡ ಪ್ರದೇಶದಲ್ಲಿ ಮದ್ಯ ಮಾರಾಟ ಮಾಡಬಾರದು. ಇಲ್ಲಿನ ನಿವಾಸಿಗಳು ಯುವಕರು, ಕುಟುಂಬಗಳೇ ಕುಡಿತದ ಚಟಕ್ಕೆ ಬಿದ್ದು ಬೀದಿ ಪಾಲಾಗುತ್ತವೆ. ಆದ್ದರಿಂದ ನಮ್ಮ ಓಣಿಯಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಭಟನೆ ನಡೆಸಿದ್ದ ಸಾರ್ವಜನಿಕರ ಮೇಲೆ ಅಬಕಾರಿ ಇಲಾಖೆಯೇ ಪ್ರಕರಣ ದಾಖಲಿಸಿದ ವಿಲಕ್ಷಣ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ.

ಇಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಧ್ವನಿ ಎತ್ತಿದವರ ಧ್ವನಿ ಅಡಗಿಸಲು ಪ್ರಯತ್ನ ಮಾಡಿದ್ದಲ್ಲದೇ, ಅಬಕಾರಿ ಇಲಾಖೆ ಅಧಿಕಾರಿಗಳೇ ಅಡ್ಡ ನಿಂತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಗದಗ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಎಫ್ಐಆರ್ ದಾಖಲು: ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂ. 13 ರಂದು ಎಫ್ಐಆರ್ ದಾಖಲಾಗಿದ್ದು, (ಸಂಖ್ಯೆ 9224, 2024) ಕಲಂ 143, 147, 341, 353, 504, 506 ಅಡಿಯಲ್ಲಿ 13 ಜನರು ಹಾಗೂ ಇನ್ನಿತರರು ಎಂದು ಪ್ರಕರಣ ದಾಖಲಿಸಲಾಗಿದೆ. ಸಧ್ಯಕ್ಕೆ ಈ ಪ್ರಕರಣದಲ್ಲಿ ಕೇವಲ 13 ಜನರ ಹೆಸರು ಮಾತ್ರ ಉಲ್ಲೇಖಿಸಲಾಗಿದೆ. ಇನ್ನಿತರರು ಎಂದರೆ ಅಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇನ್ನುಳಿದ ಮಹಿಳೆಯರನ್ನು ಸೇರಿಸುವ ಹುನ್ನಾರ ಅಡಗಿದೆ ಎನ್ನುತ್ತಾರೆ ಪ್ರಕರಣ ದಾಖಲಾಗಿರುವ ವ್ಯಕ್ತಿಗಳು.

ಯಾಕೆ ಹೀಗೆ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಅತ್ಯಂತ ಪ್ರಭಾವಿಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿತ್ತು. ಇದನ್ನು ಗಮನಿಸಿರುವ ಅಲ್ಲಿನ ನಿವಾಸಿಗಳು ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆ ಭಾಗದಲ್ಲಿ ಮದ್ಯ ಮಾರಾಟದಿಂದ ಮಹಿಳೆಯರಿಗೆ ಸೇರಿದಂತೆ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯ ಕುರಿತು ಪ್ರತಿಭಟನೆ ಮಾಡಿದ್ದರು. ಆದರೆ ವಿಚಿತ್ರವೆಂದರೆ ಸಾಮಾಜಿಕ ಹಿತಕ್ಕಾಗಿ ಹೋರಾಟ ಮಾಡಿದವರ ಧ್ವನಿ ಅಡಿಸುವುದು ಹಾಗೂ ಮುಂದೆ ಯಾರೂ ಬಾರ್, ಮದ್ಯದ ಅಂಗಡಿಗಳ ವಿರುದ್ಧ ಹೋರಾಟ ಮಾಡಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಪ್ರಕರಣ ದಾಖಲಿಸಲಾಗಿದೆ.

ಡಬ್ಬಾ ಅಂಗಡಿಗಳಲ್ಲಿ ಮದ್ಯ: ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಮದ್ಯ ಮಾರಾಟ ಜೋರಾಗಿದೆ. ಕುಡಿತಕ್ಕಾಗಿ ದೂರದ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ಹೋಗುವ ಅವಶ್ಯಕತೆ ಇಲ್ಲ, ಗ್ರಾಮೀಣ ಪ್ರದೇಶದ ಡಬ್ಬಾ ಅಂಗಡಿಗಳಲ್ಲಿ ಮದ್ಯ ಯಥೇಚ್ಛವಾಗಿ ಸಿಗುತ್ತದೆ. ಇನ್ನು ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟವು ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ತರುವ ಉದ್ಯೋಗವಾಗಿದೆ. ಪ್ರತಿನಿತ್ಯ ಸಾವಿರಾರು ರೂಪಾಯಿ ಲಾಭ ನೀಡುವ ದಂಧೆಯಾಗಿರುವುದರಿಂದ ಅಧಿಕಾರಿಗಳಿಗೆ ಮಾಮೂಲಿಯೂ ಸಿಗುತ್ತದೆ, ಅಲ್ಲದೆ ಪ್ರಭಾವಿ ಕುಳಗಳು ಕೃಪಾಕಟಾಕ್ಷ ಇದರ ಮೇಲೆ ಸದಾ ಇರುವುದರಿಂದ ಯಾರು ಭಯವೂ ಇಲ್ಲದೆ ನಿರ್ಭಯವಾಗಿ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿದೆ.

ಅಕ್ರಮ ಮದ್ಯ ಮಾರಾಟ ನಿಂತಿಲ್ಲ: ತಾಲೂಕಿನ ಯತ್ತಿನಹಳ್ಳಿ, ಯಲ್ಲಾಪೂರ, ಗೊಜನೂರ‌, ಮಾಡಳ್ಳಿ, ಸೂರಣಗಿ, ಪು.ಬಡ್ನಿ, ಬಟ್ಟೂರ, ಹುಲ್ಲೂರು, ಹರದಗಟ್ಟಿ, ಬಾಲೆಹೊಸೂರು, ಯಳವತ್ತಿ ಗೋನಾಳ, ಉಂಡೇನಹಳ್ಳಿ, ದೊಡ್ಡೂರ ಸೇರಿದಂತೆ ಬಹುತೇಕ ಗ್ರಾಮದದಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಗ್ರಾಮದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಅಕ್ರಮ ಮದ್ಯ ಮಾರಾಟ ನಿಂತಿಲ್ಲ ಎಂಬುದು ಕಟು ಸತ್ಯವಾಗಿದೆ.