ಹೈಕೋರ್ಟ್‌ಗಿಂತ 20 ಪಟ್ಟು ಹೆಚ್ಚು ಕೇಸ್‌ ನಿರ್ವಹಿಸುವ ಜಿಲ್ಲಾ ಕೋರ್ಟ್‌: ಸಂಜೀವ್‌ ಖನ್ನಾ

| Published : Mar 25 2024, 01:46 AM IST / Updated: Mar 25 2024, 11:17 AM IST

ಹೈಕೋರ್ಟ್‌ಗಿಂತ 20 ಪಟ್ಟು ಹೆಚ್ಚು ಕೇಸ್‌ ನಿರ್ವಹಿಸುವ ಜಿಲ್ಲಾ ಕೋರ್ಟ್‌: ಸಂಜೀವ್‌ ಖನ್ನಾ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ 21ನೇ ದ್ವೈವಾರ್ಷಿಕ ಸಮಾವೇಶ ಸಮಾರೋಪ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದಲ್ಲಿ ಪ್ರತಿವರ್ಷ ಹೈಕೋರ್ಟ್‌ಗಳು ನಿರ್ವಹಿಸುವುದಕ್ಕಿಂತ 20 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳು ನಿರ್ವಹಿಸುತ್ತಿವೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜೀವ್‌ ಖನ್ನಾ ತಿಳಿಸಿದ್ದಾರೆ.

ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ 21ನೇ ದ್ವೈವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಾಮಾನ್ಯವಾಗಿ ನಾವು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ತೀರ್ಪುಗಳ ಬಗ್ಗೆ ಗಮನ ಹರಿಸುತ್ತೇವೆ. ಆದರೆ, ಜಿಲ್ಲಾ ನ್ಯಾಯಾಲಯಗಳು ನಿರ್ವಹಣೆ ಮಾಡುತ್ತಿರುವ ಪ್ರಕರಣಗಳ ಪ್ರಮಾಣ ನೋಡಿದರೆ ನಿಜ ಸನ್ನಿವೇಶ ತಿಳಿಯುತ್ತದೆ. 

ಕಳೆದ ವರ್ಷ ಸುಪ್ರಿಂ ಕೋರ್ಟ್‌ 52,660 ಹಾಗೂ ದೇಶದ ಎಲ್ಲಾ ಹೈಕೋರ್ಟ್‌ಗಳು 20 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ನಿರ್ವಹಿಸಿವೆ. ಜಿಲ್ಲಾ ನ್ಯಾಯಾಲಯಗಳು ಬರೋಬ್ಬರಿ 237 ಲಕ್ಷ (2.37 ಕೋಟಿ) ಪ್ರಕರಣಗಳನ್ನು ನಿರ್ವಹಿಸಿವೆ. 

ಅಂದರೆ ಹೈಕೊರ್ಟ್‌ ನಿರ್ವಹಿಸಿರುವುದಕ್ಕಿಂತ 20 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲಾ ನ್ಯಾಯಾಲಯಗಳು ಪ್ರಕರಣಗಳನ್ನು ನಿರ್ವಹಿಸಿವೆ ಎಂದು ವಿವರಿಸಿದರು.

ಇನ್ನೂ ಪ್ರಕರಣಗಳ ವಿಲೇವಾರಿ ಪ್ರಮಾಣದಲ್ಲಿ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್‌ ನಡುವೆ ಸಾಕಷ್ಟು ಅಂತರವಿದೆ. ಕರ್ನಾಟಕದ ಮಟ್ಟಿಗೆ ಶೇ.14.85ರಷ್ಟು ಪ್ರಕರಣಗಳು ಮಾತ್ರ ಜಿಲ್ಲಾ ನ್ಯಾಯಾಲಗಳಲ್ಲಿ ವಿಲೇವಾರಿಗೆ ಬಾಕಿಯಿವೆ.

 ಹೈಕೋರ್ಟ್‌ನಲ್ಲಿ ಶೇ.85ರಷ್ಟು ಪ್ರಕರಣಗಳು ವಿಲೇವಾರಿಗೆ ಬಾಕಿಯಿದೆ. ಜಿಲ್ಲಾ ಹಂತದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ನ್ಯಾಯದಾನವಾಗುತ್ತಿದೆ ಎಂಬ ಸತ್ಯವನ್ನು ಅಂಗೀಕರಿಸಬೇಕು ಎಂದು ತಿಳಿಸಿದರು.

ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌, ನ್ಯಾಯಾಂಗವು ಸಂವಿಧಾನದ ರಕ್ಷಕವಾಗಿದೆ. ಆದರೆ, ಶ್ರಿಮಂತರಿಗೆ ದೊರೆಯುವ ವೇಗದಲ್ಲಿಯೇ ಬಡವರಿಗೂ ನ್ಯಾಯ ದೊರೆಯಬೇಕಿದೆ. 

ಕಡಿಮೆ ವೆಚ್ಚದಲ್ಲಿಯೇ ನ್ಯಾಯ ಸಿಗಬೇಕಿದೆ. ಅದನ್ನು ಖಾತರಿಪಡಿಸುವ ದಿಸೆಯಲ್ಲಿ ಹಲವು ಸುಧಾರಣೆಗಳನ್ನು ಶಾಸನಸಭೆ ತರುತ್ತಿದೆ. 

ಸಿವಿಲ್‌ ಪ್ರಕ್ರಿಯಾ ಸಂಹಿತೆ ಕಾಯ್ದೆ-2023ರಲ್ಲಿ ತಿದ್ದುಪಡಿ ತಂದು, ರೈತ ಹಾಗೂ ಆರ್ಥಿಕ ದುರ್ಬಲ ವರ್ಗದ ವ್ಯಕ್ತಿ ದಾವೆ ಹೂಡಿದರೆ, ನ್ಯಾಯಾಲಯವು ಅದರ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ ವಿಲೇವಾರಿ ಮಾಡುವ ನಿಯಮ ರೂಪಿಸಲಾಗಿದೆ. ಈ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು 2024ರ ಫೆ.18ರಂದು ಅಂಕಿತ ಹಾಕಿದ್ದಾರೆ. 

ಮಾ.4ರಿಂದ ಕಾಯ್ದೆ ಜಾರಿಗೆ ಬಂದಿದೆ ಎಂದು ತಿಳಿಸಿದರು. ಸುಪ್ರಿಂಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್‌, ಕಳೆದ ನಾಲ್ಕು ವರ್ಷದಲ್ಲಿ ಕರ್ನಾಟಕದ ನ್ಯಾಯಾಂಗ ಅಧಿಕಾರಿಗಳು ಒಟ್ಟು 1,95,62,912 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. 

ಅದರಲ್ಲಿ 30,7,788 ನ್ಯಾಯಾಲಯದಲ್ಲಿ ಬಾಕಿಯಿದ್ದ, 1,65,55,164 ವ್ಯಾಜ್ಯ ಪೂರ್ವ ಪ್ರಕರಣಗಳಾಗಿವೆ. ಒಟ್ಟಾರೆ 13 ಸಾವಿರ ಕೋಟಿ ರು.ಪರಿಹಾರ ಒದಗಿಸಲಾಗಿದ್ದು, ಸರ್ಕಾರಕ್ಕೆ 9,586 ಕೋಟಿ ರು. ಉಳಿತಾಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಹರೀಶ, ಉಪಾಧ್ಯಕ್ಷೆ ವಿನೂತ ಬಿ.ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ನವೀನ್‌ ಉಪಸ್ಥಿತರಿದ್ದರು.

ಜಾಮೀನು ಅರ್ಜಿ ತ್ವರಿತವಾಗಿ ಇತ್ಯರ್ಥ ಮಾಡಿ: ನ್ಯಾ.ಖನ್ನಾ

ಕಳೆದ 2021ರಲ್ಲಿ ದೇಶದಲ್ಲಿ 1.47 ಕೋಟಿ ವ್ಯಕ್ತಿಗಳು ಬಂಧನಕ್ಕೆ ಒಳಗಾಗಿದ್ದಾರೆ. 2009ರಿಂದ 2022ರ ನಡುವೆ ವಿಚಾರಣಾಧೀನ ಕೈದಿಗಳ ಸಂಖ್ಯೆ ಶೇ.26ರಷ್ಟು ಹೆಚ್ಚಾಗಿದೆ. 2015-16ರಿಂದ 2021-22ರ ನಡುವೆ ಪ್ರತಿ ವರ್ಷವು ಹೈಕೋರ್ಟ್‌ ಮುಂದೆ ದಾಖಲಾಗುವ ಜಾಮೀನುಗಳ ಅರ್ಜಿಗಳ ವಿಲೇವಾರಿ ಪ್ರಮಾಣ ಸಹ ಹೆಚ್ಚುತ್ತಿದೆ. 

ಭಾರತದ ಎಲ್ಲಾ ಜೈಲುಗಳಲ್ಲಿನ ಕೈದಿಗಳ ಪೈಕಿ ಶೇ.75.8ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ. ಕರ್ನಾಟಕದಲ್ಲಿ 16,200ರ ಕೈದಿಗಳ ಪೈಕಿ 12,605 (ಶೆ.77.79 ) ವಿಚಾರಣಾಧೀನ ಕೈದಿಗಳು.

ಇದು ಉತ್ತಮ ಹಾಗೂ ಆರೋಗ್ಯಕರವಾದ ಸೂಚನೆಯಲ್ಲ. ಜಾಮೀನು ಪ್ರಕರಣಗಳು ಸ್ವತಂತ್ರ ವಿಚಾರ ಒಳಗೊಂಡಿವೆ. ಹಾಗಾಗಿ, ಜಾಮೀನು ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು ಹಾಗೂ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಪ್ರಮಾಣ ಕಡಿಮೆಗೊಳಿಸಬೇಕಿದೆ ಎಂದು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಸಲಹೆ ನೀಡಿದರು.