ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಹಣ್ಣುಗಳ ರಾಜ ಎಂದೇ ಕರೆಯುವ ಮಾವು ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ತರಹೇವಾರಿ ಬಣ್ಣಗಳಲ್ಲಿ ರಸವತ್ತಾಗಿ ಕಾಣುವ ಈ ಹಣ್ಣುಗಳನ್ನು ನೋಡಿದಾಕ್ಷಣ ಎಲ್ಲರಿಗೂ ತಿನ್ನುವ ಬಯಕೆ. ಅದರಲ್ಲೂ ಆಪೂಸ್ ಅಥವಾ ಅಲ್ಫಾನ್ಸೋ ಎಂದು ಕರೆಯುವ ಧಾರವಾಡದ ಮಾವು ಸುಪ್ರಿಸಿದ್ಧ.ಧಾರವಾಡ ಮಲೆನಾಡು ಭಾಗದ ಮಣ್ಣು, ನೀರು, ಹವಾಗುಣ ಹಾಗೂ ಇತರ ಸಂಪನ್ಮೂಲಗಳ ಫಲವಾಗಿ ಮಾವು ಹೇಳಿ ಮಾಡಿಸಿದ ಬೆಳೆ. ಪಾರಂಪರಿಕವಾಗಿ ಮಾವನ್ನು ಧಾರವಾಡ, ಕಲಘಟಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಏಪ್ರಿಲ್ ತಿಂಗಳಿಗೆ ಶುರುವಾಗಿ ಜೂನ್ ತಿಂಗಳ ಆರಂಭಕ್ಕೆ ಮುಕ್ತಾಯವಾಗುವ ವಾಣಿಜ್ಯ ಬೆಳೆಯೂ ಈ ಮಾವು.
ದುಬಾರಿ ಮಾವುಕಳೆದ ಐದಾರು ವರ್ಷಗಳ ಹಿಂದೆ ಮಾವು ಬಂಗಾರದ ಬೆಳೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಾವು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಈ ವರ್ಷವೂ ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಹೀಗಾಗಿ ಮಾವಿನ ಕಾಯಿ ಹಾಗೂ ಹಣ್ಣಿನ ದರ ತುಸು ಹೆಚ್ಚಾಗಿಯೇ ಇದೆ. ಸದ್ಯ ಪ್ರತಿ ಟ್ರೇ ಆಪೂಸ್ (ಅಂದಾಜು 100 ಕಾಯಿಗಳು) ₹ 2000-2500 ವರೆಗೆ ಮಾರಾಟವಾಗುತ್ತಿದೆ. ಹಾಗೆಯೇ, ಹಣ್ಣು ಒಂದು ಡಜನ್ (12 ಹಣ್ಣುಗಳು) ₹500-600 ವರೆಗೆ ಮಾರಾಟವಾಗುತ್ತಿದೆ. ಮಾವಿನ ಸುಗ್ಗಿ ಬಂದಂತೆಲ್ಲ ದರ ಕಡಿಮೆ ಆಗುವ ಸಾಧ್ಯತೆಯೂ ಇದೆ. ಇಳುವರಿ ತೀರಾ ಕಡಿಮೆಯಾದರೆ ದರ ಇನ್ನೂ ಹೆಚ್ಚಾದರೂ ಅಚ್ಚರಿ ಏನಿಲ್ಲ.
ಲಾಭದಲ್ಲಿ ದಲ್ಲಾಳಿಗಳುಪ್ರತಿ ಬಾರಿ ಧಾರವಾಡದಲ್ಲಿ ಬೆಳೆಗಾರರಿಂದ ತೋಟ ಅಥವಾ ಕಾಯಿ ಪಡೆದ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆಯೇ ಹೊರತು ಮಾವು ಬೆಳೆದ ರೈತನಿಗೆ ಅಷ್ಟೇನೂ ಲಾಭವಾಗುತ್ತಿಲ್ಲ. ವರ್ಷಪೂರ್ತಿ ಮಾವಿನ ಮರಗಳನ್ನು ಎಷ್ಟೇ ಜೋಪಾನ ಮಾಡಿದರೂ ಡಿಸೆಂಬರ್ ವೇಳೆ ಹೂ ಬಿಡುವಾಗ, ಜನವರಿ-ಫೆಬ್ರುವರಿ ತಿಂಗಳಲ್ಲಿ ಕಾಯಿ ಆಗುವಾಗ ಹಾಗೂ ಆದ ನಂತರದಲ್ಲಿ ವಾತಾವರಣ ವೈಪರೀತ್ಯದಿಂದ ಮಾವು ಬೆಳೆ ನಷ್ಟಕ್ಕೆ ಒಳಗಾಗಿ ಬೆಳೆಗಾರರು ಕೈ ಸುಟ್ಟುಕೊಂಡಿರುವ ಹಲವು ಉದಾಹರಣೆಗಳಿವೆ. ಈ ಬೆಳೆಗೆ ಸಾವಿರಾರು ರುಪಾಯಿ ಬೆಳೆಹಾನಿ ತುಂಬಿದಿದ್ದರೂ ಈ ವರ್ಷ ತುಂಬಿದಷ್ಟು ಪರಿಹಾರ ಬರದೇ ಇರುವುದು ಬೆಳೆಗಾರರ ದುರದೃಷ್ಟವೇ ಸರಿ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಾವು ಬೆಳೆಗಾರರು ಮಾವಿನ ಗಿಡಗಳನ್ನು ಕಟಾವು ಮಾಡಿ ಅದೇ ಜಾಗದಲ್ಲಿ ಗೋಡಂಬಿ, ಅಡಕೆ ಹಾಗೂ ಬಾಳೆ ಬೆಳೆಯುತ್ತಿರುವ ಉದಾಹರಣೆಗಳೂ ಇವೆ.
ನಿಷ್ಪ್ರಯೋಜಕ ಯೋಜನೆಈ ಮಧ್ಯೆಯೂ ಕೆಲವು ಬೆಳೆಗಾರರು ತಮ್ಮದೇ ಗುಂಪು ರಚಿಸಿಕೊಂಡು ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಂಡು ಕೆಲವು ವರ್ಷಗಳಿಂದ ಧಾರವಾಡದ ಮಂದಿಗೆ ರುಚಿಕರ ಹಾಗೂ ಗುಣಮಟ್ಟದ ಮಾವು ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಫಲವಾಗಿ ಇದೇ ಮೇ 1ರಿಂದ ಒಂದು ತಿಂಗಳು ಕಾಲ ಗಾಂಧಿಶಾಂತಿ ಪ್ರತಿಷ್ಠಾನ ಕೇಂದ್ರದಲ್ಲಿ ಮಾವು ಮೇಳ ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ತೋಟಗಾರಿಕೆ ಇಲಾಖೆ ಈ ಮುಂಚೆ ಮಾಡುತ್ತಿತ್ತು. ಕೆಲವು ವರ್ಷಗಳಿಂದ ಮಾವು ಮೇಳವನ್ನು ಕೈ ಬಿಟ್ಟಿದೆ. ಧಾರವಾಡ ಭಾಗದಲ್ಲಿ ಅತ್ಯಧಿಕ ಮಾವು ಬೆಳೆಯ ಹಿನ್ನೆಲೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಮಾವು ಆಯ್ಕೆ ಮಾಡಲಾಗಿದೆ. ಆದರೆ, ಯಾವ ಬೆಳೆಗಾರರಿಗೂ ಇದು ಎಷ್ಟರ ಮಟ್ಟಿಗೆ ತಲುಪಿದೆ? ಎಷ್ಟು ಪ್ರಯೋಜನವಾಗಿದೆ ಎಂಬುದು ಮಾತ್ರ ನಿಗೂಢವಾಗಿದೆ.ಪೇಢೆ ತರಾ ಮಾವು ಪ್ರಸಿದ್ಧಿ ಪಡೆಯಲಿ
ಮಾವು ಬೆಳೆಗಾರರು ಒಗ್ಗೂಡಿ ತಮ್ಮ ಹಣ್ಣನ್ನು ತಾವೇ ನೇರ ಮಾರಾಟ ಮಾಡಲು ಧೈರ್ಯದಿಂದ ಮುಂದೆ ಬರಬೇಕು. ಧಾರವಾಡ ಮಾವಿಗೆ ಇಡೀ ಪ್ರಪಂಚದಲ್ಲಿಯೇ ತುಂಬ ಬೆಲೆ ಇದೆ. ಇದಕ್ಕೆ ಪ್ರತ್ಯೇಕ ಬ್ರ್ಯಾಂಡ್ ಇರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರತ್ನಾಗಿರಿ ಆಪೂಸ್ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಗುಣಮಟ್ಟದ ಹಣ್ಣು, ರೈತ ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಬಳಕೆದಾರರು ಮುಂದೆ ಬರಬೇಕಿದೆ. ಬೆಳೆಗಾರ ಮತ್ತು ಬಳಕೆದಾರ ಇಬ್ಬರಿಗೂ ನ್ಯಾಯ ಸಿಗಬೇಕು. ಉತ್ತಮ ಮಾವು ಬೇಸಾಯ, ಉತ್ಪಾದನೆ, ತಾಂತ್ರಿಕತೆಗಳ ಅಳವಡಿಕೆ, ಸಂಸ್ಕರಣಾ ಕೌಶಲ್ಯ, ಮಾರುಕಟ್ಟೆ ಜಾಣತನ, ರಫ್ತು ಜ್ಞಾನ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಸಾರ್ವಜನಿಕರ ಬೆಂಬಲ ದೊರೆತರೆ ಧಾರವಾಡ ಮಾವು ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಧಾರವಾಡ ಫೇಡೆ ರೀತಿಯಲ್ಲಿ ಧಾರವಾಡ ಮಾವು ಸಹ ಜಗತ್ತಿನಾದ್ಯಂತ ಪ್ರಸಿದ್ಧಿ ಆಗಲಿದೆ ಎಂದು ವಾಲ್ಮಿ ನಿರ್ದೇಶಕರು, ಸ್ವತಃ ಮಾವು ಬೆೆಳೆಗಾರರೂ ಆದ ಡಾ. ರಾಜೇಂದ್ರ ಪೋದ್ದಾರ ಹೇಳುತ್ತಾರೆ. ಕಾಣೆಯಾದ ಜವಾರಿ ತಳಿಗಳು..ಆಪೂಸ್ ಮಾವಿನ ಹಣ್ಣಿನ ಭರಾಟೆಯಲ್ಲಿ ಧಾರವಾಡ ಸುತ್ತಲು ಬೆಳೆಯುತ್ತಿದ್ದ ಜವಾರಿ ಮಾವು ಕಾಣೆಯಾಗಿದೆ. ಬಾಳಮಾವು, ಕಲಮಿ, ಸಣ್ಣೇರಿ, ಬೆಂಕಿ ಮಾವು, ಜೀರಗಿ ಮಾವು, ಪುಚ್ಚದ ಮಾವು, ವಿಭೂತಿ ಮಾವು, ಕಂಚಿ ಮಾವು, ಮಗಿ ಮಾವು, ಚೈತ್ರಾಪೈರಿ, ಸುಂದರಶಾ, ಮಾಂಕೂರ ಅಂತಹ ತರಹೇವಾರಿ ತಳಿಗಳಿದ್ದವು. ದುರಾದೃಷ್ಟವಶಾತ್ ಕಲಮಿ ಬಿಟ್ಟು ಉಳಿದ ತಳಿಗಳು ಧಾರವಾಡ ಭಾಗದಲ್ಲಿ ವಿರಳವಾಗಿವೆ. ಈ ಹಣ್ಣುಗಳು ಒಂದೊಂದು ಗುಣ ವಿಶೇಷತೆಗಳನ್ನು ಹೊಂದಿದ್ದು, ಬೇಸಿಗೆಯಲ್ಲಿ ದೇಹಕ್ಕೆ ಆಹ್ಲಾದ ನೀಡುವ ಹಣ್ಣುಗಳಾಗಿದ್ದವು.