ವಕ್ಫ್‌ ನಡೆಯಿಂದ ರೈತ ಸಮುದಾಯ ಆತಂಕ

| Published : Dec 18 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಬೃಹತ್ ಶೋಭಾ ಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಶೋಭಾ ಯಾತ್ರೆ ಗಾಂಧಿ ಚೌಕ್‌, ಬಸವೇಶ್ವರ ಚೌಕ್‌ ಮಾರ್ಗವಾಗಿ ಅಂಬೇಡ್ಕರ ವೃತ್ತದಲ್ಲಿ ಸಾರ್ವಜನಿಕರ ಸಭೆ ನಡೆಸಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಬೃಹತ್ ಶೋಭಾ ಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಶೋಭಾ ಯಾತ್ರೆ ಗಾಂಧಿ ಚೌಕ್‌, ಬಸವೇಶ್ವರ ಚೌಕ್‌ ಮಾರ್ಗವಾಗಿ ಅಂಬೇಡ್ಕರ ವೃತ್ತದಲ್ಲಿ ಸಾರ್ವಜನಿಕರ ಸಭೆ ನಡೆಸಿ ಒತ್ತಾಯಿಸಿದರು.

ಈ ವೇಳೆ ಸಂಘದ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷ ರವೀಂದ್ರ ಮೇಡೆಗಾರ ಮಾತನಾಡಿ, ರೈತರ, ಮಠಾಧೀಶರ, ದಲಿತರ, ಹಿಂದುಳಿದ ವರ್ಗದ ಹಾಗೂ ಶಾಲಾ ಕಾಲೇಜುಗಳ ಜಮೀನುಗಳು ವಕ್ಫ್‌ ಅಂತಾ ಪಹಣಿ ಉತಾರೆಗಳಲ್ಲಿ ಬರುತ್ತಿವೆ. ಈ ವಿಷಯದ ಬಗ್ಗೆ ಮನವಿ ಸಲ್ಲಿಸಲಾಗಿದೆ. ಆದರೂ ಸಂಪೂರ್ಣ ಪಹಣಿಯಲ್ಲಿನ ವಕ್ಫ್ ಹೆಸರು ರೈತರನ್ನು ಆತಂಕಕ್ಕೀಡು ಮಾಡಿದೆ. ಕಾರಣ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಈ ನಕ್ಷೆ ರದ್ದುಪಡಿಸುವಂತೆ ಪತ್ರ ಬರೆದು ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ನೀರಾವರಿಗಾಗಿ ಆಲಮಟ್ಟಿ ಡ್ಯಾಂ ಎತ್ತರಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಪುನರ್ವಸತಿ ಕಲ್ಪಿಸಿ ಕೃಷ್ಣ ಕೊಳ್ಳದ ೩ನೇ ಹಂತದ ಎಲ್ಲ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ೧ನೇ ಹಂತದಲ್ಲಿ ೨೮೦೦೦ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಸಿಗುತ್ತಿದೆ. ಇನ್ನುಳಿದ ಚಡಚಣ ಹಾಗೂ ಬಬಲೇಶ್ವರ ಭಾಗದ ೨೧,೦೦೦ ಹೆಕ್ಟೇರ್‌ಗೆ ನೀರಾವರಿ ಒದಗಿಸುವ ಕಾಮಗಾರಿಗೆ ಟೆಂಡರ್ ಕರೆಯಬೇಕು. ಹೊರ್ತಿ ಭಾಗದ ೧೯ ಕೆರೆಗಳನ್ನು ತುಂಬಿಸಲು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.

ದೋಣಿ ನದಿ ಹೂಳೆತ್ತಬೇಕು, ಚೆಕ್ ಡ್ಯಾಂ, ನಾಲಾ ಬಂಡಿಂಗ್ ಹಾಕಿ ನದಿಪಾತ್ರದ ಎರಡೂ ಬದಿ ಒಡ್ಡು ಹಾಕಿ ಗಿಡಗಳನ್ನು ನೆಡುವುದು ಆಗಬೇಕು. ಜತೆಗೆ ದೋಣಿ ನದಿಗೆ ಕೃಷ್ಣೆಯ ನೀರನ್ನು ಹರಿಸಬೇಕು. ಬೆಣ್ಣೆ ಹಳ್ಳದ ಹೂಳು ತೆಗೆದು ನದಿ ನೀರು ಹಳ್ಳಕ್ಕೆ ಹರಿಸಬೇಕು ಎಂದು ಬೇಡಿಕೆ ಇಟ್ಟರು. ಸಂಘದ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷ ಭೀಮಸೇನ್ ಕೊಕ್ಕರೆ ಮಾತನಾಡಿ, ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಿ ಸಕಾಲದಲ್ಲಿ ರೈತರ ಖಾತೆಗೆ ಹಣ ಪಾವತಿಯಾಗಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಗುರುನಾಥ್ ಬಗಲಿ ಹಾಗೂ ಉತ್ತರ ಪ್ರಾಂತ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ ಮಾತನಾಡಿ, ಕಂದಾಯ ಇಲಾಖೆಯಿಂದ ರೈತರಿಗೆ ಫೋಡಿ, ವಾರಸಾ, ವಾಟ್ನಿ, ಹದ್ದು ಬಸ್ತ್‌ ಮುಂತಾದವುಗಳ ನಿಯಮ ಸರಳೀಕರಣಗೊಳಿಸಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಕೊಳ್ಳಬೇಕು. ಸರ್ಕಾರವು ರೈತರ ಪಂಪ್‌ಸೆಟ್‌ಗಳಿಗೆ ಹೊಸ ನಿಯಮ ಜಾರಿಗೊಳಿಸಿದ್ದು, ಇದು ರೈತರಿಗೆ ಮಾರಕವಾಗಿದೆ. ಈ ಹಿಂದಿಂತೆಯೇ ರೈತರಿಗೆ ವಿದ್ಯುತ್ ಒದಗಿಸುವ ವ್ಯವಸ್ಥೆಯಾಗಬೇಕು. ರಾಜ್ಯದಾದ್ಯಂತ ಅತೀವೃಷ್ಟಿ, ಅನಾವೃಷ್ಟಿ ಹಾಗೂ ರೋಗಗಳಿಂದ ಹಾಳಾದ ಬೆಳೆಗಳು ತೊಗರಿ ಭತ್ತ, ಗೋವಿನ ಜೋಳ, ತೋಟಗಾರಿಕಾ ಬೆಳೆಗಳು ಸಾಕಷ್ಟು ಹಾನಿಗೀಡಾಗಿವೆ. ರೈತರಿಗೆ ಯೋಗ್ಯ ಪರಿಹಾರ ಹಾಗೂ ವಿಮೆ ಬೇಗನೆ ರೈತರ ಖಾತೆಗೆ ಜಮೆಯಾಗುವಂತೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಾಂತೇಶ ಬಾಗೇವಾಡಿ, ಅರುಣಗೌಡ ತೇರದಾಳ, ವೀರಪಾಕ್ಷ ಹಿರೇಮಠ, ಬಸಪ್ಪ ಚೌಧರಿ, ಕುಮಾರ ಯಡಹಳ್ಳಿ, ಈರಪ್ಪ ಗೋಟ್ಯಾಳ, ಭೀಮನಗೌಡ ಬಗಲಿ, ಚನ್ನಪ್ಪ ಗುಣದಾಳ, ಮಹಿಬೂಬಸಾಬ ಮುಲ್ಲಾ, ಸಂತೋಷ ರಾಠೋಡ, ಶರಣಪ್ಪ ತಾರಾಪೂರ, ಬಸಗೊಂಡ ಶಿರಮಗೊಂಡ, ಈರಣ್ಣ ಬಿರಾದಾರ, ನಂದಪ್ಪ ಸಾರವಾಡ, ಶಂಕ್ರಪ್ಪ ಸಾನಪಳ್ಳಿ, ಮಳಸಿದ್ದ ತಾರಾಪೂರ ಮುಂತಾದವರು ಉಪಸ್ಥಿತರಿದ್ದರು.--------------

ಕೋಟ್‌

ಎಂ.ಎಸ್.ಪಿ. ದರ ನಿಗದಿಪಡಿಸಿದಂತೆ ರೈತರ ಬೆಳೆಗಳನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ಶೀಘ್ರದಲ್ಲಿ ಸ್ಥಾಪಿಸಿ. ರೈತ ಬೆಳೆದ ಸಂಪೂರ್ಣ ಬೆಳೆ ಖರೀದಿ ಮಾಡಿ ವರ್ಷಪೂರ್ತಿ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡುವಂತೆ ಕ್ರಮ ಕೈಗೊಳ್ಳಬೇಕು. ದ್ರಾಕ್ಷಿ, ಒಣದ್ರಾಕ್ಷಿ ಬೆಳೆಗಾರರಿಗೆ ಎಂಎಸ್‌ಪಿ ಬೆಲೆ ನಿಗದಿಪಡಿಸಬೇಕು. ದಾಳಿಂಬೆ, ಲಿಂಬೆ ಮುಂತಾದ ಹೂವಿನ ಬೆಳೆಗಳಿಗೂ ಎಂ.ಎಸ್.ಪಿ. ದರ ನಿಗದಿಪಡಿಸಬೇಕು.

- ರವೀಂದ್ರ ಮೇಡೆಗಾರ, ಸಂಘದ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷ